ಕಡಬ (ದಕ್ಷಿಣ ಕನ್ನಡ): ರಸ್ತೆಯಲ್ಲಿ ಅಲೆದಾಡುತ್ತಾ ಕಂಡ ಕಂಡವರನ್ನು ಬೆನ್ನಟ್ಟಿ ಕಿರುಕುಳ ಕೊಡುವ ನಾಯಿಗಳ ಬಗ್ಗೆ, ಬೀಡಾಡಿ ದನಗಳ (Stray animals) ಬಗ್ಗೆ ದೂರು ನೀಡುವುದನ್ನು ಕೇಳಿರಬಹುದು. ಆದರೆ, ರಸ್ತೆಯಲ್ಲಿ ಓಡಾಟಕ್ಕೆ ತೊಂದರೆ ಕೊಡುತ್ತದೆ ಎಂಬ ಕಾರಣಕ್ಕೆ ಕುದುರೆಯೊಂದರ (Stray Horse) ಮೇಲೆ ದೂರು ನೀಡಿದ್ದು ಅಪರೂಪವೇ ಇರಬಹುದು! ಅಂಥಹುದೊಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಕಡಬ ಬಳಿ ನಡೆದಿದೆ.
ಅಷ್ಟಕ್ಕೂ ಇದೊಂಥರಾ ಅಶ್ವಮೇಧದ (Ashwamedha story) ಕಥೆಯಂತಿದೆ! ರಸ್ತೆಯಲ್ಲಿ ಓಡಾಡುತ್ತಾ, ಅಲೆಯುತ್ತಾ ವಾಹನ ಸವಾರರಿಗೆ ತೊಂದರೆ ಕೊಡುತ್ತಿದೆ ಎಂಬ ಕಾರಣಕ್ಕೆ ಯುವಕನೊಬ್ಬ ಈ ಕುದುರೆಯನ್ನು ಕಟ್ಟಿ ಹಾಕಿದ್ದ. ತಾಕತ್ತಿದ್ದವರು, ಇದರ ನಿಜವಾದ ಮಾಲೀಕರು ಬಿಡಿಸಿಕೊಂಡು ಹೋಗಲಿ ಎಂಬ ಸವಾಲಿನಂತೆ ಅದು ಕಾಣುತ್ತಿತ್ತು. ಸಾಲದ್ದಕ್ಕೆ ಪೊಲೀಸ್ ಠಾಣೆಗೂ ದೂರು ಕೊಟ್ಟಿದ್ದ. ಅಂತಿಮವಾಗಿ ಈ ಕುದುರೆ ತನ್ನ ಯಜಮಾನನೊಂದಿಗೆ ಪೊಲೀಸ್ ಠಾಣೆಗೆ ಬಂದು ಮುಚ್ಚಳಿಕೆ ಬರೆದುಕೊಟ್ಟು ಹೋಗಿದೆ!
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಲೆಕ್ಕಾಡಿಯಲ್ಲಿ ವ್ಯಕ್ತಿಯೊಬ್ಬರು ಕುದುರೆ ಸಾಕುತ್ತಿದ್ದಾರೆ. ಹೆಸರಿಗೆ ಕುದುರೆಯಾದರೂ ಅದು ಇತರ ಪ್ರಾಣಿಗಳ ಹಾಗೆ ಬೀದಿಯಲ್ಲೆಲ್ಲ ಅಡ್ಡಾಡುತ್ತಿತ್ತು. ಯಜಮಾನನ ಅಸಡ್ಡೆಯಿಂದ ಹಲವು ದಿನಗಳಿಂದ ಪ್ರಮುಖ ರಸ್ತೆಯಲ್ಲೇ ತಿರುಗಾಡುತ್ತಿತ್ತು.
ಆಹಾರ ಅರಸುತ್ತಾ ಕುದುರೆ ರಸ್ತೆಯಲ್ಲಿ ಸಂಚರಿಸುವಾಗ ಹಲವಾರು ಬೈಕ್ ಸವಾರರೂ ಅಪಘಾತಕ್ಕೆ ಒಳಗಾದ ಘಟನೆಗಳೂ ನಡೆದಿತು. ಭಾನುವಾರ (ಜುಲೈ 3) ರಸ್ತೆ ಬದಿಯಲ್ಲಿ ತೊಂದರೆ ಕೊಡುತ್ತಿದ್ದ ಈ ಕುದುರೆಯನ್ನು ವಾಹನ ಸವಾರರೊಬ್ಬರು ಬದಿಗೆ ಓಡಿಸಿದ್ದರು.
ಈ ವೇಳೆ ಕುದುರೆ ಸಾಮಾಜಿಕ ಕಾರ್ಯಕರ್ತ ರಾಘವ ಕಳಾರ ಎಂಬವರಿಗೆ ಸೇರಿದ ಕೃಷಿ ತೋಟದತ್ತ ಹೋಗಿ ಅವರು ಹೈನುಗಾರಿಕೆ ಸಲುವಾಗಿ ನೆಟ್ಟ ಹಸಿರು ಹುಲ್ಲನ್ನು ನಾಶಪಡಿಸಿದಲ್ಲದೆ ಇಲ್ಲಿನ ಪೈಪ್‌ಗೂ ಹಾನಿ ಮಾಡಿತ್ತು.
ಕುದುರೆ ಇನ್ನಷ್ಟು ಸಾರ್ವಜನಿಕರಿಗೆ ಉಪಟಳ ಕೊಡಬಹುದೆಂದು ರಾಘವ ಅವರು ಕುದುರೆಯ ಮಾಲೀಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದೂ ಆತ ಉಡಾಫೆ ಉತ್ತರ ನೀಡಲು ಆರಂಭಿಸಿದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುದುರೆಯನ್ನು ಗದ್ದೆಯಲ್ಲಿನ ತೆಂಗಿನ ಮರವೊಂದಕ್ಕೆ ಕಟ್ಟಿಹಾಕಿದ ರಾಘವ ಅವರು ಬಳಿಕ ಕಡಬ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಪೊಲೀಸರು ಕುದುರೆಯ ವಾರಿಸುದಾರನ್ನು ಕುದುರೆಯೊಂದಿಗೆ ಠಾಣೆಗೆ ಕರೆಸಿ ರಸ್ತೆಗೆ ಬಿಡದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಂತೂ ತನ್ನ ಮಾಲೀಕರ ಅಸಡ್ಡೆಯಿಂದಾಗಿ ಮೂಕ ಪ್ರಾಣಿಯೊಂದು ಠಾಣೆಗೆ ಬರುವಂತಾಯಿತು. ಮಾಲೀಕ ಪೊಲೀಸ್ ಠಾಣೆಗೆ ಕುದುರೆಯೊಂದಿಗೆ ಬಂದು ಇನ್ನು ಈ ಪ್ರಾಣಿಯನ್ನು ಹೀಗೆ ಸಿಕ್ಕಸಿಕ್ಕಲ್ಲಿ ಬಿಡುವುದಿಲ್ಲ ಎಂದು ಬರೆದುಕೊಟ್ಟಿದ್ದಾರಂತೆ.
ಇದನ್ನೂ ಓದಿ: Stray Cattle : ಬೆಂಗಳೂರು ವಾಹನ ಸವಾರರಿಗೆ ಬಿಡಾಡಿ ದನಗಳ ಕಾಟ: ರಸ್ತೆಯಲ್ಲಿ ದನಗಳು ಕಂಡರೆ ಈ ಸಂಖ್ಯೆಗೆ ಕರೆ ಮಾಡಿ
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ದಿನಂಪ್ರತಿ ಸಾಕು ಪ್ರಾಣಿಗಳಾದ ಆಡು, ದನ, ನಾಯಿಗಳು ಅಲೆದಾಡಿ ವಾಹನಗಳಿಗೆ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ಇದಕ್ಕೆ ಈಗ ಕುದುರೆಯು ಸೇರ್ಪಡೆಯಾಗಿದೆ. ಸಾಕು ಪ್ರಾಣಿಗಳನ್ನು ಬೇಕಾಬಿಟ್ಟಿ ಬಿಟ್ಟು ಸಾರ್ವಜನಿಕರಿಗೆ ಪರೋಕ್ಷ ತೊಂದರೆ ಕೊಡುತ್ತಿರುವ ಇಂತಹ ಮಾಲಕರ ವಿರುದ್ದವೇ ಕ್ರಮ ಕೈಗೊಳ್ಳುವಂತೆ ರಾಘವ ಅವರು ಆಗ್ರಹಿಸಿದ್ದಾರೆ.