Site icon Vistara News

Street dog attack : ಬಳ್ಳಾರಿ ನಗರದಲ್ಲಿ ಏಕಾಏಕಿ ಬೀದಿ ನಾಯಿಗಳ ದಾಳಿ; ಮಹಿಳೆ, ಮಕ್ಕಳು ಸೇರಿ ಏಳು ಮಂದಿ ಆಸ್ಪತ್ರೆಗೆ

street dogs

ಬಳ್ಳಾರಿ: ಬಳ್ಳಾರಿಯಲ್ಲಿ ಬೀದಿ ನಾಯಿಗಳ ಹಾವಳಿ (Street dog attack) ವಿಪರೀತವಾಗಿರುವ ಆತಂಕದ ನಡುವೆಯೇ ಸೋಮವಾರ ರಾತ್ರಿ ಭಯಾನಕವಾದ ಘಟನೆ ನಡೆದಿದೆ. ಇಲ್ಲಿನ ವಾರ್ಡ್ ನಂಬರ್ 30 ರ ವಟ್ಟಪ್ಪಗೇರಿಯಲ್ಲಿ ಮಹಿಳೆಯರು, ಮಕ್ಕಳ ಮೇಲೆ ಬೀದಿ ನಾಯಿಗಳು ಆಕ್ರಮಣ ಮಾಡಿವೆ.

ಘಟನೆಯಲ್ಲಿ ಮಹಿಳೆ, ಮಕ್ಕಳು ಸೇರಿ ಏಳು ಮಂದಿ ಗಾಯಗಳಾಗಿದ್ದು ಅವರನ್ನು ವಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ರಾತ್ರಿ ಇವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿವೆ. ಬೀದಿ ನಾಯಿಗಳ ದಾಳಿಯಿಂದ ಆತಂಕಗೊಂಡ ಜನರು ತಕ್ಷಣ ಕ್ರಮ ಕೈಗೊಳ್ಳುವಂತೆ ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಗಾಯಗೊಂಡ ಮಕ್ಕಳು

ಹೊಸಪೇಟೆಯಲ್ಲಿ ಶಾಲಾ ಬಾಲಕಿ ಮೇಲೆ ದಾಳಿ ಆಗಿತ್ತು

ವಿಜಯನಗರ ಜಿಲ್ಲೆಯ ಹೊಸಪೇಟೆಯ ಚಿತ್ತವಾಡ್ಗಿಯಲ್ಲಿ ೧೦ ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ಇತ್ತೀಚೆಗೆ ದಾಳಿ ಮಾಡಿದ್ದವು.ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ವೇದಶ್ರೀ(೧೦) ಮುಖಕ್ಕೇ ನಾಯಿ ಬಾಯಿ ಹಾಕಿ ಗಾಯಗೊಳಿಸಿದ್ದವು. ಚಿತ್ತವಾಡ್ಗಿಯ ಅಶ್ವಿನಿ ಶಾಲೆಯಲ್ಲಿ ಕಲಿಯುತ್ತಿರುವ ವೇದಶ್ರೀ ಆಟೋ ಚಾಲಕ ಕೋಟ್ರೇಶ್‌ ಅವರ ಮಗಳು. ಆಕೆ ಮಧ್ಯಾಹ್ನ ಶಾಲೆಯಿಂದ ಮನೆಗೆ ಊಟಕ್ಕೆಂದು ಹೋಗುತ್ತಿದ್ದಾಗ ನಾಯಿ ದಾಳಿ ನಡೆಸಿದ್ದವು.

ಬಾಲಕಿ ನಡೆದುಕೊಂಡು ಹೋಗುತ್ತಿದ್ದಾಗ ಮೇಲೆ ಬಿದ್ದು ಕಚ್ಚಿ ಗಾಯಗೊಳಿಸಿರುವ ನಾಯಿ, ಮುಖಕ್ಕೆ ಗಂಭೀರ ಗಾಯಗಳನ್ನು ಮಾಡಿದೆ. ಇದೇ ಚಿತ್ತವಾಡ್ಗಿಯಲ್ಲಿ ಮೂರು ದಿನಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು.

ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಿರುಕುಳ ಭಾರಿ ಜೋರಾಗಿದ್ದು, ಜನರು ಭಾರಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಕ್ಕಳು, ವೃದ್ಧರು ಓಡಾಡುವುದಕ್ಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತಕ್ಷಣವೇ ನಾಯಿಗಳ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಬೆಳಗಾವಿಯಲ್ಲಂತೂ ಒಬ್ಬ ಭಿಕ್ಷುಕಿಯನ್ನು ನಾಯಿಗಳು ಕಚ್ಚಿ ಕೊಂದೇ ಹಾಕಿದ್ದವು.

ಇದನ್ನೂ ಓದಿ : Street dog attack | ಮಲಗಿದ್ದ ಭಿಕ್ಷುಕಿಯನ್ನು ಕಚ್ಚಿ ಕೊಂದ ಬೀದಿನಾಯಿಗಳು

Exit mobile version