ಉಡುಪಿ: ಇಲ್ಲಿನ ಕಾಪು ತಾಲೂಕಿನ ಪಡುಬಿದ್ರಿ ಸಮೀಪದಲ್ಲಿ ವೈದ್ಯರ ನಿರ್ಲಕ್ಷದಿಂದ (Medical Negligence) ವಿದ್ಯಾರ್ಥಿನಿ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಕೆಮ್ಮುಂಡೇಲು ನಿವಾಸಿ ನಿಕಿತಾ (20) ಮೃತ ವಿದ್ಯಾರ್ಥಿನಿ.
ಹೊಟ್ಟೆ ನೋವು ಎಂಬ ಕಾರಣಕ್ಕೆ ಕಳೆದ ಬುಧವಾರ ಸಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸ್ಕ್ಯಾನಿಂಗ್ ಎಂಡೋಸ್ಕೋಪಿ ಸಿಟಿ ಸ್ಕ್ಯಾನ್ ಮಾಡಲಾಗಿತ್ತು. ಬಳಿಕ ಅಪೆಂಡಿಕ್ಸ್ ಆಗಿದೆ ಎಂದಷ್ಟೇ ಹೇಳಿ ವೈದ್ಯರು ಆಪರೇಷನ್ ಮಾಡಿದ್ದಾರೆ. ಆಪರೇಷನ್ ಆದ ಬಳಿಕ ಯುವತಿಯ ಆರೋಗ್ಯದಲ್ಲಿ ಏರುಪೇರಾಗಿದೆ.
ಶ್ವಾಸಕೋಶದಲ್ಲಿ ನೀರು ತುಂಬಿದ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಗಳ ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದು ಕಂಡು ಪೋಷಕರಿಗೆ ಆತಂಕ ಹೆಚ್ಚಿದೆ. ಹೀಗಾಗಿ ಪೋಷಕರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಸಿಟಿ ಆಸ್ಪತ್ರೆಯ ವೈದ್ಯರು ಯಾವುದೇ ಗಂಭೀರ ಸಮಸ್ಯೆ ಇಲ್ಲ ನಾವೇ ಚಿಕಿತ್ಸೆ ನೀಡುತ್ತೇವೆ ಎಂದಿದ್ದಾರೆ. ಇದ್ದಕ್ಕಿದ್ದಂತೆ ಶ್ವಾಸದಲ್ಲಿ ಏರುಪೇರು ಕಂಡು ಬಂದು ಭಾನುವಾರ ಮುಂಜಾನೆ ನಿಕಿತಾ ಮೃತಪಟ್ಟಿದ್ದಾಳೆ.
ಇತ್ತ ವೈದ್ಯರು ಯುವತಿ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಕಾರಣ ಹೇಳಿದ್ದಾರೆ. ಮಾತ್ರವಲ್ಲದೆ ಆಸ್ಪತ್ರೆಗೆ ಬಿಲ್ ಕಟ್ಟುವುದು ಏನು ಬೇಡ ಎಂದಿರುವುದು ಅನುಮಾನ ಮೂಡಿಸುತ್ತಿದೆ. ಮಣಿಪಾಲಕ್ಕೆ ಶಿಫ್ಟ್ ಮಾಡಲು ಒಪ್ಪದ ಕಾರಣ ಸಾವು ಸಂಭವಿಸಿದೆ ಎಂದು ಪೋಷಕರ ಆರೋಪಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ
justiceForNikhitha ಎಂದು ಹ್ಯಾಶ್ ಟ್ಯಾಗ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನಿಕಿತಾಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಗಳು ಕೇಳಿ ಬಂದಿದೆ. ಪ್ರಾಣ ನೀಡುವವರೇ ಪ್ರಾಣ ತಗೆದರೆ ಕೇಳುವವರಾರು? ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಯುವತಿ ಮೃತಪಟ್ಟಿದ್ದಾಳೆ. ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ನ 10ನೇ ಮಹಡಿಯಿಂದ ಬಿದ್ದು ಗೃಹಿಣಿ ಮೃತ್ಯು
ಇತ್ತ ನಿಕಿತಾ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದಾರೆ. ಮಗಳ ಅಗಲಿಕೆಯ ನೋವಿನಲ್ಲಿರುವ ಪೋಷಕರು ಮರಣೋತ್ತರ ಪರೀಕ್ಷೆಗೂ ಒಪ್ಪಿಲ್ಲ ಎನ್ನಲಾಗಿದೆ. ಮಗಳೇ ಇಲ್ಲದ ಮೇಲೆ ದೂರು ನೀಡುವುದು ಯಾಕೆ ಎಂದು ಸುಮ್ಮನಾಗಿದ್ದಾರೆ. ಜನಾರ್ದನ ಶೋಭಾ ದಂಪತಿಯ ಒಬ್ಬಳೇ ಮಗಳು ನಿಕಿತಾ, ಮಂಗಳೂರಿನ ಕೆಪಿಟಿಯಲ್ಲಿ ಡಿಪ್ಲೊಮಾ ಓದುತ್ತಿದ್ದಳು. ಮನೆಗೆ ಬೆಳಕಾಗಿದ್ದ ಮಗಳ ಅಗಲಿಕೆಯಿಂದ ಹಿರಿ ಜೀವಗಳು ಕಣ್ಣೀರು ಹಾಕುತ್ತಿದ್ದಾರೆ.
ಸೂಕ್ತ ತನಿಖೆಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ಉಡುಪಿಯಲ್ಲಿ ವಿದ್ಯಾರ್ಥಿನಿ ನಿಕಿತಾ ಸಾವು ಪ್ರಕರಣ ಬೆನ್ನಲ್ಲೆ ಸೂಕ್ತ ತನಿಖೆಗೆ ಆಗ್ರಹಿಸಿ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಶುಕ್ರವಾರ ಪ್ರತಿಭಟನೆ ನಡೆಸಿತು. ಸಿಟಿ ಹಾಸ್ಪಿಟಲ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು
ಪೊಲೀಸರು ರಸ್ತೆಯಲ್ಲೇ ತಡೆದು ನಿಲ್ಲಿಸಿದರು. ಇದೇ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ