Site icon Vistara News

Student Death : ಮರಳು ಸಾಗಾಟದ ಟ್ರ್ಯಾಕ್ಟರ್‌ ಧಾವಂತಕ್ಕೆ ಪಿಯುಸಿ ವಿದ್ಯಾರ್ಥಿ ಬಲಿ; ನಡೆದುಹೋಗುತ್ತಿದ್ದಾಗ ಡಿಕ್ಕಿ!

Tractor rams and kills student

ರಾಯಚೂರು: ರಾಯಚೂರಿನಲ್ಲಿ ಮರಳು ಸಾಗಾಟದ ವಾಹನಗಳ (Sand transporting Vehicle) ಅಬ್ಬರ, ಅಟ್ಟಹಾಸ ಎಷ್ಟರ ಮಟ್ಟಿಗೆ ಇದೆ ಎಂದರೆ ಇಲ್ಲಿ ವಾಹನಗಳು ಹೋಗುವುದು ಬಿಡಿ, ಮಾರ್ಗದ ಬದಿಯಲ್ಲಿ ನಡೆದುಕೊಂಡು ಹೋಗುವುದು ಕೂಡಾ ಕಷ್ಟ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ನಡೆದ ಈ ಘಟನೆ ಅದಕ್ಕೆ ಇನ್ನಷ್ಟು ಪುಷ್ಟಿ ತುಂಬಿದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು (student death) ಮರಳು ಸಾಗಾಟದ ಟ್ರ್ಯಾಕ್ಟರ್ ಬಲಿ (Sand Tractor Kills student) ಪಡೆದಿದೆ.

ರಾಯಚೂರು ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಟ್ರ್ಯಾಕ್ಟರ್ ಧಾವಂತಕ್ಕೆ ಬಲಿಯಾದ ವಿದ್ಯಾರ್ಥಿಯನ್ನು ಮಲ್ಲೇಶ್ (18) ಎಂದು ಗುರುತಿಸಲಾಗಿದೆ. ನಗರದ SRPS ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಯಾಗಿರುವ ಮಲ್ಲೇಶ್ ಮಾರ್ಗದ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಟ್ರ್ಯಾಕ್ಟರ್‌ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ.

ತುಂಗಭದ್ರಾ ನದಿಯಿಂದ ಆಕ್ರಮ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್ ಇಡಪನೂರು ಕಡೆಯಿಂದ ರಾಯಚೂರಿಗೆ ಹೊರಟಿತ್ತು. ಇದು ಪೊಲೀಸರ ಕಣ್ಣು ತಪ್ಪಿಸಿ ನಡೆಸುವ ವ್ಯವಹಾರವಾಗಿರುವುದರಿಂದ ಅತಿಯಾದ ವೇಗದಲ್ಲಿ ಚಲಿಸುತ್ತವೆ. ಇಲ್ಲಿ ಧಾವಂತದಲ್ಲಿ ಅಡ್ಡಾದಿಡ್ಡಿಯಾಗಿ ಓಡಿಸಿದ ಚಾಲಕ ವಿದ್ಯಾರ್ಥಿ ಮಲ್ಲೇಶ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: Child death : ಮನೆ ಎದುರಿನ ಚರಂಡಿಗೆ ಬಿದ್ದು ಎರಡು ವರ್ಷದ ಮಗು ದಾರುಣ ಸಾವು

ಇದೇನೂ ನಿರ್ಮಾನುಷವಾದ ಜಾಗವೂ ಅಲ್ಲ, ಜನವಸತಿ ಇರುವ ಪ್ರದೇಶದಲ್ಲೇ ಈ ರೀತಿ ಯದ್ವಾತದ್ವಾ ವಾಹನವನ್ನು ಓಡಿಸಲಾಗಿದ್ದು, ಅಮಾಯಕ ವಿದ್ಯಾರ್ಥಿ ಪ್ರಾಣ ಕಳೆದುಕೊಳ್ಳುವಂತಾಗಿದೆ.

ರಾಮಣ್ಣ ಎಂಬುವವರಿಗೆ ಸೇರಿದ್ದ ಮರಳು ತುಂಬಿದ್ದ ಟ್ರಾಕ್ಟರ್ ಇದಾಗಿದ್ದು, ನಾಗರಾಜ್ ಕೊತ್ತದೊಡ್ಡಿ ಎಂಬಾತನೇ ಅಡ್ಡಾದಿಡ್ಡಿ ಓಡಿಸಿದ ಚಾಲಕ.

ಮಲ್ಲೇಶ್ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಟ್ರ್ಯಾಕ್ಟರ್ ವಶಕ್ಕೆ ಪಡೆದು ತನಿಖೆ ಮುಂದುವರಿದಿದೆ. ಇಡಪನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭಾಗದಲ್ಲಿ ಅಕ್ರಮ ಮರಳು ಸಾಗಾಟ ವಿಪರೀತವಾಗಿದ್ದು, ಒಂದು ಕಡೆ ರಾಜ್ಯದ ಆಸ್ತಿಯನ್ನು ಕೊಳ್ಳೆ ಹೊಡೆಯುವುದರ ಜತೆಗೆ ಪ್ರಾಣಗಳನ್ನು ಬಲಿ ಪಡೆಯಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಊರಿನವರ ಆಗ್ರಹ.

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ

ರಾಯಚೂರು: ದೇವದುರ್ಗದ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಿ.ಆರ್.ಗುಂಡಾ ಗ್ರಾಮದ ವಿದ್ಯಾರ್ಥಿನಿ ಪವಿತ್ರ(15) ಆತ್ಮಹತ್ಯೆ ಮಾಡಿಕೊಂಡವಳು. ಆಕೆಗೂ ಓದುವುದು ಇಷ್ಟವಿರಲಿಲ್ಲ ಎನ್ನಲಾಗಿದೆ. ಶಾಲೆಗೆಂದು ಹೋದವಳು ಶಾಲೆ ತಪ್ಪಿಸಿ ಮನೆಗೆ ಬರುತ್ತಿದ್ದಳು. ಇದರಿಂದ ಬೇಸರಗೊಂಡ ಮನೆಯವರು ಆಕೆಗೆ ಬುದ್ಧಿ ಹೇಳಿದ್ದರು. ಜತೆಗೆ ಗುರುವಾರ ಆಕೆಯನ್ನು ವಸತಿ ಶಾಲೆಗೆ ಬಿಟ್ಟು ಹೋಗಿದ್ದರು.

ಈ ನಡುವೆ ಆಕೆ ತರಗತಿ ಸಮಯದಲ್ಲೇ ಕೋಣೆಗೆ ಬಂದು ಫ್ಯಾನ್‌ಗೆ ವೇಲ್ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Exit mobile version