ವಿಜಯನಗರ: ಹೊಸಪೇಟೆಯ ಚಿತ್ತವಾಡ್ಗಿಯಲ್ಲಿ ೧೦ ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ದಾಳಿ (Street dog attack) ಮಾಡಿವೆ. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ವೇದಶ್ರೀ(೧೦) ಮುಖಕ್ಕೇ ನಾಯಿ ಬಾಯಿ ಹಾಕಿ ಗಾಯಗೊಳಿಸಿದೆ.
ಚಿತ್ತವಾಡ್ಗಿಯ ಅಶ್ವಿನಿ ಶಾಲೆಯಲ್ಲಿ ಕಲಿಯುತ್ತಿರುವ ವೇದಶ್ರೀ ಆಟೋ ಚಾಲಕ ಕೋಟ್ರೇಶ್ ಅವರ ಮಗಳು. ಆಕೆ ಮಧ್ಯಾಹ್ನ ಶಾಲೆಯಿಂದ ಮನೆಗೆ ಊಟಕ್ಕೆಂದು ಹೋಗುತ್ತಿದ್ದಾಗ ನಾಯಿ ದಾಳಿ ನಡೆಸಿದೆ.
ಬಾಲಕಿ ನಡೆದುಕೊಂಡು ಹೋಗುತ್ತಿದ್ದಾಗ ಮೇಲೆ ಬಿದ್ದು ಕಚ್ಚಿ ಗಾಯಗೊಳಿಸಿರುವ ನಾಯಿ, ಮುಖಕ್ಕೆ ಗಂಭೀರ ಗಾಯಗಳನ್ನು ಮಾಡಿದೆ. ಇದೇ ಚಿತ್ತವಾಡ್ಗಿಯಲ್ಲಿ ಮೂರು ದಿನಗಳ ಹಿಂದೆ ವ್ಯಕ್ತಿಯೊಬ್ಬರಿಗೆ ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು.
ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಿರುಕುಳ ಭಾರಿ ಜೋರಾಗಿದ್ದು, ಜನರು ಭಾರಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಕ್ಕಳು, ವೃದ್ಧರು ಓಡಾಡುವುದಕ್ಕೆ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತಕ್ಷಣವೇ ನಾಯಿಗಳ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಚಿತ್ತವಾಡ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Street dog attack | ಬೀದಿ ನಾಯಿಗಳು ಭಿಕ್ಷುಕಿಯನ್ನು ಕಚ್ಚಿ ಸಾಯಿಸಿದ ಬೆನ್ನಿಗೇ ಏಳು ಜನರ ಮೇಲೆ ಮತ್ತೆ ಅಟ್ಯಾಕ್