ನಮ್ಮ ರಾಷ್ಟ್ರದ ಧ್ವಜ ಬೇರೊಂದು ದೇಶದಲ್ಲಿ ಹಾರಾಡಿದರೆ ಅದೆಷ್ಟು ಸಂತೋಷವಾಗುತ್ತದೆಯಲ್ಲ..ಹಾಗೇ, ನಮ್ಮ ರಾಜ್ಯ ಕರ್ನಾಟಕದ ಬಾವುಟ (Kannada Flag)ವನ್ನು ಯಾರಾದರೂ ವಿದೇಶದಲ್ಲಿ ಹೆಮ್ಮೆಯಿಂದ ಪ್ರದರ್ಶಿಸಿದರೆ, ನಾವು ಕನ್ನಡಿಗರಿಗೆ ಅದೆಷ್ಟು ಖುಷಿಯಾಗಬೇಡ?! ಅಂಥದ್ದೊಂದು ಹೆಮ್ಮೆಯ ಕ್ಷಣವನ್ನು ಆದಿಶ್ ಆರ್ ವಾಲಿ (Adhish R. Wali) ಎಂಬ ವಿದ್ಯಾರ್ಥಿ ನಮ್ಮ ಪಾಲಿಗೆ ಒದಗಿಸಿಕೊಟ್ಟಿದ್ದಾನೆ. ಈತ ಮೂಲತಃ ಕರ್ನಾಟಕದ ಬೀದರ್ ಜಿಲ್ಲೆಯವನು. ಲಂಡನ್ನ Bayes Business School (Cass) ಎಂಬ ಸಿಟಿ ಯೂನಿವರ್ಸಿಟಿಯಲ್ಲಿ ಮ್ಯಾನೇಜ್ಮೆಂಟ್ನಲ್ಲಿ ಎಂಎಸ್ ಪದವಿ ಪಡೆದ ಆದಿಶ್ ಆರ್ ವಾಲಿ, ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪ್ರಮಾಣಪತ್ರ ಸ್ವೀಕರಿಸಲು ಹೋಗುವಾಗ ಕರ್ನಾಟಕದ ಧ್ವಜವನ್ನು ಎಲ್ಲರೆದುರು ಎತ್ತಿ ಹಿಡಿದು, ಪ್ರದರ್ಶಿಸಿದ್ದಾನೆ.
ಕಪ್ಪು ಗೌನ್ ಹಾಕಿಕೊಂಡು, ಫುಲ್ ಖುಷಿಯಲ್ಲಿ ಪ್ರಮಾಣ ಪತ್ರ ಸ್ವೀಕರಿಸಲು ಹೋದ ಆದಿಶ್, ತನ್ನ ಜೇಬಿನಲ್ಲಿ ಮಡಿಚಿ ಇಟ್ಟುಕೊಂಡಿದ್ದ ಕರ್ನಾಟಕ ಬಾವುಟ ತೆಗೆದು ಪ್ರದರ್ಶನ ಮಾಡಿದಾಗ ಅಲ್ಲಿದ್ದವರೆಲ್ಲ ಚಪ್ಪಾಳೆ ಹೊಡೆದಿದ್ದಾರೆ. ಈ ವಿಡಿಯೊವನ್ನು ಆದಿಶ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾನೆ. ‘ನನ್ನ ಪಾಲಿಗೂ ಇದು ಹೆಮ್ಮೆಯ ಸಂದರ್ಭ’ ಎಂದು ಹೇಳಿಕೊಂಡಿದ್ದಾನೆ.
ಆದಿಶ್ ಹೀಗೆ ಕರ್ನಾಟಕದ ಬಾವುಟವನ್ನು ಲಂಡನ್ ಯೂನಿವರ್ಸಿಟಿಯಲ್ಲಿ ಪ್ರದರ್ಶಿಸಿದ ವಿಡಿಯೊವನ್ನು ಅನೇಕಾನೇಕರು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ಕನ್ನಡಿಗರು ಸಿಕ್ಕಾಪಟೆ ಹೊಗಳುತ್ತಿದ್ದಾರೆ. ವಿದೇಶಕ್ಕೆ ಹೋಗಿ ಓದಿ, ಸ್ನಾತಕೋತ್ತರ ಪದವಿ ಪಡೆದರೂ ಆದಿಶ್ ತನ್ನ ರಾಜ್ಯದ ಬಗ್ಗೆ ಅತ್ಯಂತ ಗೌರವ ಇಟ್ಟುಕೊಂಡಿದ್ದು ತುಂಬ ಖುಷಿಯ ಸಂಗತಿ ಎಂದು ಅನೇಕರು ಹೇಳಿದ್ದಾರೆ.
ಇದನ್ನೂ ಓದಿ: Viral Video: ಕೇರಳದಿಂದ ಕಾಶ್ಮೀರದವರೆಗೆ; ಒಮ್ಮೆ ಕ್ವಿಕ್ ಆಗಿ ಪ್ರವಾಸಕ್ಕೆ ಹೋಗಿಬರೋಣ ಬನ್ನಿ!
ಇತ್ತೀಚೆಗೆ ಬೆಳಗಾವಿಯ ಟಿಳಕವಾಡಿಯಲ್ಲಿರುವ ಗೋಗಟೆ ಕಾಲೇಜಿನಲ್ಲಿ ಇಂಟರ್ ಕಾಲೇಜು ಉತ್ಸವ ಆಯೋಜಿಸಿದ್ದಾಗ ವಿದ್ಯಾರ್ಥಿಯೊಬ್ಬ ಕನ್ನಡದ ಬಾವುಟ ಹಿಡಿದು ಕುಣಿದ ಎಂಬ ಕಾರಣಕ್ಕೆ, ಇನ್ನಿತರ ವಿದ್ಯಾರ್ಥಿಗಳು ಸೇರಿ ಆತನಿಗೆ ಥಳಿಸಿದ್ದರು. ದೊಡ್ಡದಾಗಿ ಸಂಗೀತ ಪ್ರಸಾರವಾಗುತ್ತಿತ್ತು. ಎಲ್ಲ ವಿದ್ಯಾರ್ಥಿಗಳೂ ಸೇರಿ ಕುಣಿಯುತ್ತಿದ್ದರು. ಆಗ ಒಬ್ಬ ಹುಡುಗ ಕರ್ನಾಟಕ ಧ್ವಜ ಹಿಡಿದು ಕುಣಿಯಲು ಪ್ರಾರಂಭಿಸಿದ್ದ. ತಕ್ಷಣವೇ ಬೇರೆ ವಿದ್ಯಾರ್ಥಿಗಳು ಬಂದು ಅವನಿಗೆ ಥಳಿಸಿದ್ದರು. ಪೊಲೀಸರು ಈ ಕೇಸ್ಗೆ ಸಂಬಂಧಪಟ್ಟ ತನಿಖೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲೇ ಕನ್ನಡ ಬಾವುಟ ಹಿಡಿಯುವುದು ಅಪರಾಧವೇ ಎಂದು ಕನ್ನಡ ಪರ ಅನೇಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಅದರ ಮಧ್ಯೆ ಲಂಡನ್ನಲ್ಲಿ ನಮ್ಮ ರಾಜ್ಯದ ಬಾವುಟ ಹಾರಾಡಿದ್ದು, ಖುಷಿ ತಂದಿದೆ ಎಂದೇ ಹೇಳಬಹುದು.
ಇನ್ನಷ್ಟು ಹೆಚ್ಚಿನ ವೈರಲ್ ಸುದ್ದಿಗಳನ್ನು ಓದಲು: https://vistaranews.com/attribute-category/viral-news/