ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ಹೊಲದಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನ್ (Electronic Balloon) ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.
ಬಿಳಿ ಬಣ್ಣದ ಎಲೆಕ್ಟ್ರಾನಿಕ್ ಬಲೂನ್ ಇದಾಗಿದ್ದು, ಇದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಲೂನ್ ಎಲ್ಲಿಂದ ಬಂದಿದೆ? ಯಾವಾಗ ಹಾರಿ ಬಂದಿದೆ? ಯಾರು ಬಿಟ್ಟಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬಲೂನ್‌ನಲ್ಲಿ ಕೆಲವು ಎಲೆಕ್ಟ್ರಾನಿಕ್ ಮಷಿನ್‌ಗಳು ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೂ ಭೇಟಿ ನೀಡಿದ್ದಾರೆ. ಇದು ಬಿಳಿ ಬಣ್ಣದ ಬಲೂನ್ ಆಗಿದ್ದು, ಪೊಲೀಸರು ಅದನ್ನು ಒಡೆದು ನೋಡಿದಾಗ ಒಳಗೆ ಎಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿವೆ. ಅದರಲ್ಲಿ GRAW ಕಂಪನಿಗೆ ಸೇರಿದ ವಸ್ತುಗಳು ಸಿಕ್ಕಿವೆ.
ದೊರೆತ ಕೆಲವು ಉಪಕರಣಗಳನ್ನು ಪರಿಶೀಲನೆ ನಡೆಸಿದಾಗ ಇದು ಗ್ರಾವ್ ರೇಡಿಯೋಸೊಂಡೆಸ್ ಎಂಬ ಕಂಪನಿಯ ಉಪಕರಣಗಳು ಎಂಬುದು ಗೊತ್ತಾಗುತ್ತದೆ. ಗ್ರಾವ್ ರೇಡಿಯೋಸೊಂಡೆಸ್‌ನಿಂದ ಹವಾಮಾನ ಉಪಕರಣಗಳ ಕ್ಷೇತ್ರದಲ್ಲಿ ಹಲವಾರು ಆವಿಷ್ಕಾರಗಳನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ನಿಟ್ಟಿನಲ್ಲಿ ಯಾವುದಾದರೂ ಅಧ್ಯಯನಕ್ಕಾಗಿ ಕಂಪನಿ ಹಾರಿ ಬಿಟ್ಟಿರುವ ಬಲೂನ್ ಇದಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈಗ ಪೊಲೀಸರು ಈ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.