Site icon Vistara News

Street Dogs Survey: ಡ್ರೋನ್‌ನಲ್ಲೇ ಬೀದಿ ನಾಯಿಗಳ ಗಣತಿ; ಮೈಕ್ರೋ ಚಿಪ್‌ ಅಳವಡಿಕೆಗೆ ಪಾಲಿಕೆ ಸಜ್ಜು

Street Dogs Drone Survey

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ರಸ್ತೆಯಲ್ಲಿ ನಡೆದು ಹೋಗುವವರ ಮೇಲೆ ಎರಗುವ ಶ್ವಾನಗಳಿಂದ ಜನರು ಭಯಭೀತರಾಗಿದ್ದಾರೆ. ಬೀದಿ ನಾಯಿಗಳ (Street Dogs Survey) ಹಾವಳಿ ತಪ್ಪಿಸಲು ಬಿಬಿಎಂಪಿ ಸರ್ವೆಗೆ ಯೋಜಿಸಿದ್ದು ಡ್ರೋನ್ ಬಳಕೆಗೆ (Drone Survey) ಮುಂದಾಗಿದೆ.

ಇತ್ತೀಚೆಗಷ್ಟೇ ಬೆಂಗಳೂರು ಟ್ರಾಫಿಕ್‌ ಪೊಲೀಸರು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಡ್ರೋನ್‌ ಮೊರೆ ಹೋಗಿತ್ತು. ಇದೀಗ ಬಿಬಿಎಂಪಿ ಡ್ರೋನ್ ತಂತ್ರಜ್ಞಾನದ ಮೂಲಕ ನಾಯಿಗಳ ಗಣತಿ ಮಾಡಲು ಸಜ್ಜಾಗಿದೆ. ನಾಲ್ಕು ವರ್ಷ ನಂತರ ಬೀದಿ ನಾಯಿ ಗಣತಿಗೆ ಬಿಬಿಎಂಪಿ ಮುಂದಾಗಿದ್ದು, ಇದೀಗ ಜುಲೈ 1ರಿಂದ ಗಣತಿ ನಡೆಯಲಿದೆ.

ಈ ಹಿಂದೆ 2019ರಲ್ಲಿ ನಡೆದ ಗಣತಿಯಲ್ಲಿ ಸುಮಾರು ಮೂರು ಲಕ್ಷ ಬೀದಿ ನಾಯಿಗಳು ಇರುವುದು ಪಾಲಿಕೆ ಗುರುತಿಸಿತ್ತು. ಈಗ ಪಾಲಿಕೆ ವ್ಯಾಪ್ತಿಯಲ್ಲಿ ಸಂತಾನ ಹರಣ ಚಿಕಿತ್ಸೆ ಬಳಿಕ ಎಷ್ಟು ನಾಯಿಗಳಿವೆ ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಹೀಗಾಗಿ ನಾಯಿಗಳ ನಿಯಂತ್ರಣ ಹೇಗೆ ಮಾಡಬೇಕಾದರೆ ಗಣತಿ ಅವಶ್ಯವಾಗಿದೆ.

ನಾಲ್ಕು ವರ್ಷಗಳ ನಂತರ ಗಣತಿ

ಬಿಬಿಎಂಪಿ ಮತ್ತು ಪಶುಸಂಗೋಪನಾ ಇಲಾಖೆಯ ಸಿಬ್ಬಂದಿಗೆ ಈಗಾಗಲೇ ತಂತ್ರಜ್ಞಾನ ಹಾಗೂ ಡ್ರೋನ್ ಮೂಲಕ ಮಾಹಿತಿ ಸಂಗ್ರಹದ ಬಗ್ಗೆ ತರಬೇತಿ ನೀಡಲಾಗಿದೆ. ಬೆಂಗಳೂರಿನ ವಾರ್ಡ್ ಮಟ್ಟದಲ್ಲಿ ಡ್ರೋನ್ ತಂತ್ರಜ್ಞಾನದ ಮೂಲಕ ನಾಯಿಗಳ ಗಣತಿ ಮಾಡಲು ಮುಂದಾಗಿದೆ.

ಬೀದಿನಾಯಿಗಳ ಗಣತಿಗೆ 50 ತಂಡಗಳನ್ನು ಸಿದ್ದಪಡಿಸಿರುವ ಇಲಾಖೆ, ಪ್ರತಿ ತಂಡದಲ್ಲೂ ಇಬ್ಬರು ಸದಸ್ಯರು ಇರಲಿದ್ದಾರೆ. ಒಬ್ಬರು ವಾಹನ ಚಲಾಯಿಸಿದರೆ ಮತ್ತೊಬ್ಬರು ಡೇಟಾ ಅಪ್ಲೋಡ್ ಮಾಡುತ್ತಾರೆ. ಜಿಯೋಟ್ಯಾಗ್ ಚಿತ್ರಣವನ್ನು ಅಪ್ಲಿಕೇಶನ್ ಅಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಪ್ರತಿ ತಂಡವು ದಿನಕ್ಕೆ 5 ಕಿ.ಮೀ ರಸ್ತೆ ಕ್ರಮಿಸಲ್ಲಿದ್ದು, ಜು.1ರಿಂದ ಬೆಳಗ್ಗೆ 6 ರಿಂದ 10 ರವರೆಗೆ ಗಣತಿ ನಡೆಯಲಿದೆ. ಯಾವ ತಂಡ ಎಲ್ಲಿ ಹೋಗಬೇಕೆಂದು ಈಗಾಗಲೇ ಮ್ಯಾಪ್ ರೆಡಿ ಕೂಡಾ ಮಾಡಲಾಗಿದೆ ಎಂದು ಬಿಬಿಎಂಪಿ ಪಶುಸಂಗೋಪನೆಯ ಜಂಟಿ ನಿರ್ದೇಶಕರು ಡಾ ಕೆ.ಪಿ.ರವಿಕುಮಾರ್ ತಿಳಿಸಿದ್ದಾರೆ.

ಮೈಕ್ರೋ ಚಿಪ್‌ ಅಳವಡಿಕೆ

ಬಿಬಿಎಂಪಿ ಹಾಗೂ ರಾಜ್ಯ ಪಶುಸಂಗೋಪನಾ ಇಲಾಖೆಯ ಗಣತಿಯ ಜತೆಗೆ 100 ನಾಯಿಗಳಿಗೆ ಮೈಕ್ರೋ ಚಿಪ್‌ಗಳನ್ನು ಅಳವಡಿಸಲಿದೆ. ಈ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಲಿದೆ. ನಾಯಿಯ ಕುತ್ತಿಗೆಗೆ ಮೈಕ್ರೋಚಿಪ್‌ಅನ್ನು ಸ್ಕ್ಯಾನ್ ಮಾಡಿದಾಗ, ಅದರ ಲಸಿಕೆ ಮತ್ತು ಸಂತಾನಶಕ್ತಿ ಹರಣದಂತಹ ವಿವರಗಳು ಲಭ್ಯವಾಗುತ್ತವೆ.

ಇದನ್ನೂ ಓದಿ: Bear Attack: ಶಿಗ್ಗಾಂವಿಯಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದ ಕರಡಿ ಸಾವು!

ಈ ಆಧಾರದ ಮೇಲೆ ಬಿಬಿಎಂಪಿಯ ವಾರ್ಷಿಕ ಲಸಿಕೆ ಕಾರ್ಯಕ್ರಮದಿಂದ ಹೆಚ್ಚಿನ ಪ್ರಮಾಣದ ನಾಯಿಗಳು ತಪ್ಪಿಸಿಕೊಂಡರೆ, ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಬಾರಿ ಲಸಿಕೆಯನ್ನು ಪಡೆಯುತ್ತವೆ. ಆದ್ದರಿಂದ ಮೈಕ್ರೋಚಿಪ್ ಡೇಟಾವು ಸರಿಯಾದ ವ್ಯಾಕ್ಸಿನೇಷನ್ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದಕ್ಕಾಗಿ ಪ್ರತಿ ತಂಡದಲ್ಲೂ ಇಬ್ಬರು ಸದಸ್ಯರನ್ನು ನೇಮಕ ಮಾಡಲಾಗುತ್ತದೆ.

ಒಬ್ಬರು ವಾಹನವನ್ನು ಓಡಿಸಿದರೆ, ಇನ್ನೊಬ್ಬರು ಬೀದಿ ನಾಯಿಗಳ ಡೇಟಾವನ್ನು ಗುರುತಿಸಿ ಅಪ್ಲೋಡ್ ಮಾಡುತ್ತಾರೆ ಎಂದು ಡಾ ಕೆ.ಪಿ ರವಿಕುಮಾರ್ ಮಾಹಿತಿ ನೀಡಿದ್ದಾರೆ. ನಾಲ್ಕು ವರ್ಷಗಳ ಬಳಿಕ ಮತ್ತೆ ಈಗ ಬಿಬಿಎಂಪಿ ಬೀದಿನಾಯಿಗಳ ಗಣತಿಗೆ ಮುಂದಾಗಿದ್ದು, ಡ್ರೋನ್ ತಂತ್ರಜ್ಞಾನದ ಮೊರೆ ಹೋಗಿರುವುದು ವಿಶೇಷವಾಗಿದೆ. ಆದರೆ ಇದೆಲ್ಲ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಕಾದುನೋಡಬೇಕಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version