Site icon Vistara News

Murder Case : ಲಯಸ್ಮಿತಾ ಕೊಲೆ ಪ್ರಕರಣ; ಪಾಗಲ್‌ ಪ್ರೇಮಿ, ಕಾಲೇಜು ವಿರುದ್ಧ ಮೃತಳ ತಾಯಿಯಿಂದ ದೂರು

ಲಯಸ್ಮಿತಾ ಕೊಲೆ ಪ್ರಕರಣ ಆರೋಪಿ ಪವನ್‌ ಕಲ್ಯಾಣ್‌ FIR ದಾಖಲು

ಬೆಂಗಳೂರು: ರಾಜಾನುಕುಂಟೆ ಖಾಸಗಿ ಕಾಲೇಜಿನಲ್ಲಿ ಪಾಗಲ್‌ ಪ್ರೇಮಿಯೊಬ್ಬ ಕಾರಿಡಾರ್‌ನಲ್ಲಿಯೇ ವಿದ್ಯಾರ್ಥಿನಿಯನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ (Murder Case) ಸಂಬಂಧಪಟ್ಟಂತೆ ಮೃತ ವಿದ್ಯಾರ್ಥಿನಿ ತಾಯಿ ಆರೋಪಿ ಪವನ್ ಕಲ್ಯಾಣ್ ಹಾಗೂ ಕಾಲೇಜು ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದಾರೆ.

ಆರೋಪಿ ಪವನ್‌ ಎಂಬಾತ ಕಾಲೇಜಿನಲ್ಲಿ ಕ್ಲಾಸ್‌ಗೆ ನುಗ್ಗಿ ಲಯಸ್ಮಿತಾಳನ್ನು ಕೊಲೆ ಮಾಡಿದ್ದ. ಈಗ ಆತ ಹಾಗೂ ಕಾಲೇಜಿನ ವಿರುದ್ಧ ಲಯಸ್ಮಿತಾ ತಾಯಿ ರಾಜೇಶ್ವರಿ ದೂರು ನೀಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಾನುಕುಂಟೆ ಪೊಲೀಸರು ದಾಖಲಿಸಿರುವ ಎಫ್ಐಆರ್‌ನಲ್ಲಿ ಸಂಪೂರ್ಣ ಮಾಹಿತಿಯನ್ನು ಉಲ್ಲೇಖಿಸಿದ್ದಾರೆ. ದೂರಿನ ಪ್ರತಿ ಹಾಗೂ ಎಫ್ಐಆರ್ ಪ್ರತಿ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ.

ದೂರು ಹಾಗೂ ಎಫ್ಐಆರ್‌ನಲ್ಲಿ ಆರೋಪಿ ಪವನ್ ಕಲ್ಯಾಣ್ ಪ್ರೀತಿ ಬಗ್ಗೆಯೂ ಉಲ್ಲೇಖಿಸಲಾಗಿದೆ. ಪವನ್ ಕಲ್ಯಾಣ್ ಬಿನ್ ಅಂಬರೀಶ ಎಂಬಾತ ಮುಳಬಾಗಿಲಿನ ಕಾಶಿಪುರ ಗ್ರಾಮದವನು. ಆತ ನನ್ನ ಮಗಳು ಲಯಸ್ಮಿತಾಳನ್ನ ಪ್ರೀತಿ ಮಾಡುತ್ತಿದ್ದ. ಆದರೆ, ಅದಕ್ಕೆ ನನ್ನ ಮಗಳು ಒಪ್ಪದೆ ಇದ್ದುದರಿಂದ ಕೊಲೆ ಮಾಡಬೇಕೆಂದು ತೀರ್ಮಾನಿಸಿದ್ದ. ನಂತರ ಚಾಕು ತೆಗೆದುಕೊಂಡು ಮಗಳು ಲಯಸ್ಮಿತಾ ಓದುತ್ತಿದ್ದ ಕಾಲೇಜಿನೊಳಗೆ ಹೋಗಿದ್ದಾನೆ. ಅಲ್ಲಿ ಅವಳನ್ನು ಕ್ಲಾಸ್ ರೂಮಿನಿಂದ ಹೊರಗೆ ಕಾರಿಡಾರ್‌ಗೆ ಕರೆ ತಂದಿದ್ದಾನೆ. ಲಯಸ್ಮಿತಾ ತರಗತಿಯಿಂದ ಆಚೆ ಬಂದ ಕೂಡಲೇ ಚಾಕುವಿನಿಂದ ಅವಳ ಎದೆಗೆ ಹಾಗೂ ಇತರ ಕಡೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ರಾಜೇಶ್ವರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ | Sonam Kapoor | ತಮ್ಮ ಐಷಾರಾಮಿ ಮನೆಯನ್ನು ಭಾರಿ ಬೆಲೆಗೆ ಮಾರಾಟ ಮಾಡಿದ ನಟಿ ಸೋನಂ ಕಪೂರ್

ಇನ್ನು ಪ್ರತಿಷ್ಠಿತ ‌ಪ್ರೆಸಿಡೆನ್ಸಿ ಕಾಲೇಜಿನಲ್ಲಿ ದಿನಪೂರ್ತಿ ಸೆಕ್ಯುರಿಟಿ ಇದ್ದರೂ ಪವನ್ ಕಲ್ಯಾಣ್ ಕಾಲೇಜಿಗೆ ಹೋಗಲು ಅವಕಾಶ ನೀಡಿದ್ದು ಹೇಗೆ? ಎಂದು ರಾಜೇಶ್ವರಿ ದೂರಿನಲ್ಲಿ ಕೇಳಿದ್ದು, ಇದನ್ನೂ ಸಹ ಎಫ್ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

೧ ಗಂಟೆಗೆ ತೆರಳಿದ್ದ ಪವನ್‌ ಕಲ್ಯಾಣ್‌
ರಾಜೇಶ್ವರಿ ಸುಮಾರು ಎರಡು ಪುಟಗಳ ದೂರು ನೀಡಿದ್ದು, ಮಗಳ ಕೊಲೆಯ ಬಗ್ಗೆ ಸಂಪೂರ್ಣ ವಿವರವನ್ನು ಉಲ್ಲೇಖಿಸಿದ್ದಾರೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರೋಪಿ ಪವನ್ ಕಲ್ಯಾಣ್ ಕಾಲೇಜಿಗೆ ಬಂದಿದ್ದ. ಬಂದವನೇ ಲಯಸ್ಮಿತಾ ಕ್ಲಾಸ್ ರೂಮಿಗೆ ತೆರಳಿದ್ದಾನೆ. ಅಲ್ಲಿ ಆ ವೇಳೆ ಸ್ನೇಹಿತೆಯರ ಜತೆ ಲಯಸ್ಮಿತಾ ಇದ್ದಳು. ಅಲ್ಲಿಂದ ಆಕೆಯನ್ನು ಕಾರಿಡಾರ್‌ಗೆ ಕರೆಸಿಕೊಂಡಿದ್ದಾನೆ. ಅಲ್ಲಿಯೇ ನಿಂತು ಲಯಸ್ಮಿತಾ ಜತೆ ಪವನ್ ಕಲ್ಯಾಣ್ ಮಾತನಾಡಿದ್ದ.

ಇದಾದ ಕೂಡಲೇ ನನ್ನ ಮಗಳು ಲಯಸ್ಮಿತಾ ಕ್ಲಾಸ್ ರೂಂಗೆ ತೆರಳಿ ತನ್ನ ಬ್ಯಾಗ್ ತೆಗೆದುಕೊಂಡು ಕಾರಿಡಾರ್‌ಗೆ ಬಂದಿದ್ದಾಳೆ. ಆಗ ಪವನ್‌ ಲಯಸ್ಮಿತಾಳನ್ನು ಅಡ್ಡ ಹಾಕಿ ಮಾತನಾಡಿಸಲು ಯತ್ನಿಸಿದ್ದಾನೆ. ಇದಕ್ಕೆ ಆಕೆ ಏನೋ ಹೇಳಿ ಹೊರಟಾಗ ಸಿಟ್ಟಿಗೆದ್ದ ಪವನ್‌ ತನ್ನ ಬ್ಯಾಗ್‌ನಿಂದ ಚಾಕು ತೆಗೆದು ಇರಿದಿದ್ದಾನೆ. ಇದರಿಂದ ಆಕೆ ಕೆಳಗ್ಗೆ ಬಿದ್ದಿದ್ದಾಳೆ. ಇದನ್ನು ಅಲ್ಲಿಯೇ ನೆಲ ಒರೆಸುತ್ತಿದ್ದ ಮಂಜುಳಾ ಎಂಬುವವರು ನೋಡಿ ಕೂಗಿಕೊಂಡಿದ್ದಾರೆ. ಆಗ ಅಲ್ಲಿಯೇ ಇದ್ದ ವಸಂತ್‌ ಕುಮಾರ್‌ ಎಂಬುವವರು ಓಡಿ ಬಂದು ಆರೋಪಿಯನ್ನು ತಬ್ಬಿ ಹಿಡಿದೆಳೆದು ಲಯಸ್ಮಿತಾ ತರಗತಿಯೊಳಗೆ ಕೂಡಿಹಾಕಿದ್ದಾರೆ. ತಕ್ಷಣವೇ ಲಯಸ್ಮಿತಾಳನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಆಕೆ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದರು. ಇದೇ ವೇಳೆ ಆರೋಪಿ ಪವನ್‌ ಸಹ ಚಾಕುವಿನಿಂದ ಇರಿದುಕೊಂಡಿದ್ದಾನೆ. ಆತನನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಪವನ್‌ ಕಲ್ಯಾಣ್‌, ಶಾಲಾ ಆಡಳಿತ ಮಂಡಳಿ ಮತ್ತು ಸೆಕ್ಯುರಿಟಿ ಅವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ರಾಜೇಶ್ವರಿ ಮನವಿ ಮಾಡಿದ್ದಾರೆ. ಇನ್ನು ಪ್ರಕರಣದ ಬಗ್ಗೆ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜತೆಗೆ ಆರೋಪಿ ಪವನ್ ಕಲ್ಯಾಣ್ ಪೂರ್ವಪರ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ | ಹಾಸನ ಮಿಕ್ಸಿ ಸ್ಫೋಟದ ಆರೋಪಿ ಅರೆಸ್ಟ್‌: ಪ್ರೀತಿ ನಿರಾಕರಣೆ, ಅಪಮಾನಕ್ಕೆ ಪ್ರತೀಕಾರ ಎಂದ ವಿಕೃತ ಪ್ರೇಮಿ ಅನೂಪ್‌

Exit mobile version