ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೊರಟಾ ಕಡೆಗೆ ಇಡೀ ದೇಶವೇ ನೋಡುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಅವರು ಇಲ್ಲಿ ಲೋಕಾರ್ಪಣೆ ಮಾಡಿದ ಹುತಾತ್ಮರ ಸ್ಮಾರಕ ಮತ್ತು ವಲ್ಲಭಭಾಯ್ ಪಟೇಲ್ ಅವರ ಭವ್ಯ ಪ್ರತಿಮೆಗಳು ದೇಶದ ಗಮನ ಸೆಳೆದಿವೆ. ಹಾಗಿದ್ದರೆ ಗೊರಟಾ ಎಂಬ ಈ ಊರಿನಲ್ಲಿ ಇಂಥ ಸ್ಮಾರಕ, ಪ್ರತಿಮೆಗಳ ಸ್ಥಾಪನೆ ಯಾಕಾಗಿ ನಡೆದಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಗೊರಟಾ ಎನ್ನುವುದು ಸಾಮಾನ್ಯ ಗ್ರಾಮವಲ್ಲ. ಅದು ಕರ್ನಾಟಕದ ಜಲಿಯನ್‌ವಾಲಾಬಾಗ್. ಇಲ್ಲಿ “ರಝಾಕಾರ” ಎಂಬ ಮುಸ್ಲಿಂ ಸೈನಿಕರು ನಡೆಸಿದ ರಕ್ತಪಾತದ ಕಥೆ ಭಯಾನಕ. ಇಡೀ ಗ್ರಾಮವನ್ನು ಸುತ್ತುವರೆದು ಮಾಡಿದ ನರಮೇಧ ಚರಿತ್ರೆಯ ಭಯಾನಕ ಅಧ್ಯಾಯ. ಹಾಗಂತ ಇದು ನಡೆದದ್ದು ಸ್ವಾತಂತ್ರ್ಯಪೂರ್ವದಲ್ಲೇನೂ ಅಲ್ಲ. ಸ್ವಾತಂತ್ರ್ಯಾನಂತರ ನಮ್ಮದೇ ದೇಶದಲ್ಲಿ ನಡೆದ ಭಯಾನಕ ಹತ್ಯಾಕಾಂಡದ ಸಮಗ್ರ ಹಿನ್ನೆಲೆ ಇಲ್ಲಿದೆ.
ಕ್ರಾಂತಿ ಭೂಮಿ ಗೊರಟಾ: ಇಲ್ಲಿಂದ ಶುರುವಾಗುತ್ತದೆ ಘೋರ ಕಥನ
ಆಗಸ್ಟ್ 15, 1947ರಂದು ದೇಶ ಸ್ವಾತಂತ್ರದ ಸಂಭ್ರಮದಲ್ಲಿದ್ದರೆ ಬೀದರ್, ಗುಲ್ಬರ್ಗಾ, ರಾಯಚೂರುಗಳು ಸೌಭಾಗ್ಯದಿಂದ ವಂಚಿತವಾದವು. ಯಾಕೆಂದರೆ, ಈ ಮೂರು ಜಿಲ್ಲೆಗಳು ಹೈದ್ರಾಬಾದ್ ನಿಜಾಮನ ಸಂಸ್ಥಾನದಲ್ಲಿದ್ದವು. ದೇಶಕ್ಕೆ ಸ್ವಾತಂತ್ರ ಬಂದರೂ ಕೂಡ ಇವುಗಳಿಗೆ ಬರಲಿಲ್ಲ. ಅದಕ್ಕಾಗಿ ಈ ಪ್ರದೇಶ ಒಂದು ವರ್ಷ ಕಾಯಬೇಕಾಯಿತು. ಇವರಿಗೆ ಅಯಾಚಿತವಾಗಿ ಎಲ್ಲರಂತೆ ಸ್ವಾತಂತ್ರ್ಯ ಸಿಗಲಿಲ್ಲ. ಬದಲಾಗಿ ಅಪಾರ ಬೆಲೆ ತೆತ್ತು, ಪಡೆಯಬೇಕಾಯಿತು. ಆಗ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಮಾತ್ರ ಹೋರಾಟ ಮಾಡಬೇಕಾಯಿತು. ಹೀಗಾಗಿ ಹೈದ್ರಾಬಾದ್ ಕರ್ನಾಟಕ ಸ್ವಾತಂತ್ರ ಚಳುವಳಿ, ದೇಶದ ಸ್ವಾತಂತ್ರ್ಯ ಹೋರಾಟಕ್ಕಿಂತಲೂ ಒಂದು ಹೆಜ್ಜೆ ಹೆಚ್ಚಿನ ತೂಕ ಪಡೆದಿದೆ. ಭಾರತದ ಉಕ್ಕಿನ ಮನುಷ್ಯ ಸರದಾರ ವಲ್ಲಭಭಾಯಿ ಪಟೇಲರ ದೂರದೃಷ್ಟಿ ಹಾಗೂ ಅನೇಕ ಪ್ರಯತ್ನಗಳ ಫಲವಾಗಿ ಈ ಭಾಗಕ್ಕೆ ಸ್ವಾತಂತ್ರ್ಯ ಲಭಿಸಿತ್ತು. ಪಟೇಲರು ಹೈದ್ರಾಬಾದ್ ಕರ್ನಾಟಕದ ಸ್ವಾತಂತ್ರ ಶಿಲ್ಪಿಗಳೆಂದು ಗೌರವದಿಂದ ಕರೆಯಬೇಕು.
ಸ್ವಾತಂತ್ರ್ಯದ ಝೇಂಕಾರ
1942ರಲ್ಲಿ ಭಾರತಾದ್ಯಂತ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ತೀವ್ರತೆ ಮುಗಿಲು ಮುಟ್ಟಿತು. ಭಾರತ ಬಿಟ್ಟು ತೊಲಗಿ ಎಂಬ ಘೋಷ ದೇಶದ ತುಂಬಾ ಮಾರ್ದನಿಸಿತ್ತು. ಅದಕ್ಕೆ ಈ ಭಾಗವೂ ಹೊರತಾಗಿರಲಿಲ್ಲ. ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಅಸಂಖ್ಯಾತ ದೇಶ ಭಕ್ತರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು. ಆ ಹೊತ್ತಿನಲ್ಲಿ ಆರ್ಯ ಸಮಾಜದ ಸಂಘಟನೆ ಜೋರಾಗಿತ್ತು. “ವಂದೇ ಮಾತರಂ’ ಗೀತೆ ಸ್ವಾತಂತ್ರದ ಮೂಲ ಮಂತ್ರವಾಗಿತ್ತು. ಇದು ಹಳ್ಳಿ-ಪಟ್ಟಣದ ಮನೆ-ಮನೆಗಳಲ್ಲಿ ಸ್ವಾತಂತ್ರ ಜ್ಯೋತಿ ಹೊತ್ತಿಸಿತು.
“ವಂದೇ ಮಾತರಂ” ಸ್ವಾತಂತ್ರದ ರಣಕಹಳೆಯಾಗಿತ್ತು. ಸ್ವಾಭಿಮಾನ, ರಾಷ್ಟ್ರಭಕ್ತಿಯ ಚೈತನ್ಯವಾಗಿತ್ತು. ಅಸಂಖ್ಯಾತ ದೇಶಭಕ್ತರ ಅಪ್ರತಿಮ ಹೋರಾಟ, ಬಲಿದಾನದ ಫಲವಾಗಿ ಸ್ವಾತಂತ್ರ್ಯ ಲಭಿಸಿತ್ತು. ಆ ಒಂದು ದೇಶದ ತುಂಬಾ ಸಂತಸ ಸಡಗರ ಸಂಭ್ರಮ. ಸಂತೋಷವನ್ನು ಹಂಚಿಕೊಳ್ಳಲು ಹೈದ್ರಾಬಾದ್ ನಿಜಾಮನ ಸಂಸ್ಥಾನದಲ್ಲಿ ಅವಕಾಶವಿರಲಿಲ್ಲ. ನಿರಂಕುಶ ಪ್ರಭುತ್ವ ಬ್ರಿಟಿಷರ ಹಾಗೂ ಪಾಕಿಸ್ತಾನಿಗಳ ಕುತಂತ್ರದಿಂದ ಹೈದರಾಬಾದ್ ನಿಜಾಮ ಸ್ವತಂತ್ರ ರಾಷ್ಟ್ರ ನಿರ್ಮಾಣದ ಕನಸು ಕಾಣುತ್ತಿದ್ದ. ಇದು ಲಕ್ಷಾಂತರ ಹಿಂದೂಗಳ ಜೀವನಕ್ಕೆ ಕಂಟಕವಾಗಿ ಪರಿಣಮಿಸಿತ್ತು.
ತಿರಂಗಾ ಧ್ವಜ
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂತಸದಲ್ಲಿ ಈ ಪ್ರದೇಶದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಅಲ್ಲಲ್ಲಿ ‘ತಿರಂಗಾ ಧ್ವಜʼ ಹಾರಿಸಿ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸುತ್ತಿದ್ದರು. ಇದನ್ನು ಹೈದರಾಬಾದ್ ನಿಜಾಮ ನಿಷೇಧಿಸಿ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದ. ಆಗ ಈ ಯೋಧರು ಭೂಗತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು, ಸಂಘಟನೆ ಪ್ರಾರಂಭಿಸಿದರು. ಅಲ್ಲಲ್ಲಿ ನಿಜಾಮನ ದುರಾಡಳಿತವನ್ನು ಪ್ರತಿರೋಧಿಸಿದರು. ಇದರಿಂದ ಕ್ಷುದ್ರಗೊಂಡ ನಿಜಾಮನ ಸರ್ಕಾರ ಅಂತಹವರನ್ನು ಬಂಧಿಸತೊಡಗಿದರು.
ಅದು ಕಾಸಿಂ ರಜ್ಜಿ ನೇತೃತ್ವದಲ್ಲಿ “ರಝಾಕಾರ” ಎಂಬ ಭಯೋತ್ಪಾದಕರಿಂದ ನಿಜಾಮ ಆಡಳಿತ ಇಸ್ಲಾಮೀಕರಣವಾಗಿತ್ತು. ರಾಜಧರ್ಮ ಇಸ್ಲಾಂ ಆಗಿತ್ತು. ಭಾಷೆ ಉರ್ದು, ಹಿಂದೂ ಧರ್ಮದ ಸರ್ವನಾಶ ಮಾಡುವುದೇ ಅವರ ಉದ್ದೇಶವಾಗಿತ್ತು.
ಈಗ ಗೊರಟಾ ಎಂಬ ಊರಿನ ಕಥೆ ಕೇಳೋಣ
ಗೊರಟಾ ಇಂದಿನ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಒಂದು ಸುಸಂಸ್ಕೃತ ಗ್ರಾಮ. ಸಮೃದ್ಧ ಸಾಂಸ್ಕೃತಿಕ ಪರಂಪರೆ ಹೊಂದಿರುವ ಇದು ಕಲ್ಯಾಣ ಚಾಲುಕ್ಯರ ಸಾಂಸ್ಕೃತಿಕ ರಾಜಧಾನಿಯಾಗಿ ಹೆಸರು ಪಡೆದಿತ್ತು. ಇಲ್ಲಿರುವ ಪ್ರಾಚೀನ ರುದ್ರೇಶ್ವರ ದೇವರಿಗೆ ಕಲ್ಯಾಣ ಚಾಲುಕ್ಯರು ಅನನ್ಯವಾಗಿ ನಡೆದುಕೊಂಡು ಅದರ ನಿತ್ಯಸೇವೆಗೆಂದು ಅನೇಕ ಭೂಮಿ ಸೀಮೆಗಳನ್ನು ದತ್ತಿ ನೀಡಿದ್ದಾರೆ. ಶಾಸನಗಳಲ್ಲಿ ಇದನ್ನು “ಅಗ್ರಹಾರ ಗೋರಂಟಿ” ಎಂದು ಕರೆಯಲಾಗಿದೆ. ಗೋರಂಟಿ ಪ್ರಸಿದ್ದ ಘಟಿಕಾಸ್ಥಾನ (ಸಂಗೀತ ವಿಶ್ವವಿದ್ಯಾಲಯ) ವಾಗಿತ್ತೆಂದು ಶಾಸನದಲ್ಲಿ ಹೇಳಲಾಗಿದೆ. ಶಾಸನಗಳ ತಯಾರಿಸುವ ಕಾರ್ಯಾಗಾರವೇ ಇಲ್ಲಿತ್ತೆನ್ನುವ ಕುತೂಹಲ ಶಾಸನೋಕ್ತವಾಗಿದೆ. ಸಂಗತಿಯು ಇಂದಿಗೂ ಗೋರಟಾ ಕಲೆ-ಸಂಗೀತ, ಸಾಹಿತ್ಯದ ಬೀಡಾಗಿ ಜನಜನಿತವಾಗಿದೆ.
ಹಿಂದೂಗಳೇ ವಾಸವಾಗಿದ್ದ ಗೊರಟಾದಲ್ಲಿ ಮುಂದೆ ಬರೀದ ಷಾಯಿ (ಬೀದ)ಗಳ ಕಾಲದಲ್ಲಿ ಅಂದರೆ ಕ್ರಿ.ಶ. 1516 ಶತಮಾನದಲ್ಲಿ ಮುಸ್ಲಿಮರ ಆಗಮನವಾಗಿ ಗ್ರಾಮದಲ್ಲಿ ವಾಸಿಸತೊಡಗಿದರು. ಕಾಲಾನು ಚಕ್ರದಲ್ಲಿ ಹಿಂದೂ-ಮುಸ್ಲಿಂರ ಸಾಮರಸ್ಯದ ಬದುಕಿನಿಂದಾಗಿ ಗೋರಟಾ ಗ್ರಾಮ ಭಾವೈಕ್ಯತೆಗಳ ಸಂಗಮದಂತೆ ಶೋಭಿಸಿ ಮಾದರಿ ಗ್ರಾಮವಾಗಿತ್ತು. ಕರಿ ಮಣ್ಣಿನ ಭೂಮಿಯ ಕೃಷಿ ಸಂಪತ್ತಿನಿಂದ ಧನಲಕ್ಷ್ಮಿ ಅವಾಸವಾಗಿತ್ತು.
1928ರವರೆಗೆ ಗೋರಟಾದಲ್ಲಿ ಹಿಂದೂ-ಮುಸ್ಲಿಂ ಭ್ರಾತೃತ್ವದಲ್ಲಿ ಯಾವುದೇ ಧಕ್ಕೆ ಇರಲಿಲ್ಲ. ಮುಂದೆ ಸ್ವಾತಂತ್ರ ಸಂಗ್ರಾಮದ 3ನೇ ಘಟ್ಟದಲ್ಲಿ ಬ್ರಿಟೀಷರು ತಮ್ಮ ಒಡೆದು ಆಳುವ ನೀತಿಯಿಂದ ಹಿಂದೂ-ಮುಸ್ಲಿಮರಲ್ಲಿ ವಿರಸ ಮೂಡಿಸಿ ಒಡಕುಂಟು ಬ್ರಿಟಿಷರು ಮಾಡಿ ವೈರತ್ವ ತಂದಿಟ್ಟರು, ಓಲೈಸತೊಡಗಿದರು.
ನಿಜಾಮನು ಕೂಡಾ ಇಂಗ್ಲಿಷರನ್ನು ಓಲೈಸತೊಡಗಿದರು. ಇಲ್ಲಿದ್ದ ಪ್ರತಿಶತ 87ರಷ್ಟಿದ್ದ ಹಿಂದೂಗಳನ್ನು ವಿನಾಕಾರಣ ದ್ವೇಷಿಸತೊಡಗಿದರು. ಹಿಂದೂ ವಿರೋಧಿ ಆಡಳಿತ ಜಾರಿಗೆ ತಂದನು. ಇದುವೇ ಮುಂದಿನ ಎಲ್ಲ ಅನಾಹುತಕ್ಕೆ ನಾಂದಿಯಾಯಿತು. ಹೀಗಾಗಿ ಮುಸ್ಲಿಮರು ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸತೊಡಗಿದರು. ಹಿಂದೂಗಳು ಭಯಭೀತರಾದರು. ಹಿಂದೂಗಳ ಮೇಲೆ ವಿನಾಃಕಾರಣ ಕೊಲೆ, ಸುಲಿಗೆ, ಮಾನ ಹಗರಣದಂತ ಅನ್ಯಾಯಗಳು ನಡೆಯತೊಡಗಿದವು. ವಿರುದ್ಧ ಧ್ವನಿ ಎತ್ತುವುದಕ್ಕೂ ಸಾಧ್ಯವಿರಲಿಲ್ಲ. ಇದರ ಹಿಂದೂಗಳು ಬಹುಸಂಖ್ಯಾತರಾಗಿದ್ದರು ಅಸಹಾಯಕರಾಗಿ ನರಕ ಯಾತನೆ ಅನುಭವಿಸಿದರು. ಅವರ ಕ್ರೌರ್ಯ ಎಷ್ಟಿತ್ತೆಂದರೆ ಎಂತಹ ನೀಚ ಕಾರ್ಯಕ್ಕೂ ಅವರು ಕೈ ಹಾಕುತ್ತಿದ್ದರು.
ಮಸೀದಿ ಪ್ರಕರಣದಿಂದ ತಿರುವು
ನಿಜಾಮನ ಆಡಳಿತ ಇರುವುದರಿಂದ ದಬ್ಬಾಳಿಕೆಯಂತೂ ನಿರಂತರ ಆಕ್ರಮಣ ನಡೆದಿತ್ತು. ಹಿಂದೂಗಳ ಮೇಲೆ ಅನ್ಯಾಯಗಳು ನಡೆಯುತ್ತಿದ್ದವು. ಪ್ರಧಾನಿ ಮಿಶ್‌ರಾಯಕ್ ಅಲಿಯ ಬಲಗೈ ಬಂಟ ಖಾಸಿಂ ರಜ್ಜಿಯ ಕೃಪಾಪೋಷಿತ ರಝಾಕಾರರು ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಖಾಸಿಂ ರಜ್ಜಿ ಇತ್ತೆ ಹಾಧುಲ್-ಮಿಸಲಿನ್ ಸಂಸ್ಥೆ ಹುಟ್ಟು ಹಾಕಿದ. ಇದು ರಝಾಕಾರರಿಗೆ ಜನ್ಮ ನೀಡಿತ್ತು. ರಝಾಕಾರ ದಂಗೆಕೋರರು ನಿರ್ವಹಿಸತೊಡಗಿದರು.
ಇವರು ಶ್ರೀಮಂತ ಹಿಂದೂಗಳನ್ನು ಉಗ್ರವಾಗಿ ಹಿಂಸಿಸುವುದು, ಕೊಲೆ, ಲೂಟಿ ಮಾಡುತ್ತಿದ್ದರು. ಹಿಂದೂ ಸ್ತ್ರೀಯರ ಮೇಲೆ ಅತ್ಯಾಚಾರವೆಸಗುತ್ತಿದ್ದರು. ಕೇಳಿದವರನ್ನು ನಿರ್ದಯವಾಗಿ ಹೊಡೆಯುತ್ತಿದ್ದರು. ಇವರ ಪಾಶವೀ ಕೃತ್ಯ ಕಂಡ ಜನತೆ ರಝಾಕಾರೆಂದರೆ ಭಯ ಬೀಳುತ್ತಿದ್ದರು.
ಗೊರಟಾದಲ್ಲಿ ಶ್ರಾವಣ ಮಾಸದಲ್ಲಿ ಯಥಾ ಪ್ರಕಾರ ಪ್ರತೀ ವರ್ಷದಂತೆ ಪುರಾಣದ ಕತೆಗಳ ನಾಟಕಗಳನ್ನು ಆಡುವ ಪರಂಪರೆ ಪ್ರಾರಂಭವಾಯಿತು. ಇದನ್ನು ಕೆಡಿಸಬೇಕೆಂದು ಮುಸ್ಲಿಂರು ಸಂಚು ನಡೆಸಿದರು. ಮಸೀದಿ ಹತ್ತಿರದ ದೇವಸ್ಥಾನದ ಆವರಣದಲ್ಲಿ ಪುರಾಣ ಕಥಾ ನಾಟಕ ನಿಶ್ಚಯವಾಗಿತ್ತು. ರಝಾಕಾರ ಬೆಂಬಲಿಗನೊಬ್ಬ ಮಸೀದಿ ಹತ್ತಿರ ಹೊಲಸು ಮಾಡಿ ಮಸೀದಿಯ ಕಲ್ಲು ಕೆಡವಿ ಹಾಕಿದ. ಮರುದಿನ ಇದನ್ನು ನೋಡಿದ ಕೆಲ ಮುಸ್ಲಿಮರು ಗಲಾಟೆ ಮಾಡಿದರು. ನಾಟಕ ನೋಡಲು ಜನಸಂದಣಿ ನೆರೆದಿತ್ತು.
ಇನ್ನೇನು ನಾಟಕ ಶುರುವಾಗಬೇಕಿತ್ತು. ನಾಟಕದ ಪರದೆಯ ಮೇಲೆ ‘ವಂದೇ ಮಾತರಂ’ ಎಂದು ಬರೆಯಲಾಗಿತ್ತು. ಆಗ ಮುಂದೆ ಬೆಂಬಲಿಗರೊಂದಿಗೆ ಕೂತಿದ್ದ ಇಸಾಮುದ್ದೀನ್ ಎದ್ದು ನಿಂತು “ವಂದೇ ಮಾತರಂ” ಬರೆದಿರುವುದನ್ನು ತೆಗೆಸಿದರೆ ಮಾತ್ರ ನಾಟಕವಾಡಲು ಬಿಡುತ್ತೇನೆಂದು ಗಲಾಟೆ ಮಾಡಿದ. ಇದರಿಂದ ಗದ್ದಲ ಪ್ರಾರಂಭವಾಯಿತು. ಇದನ್ನು ಬರೆಸಿದ ರಾಚಯ್ಯ ಸ್ವಾಮಿ ಅದನ್ನು ಪ್ರಾಣ ಹೋದರೂ ನಾನು ತೆಗೆಯುವುದಿಲ್ಲವೆಂದರು.
ಹೀಗಾಗಿ ಅರ್ಧಗಂಟೆ ವಾದಗಳು ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋದೀತೆಂದು ಭಯಗೊಂಡ ಸಂಘಟಕರು ರಾಚಯ್ಯಸ್ವಾಮಿಯವರ ಮನವೊಲಿಸಿ ತೆಗೆಸಿದರು. ಕೆಂಡಾಮಂಡಲವಾದ ರಾಚಯ್ಯ ಸ್ವಾಮಿ ನಾಟಕವೇ ಬೇಡವೆಂದರಂತೆ. ಆದರೆ ಅವರನ್ನು ಸಮಾಧಾನ ಪಡಿಸಲಾಯಿತು. ನಾಟಕ ಪ್ರಾರಂಭವಾಯಿತು.
ಕೆಲ ದೃಶ್ಯಗಳಾದ ಮೇಲೆ ರಾಚಯ್ಯ ಸ್ವಾಮಿ ಪಾತ್ರ ಬಂತು. ರಂಗದ ಮೇಲೆ ಬಂದ ತಕ್ಷಣ “ವಂದೇ ಮಾತರಂ, ವಂದೇ ಮಾತರಂ, ವಂದೇ ಮಾತರಂ,” ಎಂದು 3 ಸಾರಿ ಜೋರಾಗಿ ಹೇಳಿದರು. ಇದ ರಿಂದ ಇಸಾಮುದ್ದೀನ್ ಕ್ರುದ್ಧನಾದನು. ಜನ ರಾಚಯ್ಯನವರನ್ನು ಬೆಂಬಲಿಸಿದರು. ಇಸಾಮುದ್ದೀನ್ ಸುಮ್ಮನೆ ಕೂತರೂ ಆತನ ಮಕ್ಕಳು, ಆನುಯಾಯಿಗಳು ಸುಮ್ಮನಿರಲಿಲ್ಲ. ಅವರು ಮಧ್ಯೆ ಮಧ್ಯೆ ಗಲಾಟೆ ಮಾಡುವುದು, ಹೆಣ್ಣು ಮಕ್ಕಳನ್ನು ಚುಡಾಯಿಸುವುದು ನಡೆದಿತ್ತು. ನಾಟಕದಲ್ಲಿ ರೇಣುಕ-ಬಿಜ್ಜಳನ ಮಠಪತಿ ಇವರು, ಗಲಾಟೆ ಸಹಿಸದೇ ತನ್ನಲ್ಲಿದ್ದ ಖಡ್ಗವನ್ನು ಹೊರಗೆ ತೆಗೆದು ರಂಗದಿಂದ ಜಿಗಿದು ಇವರ ಮೇಲೆ “ವಂದೇ ಮಾತರಂ” ಎನ್ನುತ್ತ ಮುಗಿಬಿದ್ದರು. ಗಲಾಟೆಯಲ್ಲಿ ನಾಟಕವೇ ನಿಂತು ಹೋಯಿತು.
ತಿರಂಗ ಧ್ವಜ ಪ್ರಕರಣ
ದೇಶಕ್ಕೆ ಸ್ವಾತಂತ್ರ ಬಂದಿದ್ದರೂ ಹೈದ್ರಾಬಾದ್ ನಿಜಾಮ ಸಂಸ್ಥಾನದಲ್ಲಿ ತಿರಂಗ ಧ್ವಜ ಹಾರಿಸುವುದನ್ನು ನಿಷೇಧಿಸಲಾಯಿತು. ಹಾರಿಸುವವರನ್ನು ಕೊಂದು ಹಾಕುವ ಕಾನೂನು ಜಾರಿ ಮಾಡಿತು. ಇದರಿಂದ ವಿಚಲಿತರಾಗದ ಸ್ವಾತಂತ್ರ ಯೋಧರು ಅಲ್ಲಲ್ಲಿ ರಾಷ್ಟ್ರ ಧ್ವಜ ಹಾರಿಸುತ್ತಿದ್ದರು. ಇದನ್ನು ಸಹಿಸದ ನಿಜಾಮ ಸರ್ಕಾರ ಇಂಥವರ ಮೇಲೆ ಕೊಲೆ, ಸುಲಿಗೆ, ರಾಷ್ಟ್ರ ದ್ರೋಹ ಮೊಕದ್ದಮೆ ಹೊರಿಸಿ ಬಂಧಿಸತೊಡಗಿತ್ತು. ಸಮಾಜದ ಮುಖಂಡರು ಗುಂಪುಗಳನ್ನು ಕಟ್ಟಿಕೊಂಡು ಭೂಗತರಾಗಿ ಸೈನಿಕ ತರಬೇತಿ ಪಡೆಯಹತ್ತಿದರು.
ಹೊನ್ನಾಳಿಯ ಭಾವುರಾವ್ ಪಾಟೀಲರ ನಾಯಕತ್ವದಲ್ಲಿ ಗೋರಟಾ ಮುಚಳಂಬ, ಹಾಲಗೋರ್ಟಾದ ಕೆಲವು ಮಂದಿ ಯೋಧರು ತಿರಂಗಾ ತಿರಂಗಾ ಧ್ವಜ ಧ್ವಜ ಹಾರಿಸುತ್ತಿದ್ದರು. ಗೊರಟಾದ ನಾಗಪ್ಪ ಹಳೆಂಬರ, ಕಾಶೆಪ್ಪ ಭಾಲ್ಕಿ, ಮಾರುತಿ ಮಡಿವಾಳ, ವಿಠೋಬಾ ನಿರೋಡೆ ಕೋಳಿ, ಸ್ಯಾಮರಾಯ ಪಟ್ಟೆ, ಮಹಾರುದ್ರಪ್ಪ ಪಟ್ಟೆ, ನರಸಿಂಗರಾವ್ ಥೆಂಗಳೆ ಮುಂತಾದವರು ಮುಂಚೂಣಿಯಲ್ಲಿದ್ದರು.
ಮಾರುತಿ ಮಡಿವಾಳ ಪತಂಗ (ಗಾಳಿಪಟ)ದ ಮೇಲೆ “ವಂದೇ ಮಾತರಂ” ಎಂದು ಬರೆದು ಅದನ್ನು ಆಕಾಶದಲ್ಲಿ ಹಾರಿಸಿ ಮಾಳಿಗೆ ಮೇಲೆ ಕಟ್ಟಿದ್ದರು. ಇದನ್ನು ನೋಡಿ ಕೆಂಡಾ ಮಂಡಲವಾದ ಇಸಾಮುದ್ದೀನ್ ಇದನ್ನು ಯಾರು ಹಾರಿಸಿದ್ದಾರೆ ಎಂದು ಕೂಗಾಡಿ ಪತ್ತೆ ಹಚ್ಚಿ ಮಾರುತಿಯನ್ನು ಹಿಡಿದು ಅವರ ತಂದೆ ಹತ್ತಿರ ಒಯ್ದು ನಿನ್ನ ಮಗ ದೇಶದ್ರೋಹಿ ಇದ್ದಾನೆಂದು ಬೆದರಿಕೆ ಹಾಕಿ ಮಾರುತಿಯನ್ನು ಹಿಗ್ಗಾ ಮುಗ್ಗ ಬಡಿದ. ಗಾಳಿಪಟ ಇಳಿಸಿದ ಇಸಾಮುದ್ದೀನನ ಚೇರಾ ಫಕೀರ ಬಬಲ್ಯಾ ತಿರಂಗಾ ಧ್ವಜವನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ. ಕುಪಿತನಾದ ಮಾರುತೇಪ್ಪ ಘಾಟಬೋರಾಳದಲ್ಲಿ ತಿರಂಗಾ ಧ್ವಜ ಹಾರಿಸಿದರು. ವಿರೋಧಿಸಿದ ಇವರನ್ನು ಸಿಕ್ಕಾಪಟ್ಟೆ ಹೊಡೆದು ನೆಲಕ್ಕುರುಳಿಸಿದರು.
ಮರುದಿನ ಹಾಲಗೋರಟಾದಲ್ಲಿ ಹೊನ್ನಳ್ಳಿ ಭಾವುರಾವ್ ಪಾಟೀಲ ಬೆಂಬಲದಿಂದ ಮಾಡ್ಕೊಬಾ ಘೋರವಾಡೆ, ದೌಲತರಾವ್ ಘೋರವಾಡೆ ಸಹೋದರರು ಊರ ಮಧ್ಯ ತಿರಂಗಾ ಧ್ವಜ ಹಾರಿಸಿದರು. ಸುದ್ದಿ ತಿಳಿದ ತಕ್ಷಣ ಕುಪಿತನಾದ ಇಸಾಮುದ್ದೀನ್ ಪೊಲೀಸರನ್ನು ಕರೆಸಿದ. ಹಾಲಗೋರ್ಟಾಕ್ಕೆ ಬಂದ ನಿಜಾಮನ ಪೊಲೀಸರು ಸಹೋದರರನ್ನು ಹೊಡೆದು ಬಂಧಿಸಿ, ಧ್ವಜಾ ಇಳಿಸಿ ಅವರನ್ನು ಎಳೆದುಕೊಂಡು ಹೊರಟ.
ಹಾಗೆ ಹೋಗುವಾಗ ಮನೆಯಲ್ಲಿದ್ದ ತಾಯಿಯೊಬ್ಬಳು ಗಂಡು ಗಚ್ಚಿ ಹಾಕಿಕೊಂಡು ಓಡಿಬಂದು ಸಿರ್ಸಿ ಅಮಿನ್‌ಸಾಬ್‌ನ ಕುದುರೆಯನ್ನು ಹಿಡಿದು ತಡೆದು, “ಧ್ವಜ ಇಳಿಸಿದಿಯಾ’ ಎಂದು ಕೇಳಿದಳು. ಕುಪಿತನಾದ ಅನಾನ್‌ಸಾಬ್ ಅವಳಿಗೂ ಏಟುಕೊಟ್ಟನು. ವಂದೇ ಮಾತರಂ ಎನ್ನುತ್ತ ಆ ವೀರ ವನಿತೆ ನೆಲಕ್ಕುರುಳಿದಳು. ಘೋವಾಡೆ ಸಹೋದರರನ್ನು ಜೈಲಿಗೆ ಹಾಕಿ ಇದಕ್ಕೆಲ್ಲ ಇಸಾಮುದ್ದೀನ್ ಮತ್ತು ಅವನ ಬೆಂಬಲಿಗರೇ ಕಾರಣ ಹಿಂಸಿಸಿದರು ಎಂದು ಜನಿಜನಿತವಾಯಿತು.
ಇದೆಲ್ಲಾ ಮಾಡಿಸಿದವನು ಭಾವುರಾವೇ ಎಂದ ಇಸಾಮುದ್ದೀನ್‌ನು ಅವನಿಗೆ ತಕ್ಕಪಾಠ ಕಲಿಸಬೇಕೆಂದು ನಿಶ್ಚಯ ಮಾಡಿಕೊಂಡು ಹೊಂಚು ಹಾಕಿ ಒಂದು ದಿನ ಬಾವುರಾವ್‌ನ ಮನೆಯನ್ನು ರಝಾಕಾರರಿಂದ ಲೂಟಿ ಮಾಡಿಸಿದನು. ಇದರಿಂದ ಕುಪಿತರಾದ ಆರ್ಯ ಸಮಾಜದವರು ಇದಕ್ಕೆ ಕಾರಣನಾದ ಇಸಾಮುದ್ದೀನನನ್ನು ಆರು ತಿಂಗಳ ಹೊಂಚು ಹಾಕಿ ಮುಚಳಂಭ-ಗೋರಟಾ ಮಧ್ಯ ಬುದ್ದೇವರ ಹಳ್ಳದಲ್ಲಿ ಹೋಳಿ ಹಬ್ಬದಂದು ಕೊಂದು ಹಾಕಿದರು. 40 ಬಂಡಿಗಾಡಿಗಳ ಬೆಂಗಾವಲಿನಲ್ಲಿ ಕಿರಾಣಿ ಸಾಮಾನು ತರಲು ಇಸಾಮುದ್ದೀನನು ಕಲ್ಯಾಣಕ್ಕೆ ಹೋಗಿ ಬರುತ್ತಿದ್ದನು. ಈ ಕೊಲೆಯೇ ಗೊರಾಟಾದ ರಝಾಕಾರರ ಹತ್ಯಾಕಾಂಡಕ್ಕೆ ಕಾರಣವಾಯಿತು.
ಇಸಾಮುದ್ದೀನನ ಕೊಲೆಯಾದ ನಂತರ ಗೊರಟಾದ ಹಿಂದೂಗಳಲ್ಲಿ ಭಯಭೀತಿ ವಾತಾವರಣ ನಿರ್ಮಾಣವಾಯಿತು. ಈತ ರಝಾಕಾರರ ನಾಯಕನಾಗಿದ್ದ. ಇದರಿಂದ ನಮ್ಮ ಮೇಲೆ ರಝಾಕಾರರು ಸೇಡು ತೀರಿಸಿಕೊಳ್ಳದೇ ಬಿಡುವವರಲ್ಲ ಎನ್ನುವುದು ಗ್ರಾಮಸ್ಥರ ಮಾತಾಗಿತ್ತು. ಊರಲ್ಲಿರುವ ಕೆಲ ಯೋಧರು ರಝಾಕಾರ ವಿರುದ್ಧ ಹೋರಾಡಲು ಸಿದ್ಧತೆಯೂ ನಡೆಸಿದ್ದರು. ಕೆಲದಿನ ಹುಸಿ ವಾರ್ತೆಗಳಿಂದ ಗ್ರಾಮಸ್ಥರ ಬದುಕು ದುಸ್ಥರವಾಗಿತ್ತು.
ರಝಾಕಾರರು ಯಾವಾಗ ಬಂದು ಎರಗುತ್ತಾರೋ ಎನ್ನುವ ಭಯ ಮನೆಮಾಡಿತ್ತು. ಆ ದಿನ ಬಂದೇ ಬಿಟ್ಟಿತು. ಮೇ 9, 1948 (ಚೈತ್ರ ವದ್ಯ ಅಮವಾಸ್ಯೆ) ರಂದು ಬೆಳಿಗ್ಗೆ 8 ಗಂಟೆಗೆ 3 ಸಾವಿರ ಜನ ರಝಾಕಾರರು ನಾಲ್ಕು ದಿಕ್ಕಿನಿಂದ ಘೋಷಣೆಗಳನ್ನು ಕೂಗುತ್ತಾ ಹಿಂದುಗಳ ಮೇಲೆ ದಾಳಿ ಮಾಡಿದರು. ಅಂದು ಸೂರ್ಯಗ್ರಹಣ ಬೇರೆ ಇತ್ತು.
ಬೆಳಿಗ್ಗೆ 8 ಗಂಟೆಗೆ ಘಾಟಬೋರಾಳ ಹಾದಿಗೆ ಎತ್ತುಗಳನ್ನು ತಗೊಂಡು ಹೋಗುತ್ತಿದ್ದು ಶಿವಪ್ಪಾ ಲಿಂಬಾಯಿ ಅವರನ್ನು ರಝಾಕಾರರು ಕೊಂದುಹಾಕಿದರು. ಇನ್ನೂ ಜೀವ ಇರುವಾಗಲೇ ಕಾಲಿಗೆ ಹಗ್ಗ ಕಟ್ಟಿ ಹುಲ್ಲಿನ ಬಣವೆಯೊಳಗೆ ಹಾಕಿ ಬೆಂಕಿ ಹಚ್ಚಿದರು. ಊರನ್ನು ಸುತ್ತುವರಿದು ಗೋಲಿಬಾರ್ ನಡೆಸಿದರು. ಈ ಭಯಂಕರವಾದ ಭೀಕರತೆಯಿಂದ ಕಂಗೆಟ್ಟು ಹೋದ ಜನರು ಪ್ರಾಣರಕ್ಷಣೆಗಾಗಿ ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಅವಿತುಕೊಂಡರು. ನೂರಾರು ಜನರು ಹಿರೇಮಠದಲ್ಲಿ, ಸಾವಿರಾರು ಜನರು ಮಹಾದಪ್ಪ ಡುಮಣೆ ಅವರ ಮನೆಯಲ್ಲಿ ರಕ್ಷಣೆ ಪಡೆದರು. ಹಿರೇಮಠದ ಮಾಳಿಗೆ ಮೇಲಿಂದ ಯುವಕರು ಕಲ್ಲು, ಕಾವಣಿ ಮುಖಾಂತರ ರಝಾಕಾರರನ್ನು ಎದುರಿಸಿದರು. ಇದರಿಂದ ರೊಚ್ಚಿಗೆದ್ದ ರಝಾಕಾರರು ಮತ್ತಷ್ಟು ಗುಂಡಿನ ದಾಳಿ ಮಾಡಿದರು.
ಏಟು ತಿಂದ ಎಮ್ಮಿ ಮಸ್ತಾನನು ಮಠದ ಬಾಗಿಲಿಗೆ ಬಂದು ಒಳಗಿದ್ದ ರಾಚಯ್ಯ ಸ್ವಾಮಿ ಅವರನ್ನು ಮೋಸದಿಂದ ಬಾಗಿಲು ತೆರೆವಂತೆ ಮನವೊಲಿಸಿದ. ನಂಬಿದ ರಾಚಯ್ಯ ಸ್ವಾಮಿ ಬಾಗಿಲ ತೆರೆದ ತಕ್ಷಣ ಎಮ್ಮಿ ಮಸ್ತಾನ ರಾಚಯ್ಯನವರ ಹೊಟ್ಟೆಯಲ್ಲಿ ಬರ್ಚಿಯಿಂದ ತಿವಿದು ಕೊಂದು ಹಾಕಿದ. ರಾಚಯ್ಯ ಸ್ವಾಮಿ ತಾಯಿ ತಂದೆಗೆ ಒಬ್ಬನೇ ಮಗ ವಿದ್ವಾಂಸರಾಗಿದ್ದರು.
1948ರ ಮೇ 9, 10ರಂದು ನಡೆದ ರಝಾಕಾರರ ಹತ್ಯಾಕಾಂಡದ ದಳ್ಳುರಿಯಲ್ಲಿ ಇಡೀ ಗೊರಟಾ ಗ್ರಾಮವೇ ಹೊತ್ತಿ ಉರಿಯಿತು. ನಿರ್ದಯಿಗಳಾದ ರಝಾಕಾರರು ಮಕ್ಕಳು, ಹೆಂಗಸರು, ಮುದುಕರು ಎನ್ನದೇ ಎಲ್ಲರನ್ನು ಕ್ರೂರವಾಗಿ ಹಿಂಸಿಸಿದರು. ಕೈಗೆ ಸಿಕ್ಕವರನ್ನು ಬರ್ಬರವಾಗಿ ಕೊಂದು ಹಾಕಿದರು. ಒಂದೇ ದಿನದಲ್ಲಿ ನೂರಾರು ಜನ ಪ್ರಾಣ ಕಳೆದುಕೊಂಡರು. ಸಾವಿರಾರು ಜನ ಮನೆ-ಮಠಗಳನ್ನು ಕಳೆದುಕೊಂಡರು. ರಝಾಕಾರರ ಹಚ್ಚಿದ ಬೆಂಕಿಯಿಂದಾಗಿ ಇಡೀ ಊರಿಗೆ ಊರೇ ಹತ್ತಿ ಉರಿಯಿತು. ಜನ ಪ್ರಾಣ ಭಯಭೀತಿಯಿಂದ ಮನೆ-ಮಠಗಳನ್ನು ಬಿಟ್ಟು ರಾತ್ರೋರಾತ್ರಿ ಎತ್ತೆಂದರತ್ತ ಚದುರಿ ಹೋದರು. ಒಬ್ಬರ ಜನ-ದನಕರುಗಳ ಶವ ಇಲ್ಲದಂತಾಯಿತು. ಅವುಗಳ ಸುದ್ದಿ ಒಬ್ಬರಿಗಿಲ್ಲದಂತಾಯಿತು. ಸತ್ತ ಮಾಡಲು ಯಾರೂ ದುರ್ವಾಸನೆಯಿಂದ ಊರ ಮೇಲೆ ಹದ್ದು ಕಾಗೆಗಳು ಹಾರಾಡುವಂತಾಯಿತು. ಊರು ನಾಯಿ ನರಿಗಳ ಕೇರಿಯಾಯಿತು. ಹೀಗೆ ರಝಾಕಾರ ಭಯೋತ್ಪಾದಕರ ಕ್ರೌರ್ಯಕ್ಕೆ ಬಲಿಯಾಗಿ ಗೊರಟಾ ನಲುಗಿತು. ಈ ಹಿನ್ನೆಲೆಯಲ್ಲಿ ಗೊರಾಟಾ ಗ್ರಾಮವನ್ನು ‘ಕರ್ನಾಟಕದ ಜಲಿಯನ್ ವಾಲಾಬಾಗ್” ಎಂದೇ ಗುರುತಿಸಲಾಗುತ್ತಿದೆ.
ಇದಿಷ್ಟು ಕ್ರೌರ್ಯದ ಕಥೆ. ಇಲ್ಲೊಂದು ಸ್ಮಾರಕ ಕಟ್ಟಬೇಕು ಎಂದು ನಿರ್ಧರಿಸಿ 2014ರಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಅಂದು ಬಿಜೆಪಿ ಯುವಮೋರ್ಚಾದ ಒತ್ತಾಸೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಂಕುಸ್ಥಾಪನೆ ಮಾಡಿದವರು ಅಮಿತ್ ಶಾ. ಈಗ ಸ್ಮಾರಕವನ್ನು ಉದ್ಘಾಟಿಸಿದ್ದೂ ಅವರೇ. ದೇಶವನ್ನು ಜೋಡಿಸಿದ ಪಟೇಲರ ಪ್ರತಿಮೆಯೂ ಇದೇ ಜಾಗದಲ್ಲಿ ನಿರ್ಮಾಣವಾಗಿದೆ.
ಇದನ್ನೂ ಓದಿ : Amit shah visit : ಅಭಿವೃದ್ಧಿಯ ಬಿಜೆಪಿ ಬೇಕಾ? ಭ್ರಷ್ಟಾಚಾರಿ ಕಾಂಗ್ರೆಸ್ ಬೇಕಾ?; ಅಮಿತ್ ಶಾ ಪ್ರಶ್ನೆ