Site icon Vistara News

Free Bus Service: ಮಹಿಳೆಯರ ಫ್ರೀ ಓಡಾಟದಿಂದ ಜಾಗವೇ ಇಲ್ಲ; ಬಸ್‌ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

students protest

#image_title

ಬಾಗಲಕೋಟೆ: ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣದ (Free Bus service) ಶಕ್ತಿ ಯೋಜನೆ (Shakthi scheme) ಆರಂಭವಾದ ಬಳಿಕ ತಮಗೆ ಬಸ್‌ ಹತ್ತಲೂ ಜಾಗ ಸಿಗುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಸ್‌ ತಡೆದು ಪ್ರತಿಭಟನೆ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆಯ (Bagalakote news) ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ವಿದ್ಯಾರ್ಥಿಗಳು ಬಸ್‌ ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆಯರಿಗೆ ಉಚಿತ ಪ್ರಯಾಣದ (Woman passengers) ವ್ಯವಸ್ಥೆ ಮಾಡಿದ್ದರಿಂದ ಎಲ್ಲ ಬಸ್‌ಗಳಲ್ಲಿ ಮಹಿಳೆಯರೇ ತುಂಬಿ ತುಳುಕುತ್ತಿದ್ದು, ಶಾಲೆ, ಕಾಲೇಜುಗಳಿಗೆ ಹೋಗುವ ನಿತ್ಯ ಪ್ರಯಾಣದ ವಿದ್ಯಾರ್ಥಿಗಳಿಗೆ ಓಡಾಟಕ್ಕೇ ಅವಕಾಶ ಸಿಗುತ್ತಿಲ್ಲ. ಅವರು ದುಬಾರಿ ದರ ತೆತ್ತು ಬೇರೆ ವಾಹನಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಬಸ್‌ಗಳಲ್ಲಿ ಒತ್ತಡ ಯಾವ ರೀತಿ ಇದೆ ಎಂದರೆ 52 ಜನರು ಹತ್ತು ಬಸ್‌ನಲ್ಲಿ 120 ಜನರು ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಇದೆ. ಅಷ್ಟಾದರೂ ಜಾಗ ಸಾಗುತ್ತಿಲ್ಲ. ಗುರುವಾರ ಇದೇ ರೀತಿ ತುಂಬಿ ತುಳುಕುವ ಬಸ್‌ನಲ್ಲಿ ಜಾಗವಿಲ್ಲದೆ ತಮ್ಮ ಊರಿಗೆ ತೆರಳಲಾಗದೆ ಸಂಕಷ್ಟ ಎದುರಿಸಿದ ವಿದ್ಯಾರ್ಥಿಗಳು ಕೆರಕಲಮಟ್ಟಿಯಲ್ಲಿ ಬಸ್‌ ತಡೆದು ಪ್ರತಿಭಟನೆ ನಡೆಸಿದರು. ಸುಮಾರು 40ಕ್ಕೂ ಆಧಿಕ ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಜಾಗವಿಲ್ಲದೆ ಪರದಾಡುವ ಪರಿಸ್ಥಿತಿ ಬಂದಿತ್ತು. ನಾವು ಏನು ಮಾಡಬೇಕು ಎಂದು ಅವರು ಆಕ್ರೋಶದಿಂದ ಪ್ರಶ್ನಿಸಿದರು.

ನಿತ್ಯ ಬೆಳಗ್ಗೆ ಶಾಲೆ, ಕಾಲೇಜುಗಳಿಗೆ ತೆರಳಲು, ಸಂಜೆ ವಾಪಸ್ಸು ಊರಿಗೆ ಹೋಗಲು ವಿದ್ಯಾರ್ಥಿಗಳ ತೀವ್ರ ಪರದಾಟ ಅನುಭವಿಸುತ್ತಿದ್ದಾರೆ. ಇರುವ ಬಸ್‌ಗಳಲ್ಲೆಲ್ಲ ಮಹಿಳೆಯರೇ ತುಂಬಿದ್ದು, ವಿದ್ಯಾರ್ಥಿಗಳಿಗೆ ಬಸ್‌ ಹತ್ತಲೂ ಅವಕಾಶ ಸಿಗುತ್ತಿಲ್ಲ. ಇದರಿಂದ ಕಾಲೇಜಿಗೆ ಹೋಗಲು ಕಷ್ಟವಾಗುತ್ತಿದೆ. ಕೆಲವೊಮ್ಮೆ ಬೇರೆ ಯಾವ ಯಾವುದೋ ವಾಹನ ಹತ್ತಿ ಹೋದರೂ ಕಾಲೇಜಿಗೆ ತಡವಾಗುತ್ತದೆ. ಅದಕ್ಕೂ ದುಬಾರಿ ಬೆಲೆ ತೆತ್ತು ಹೋಗಬೇಕು ಎಂಬ ಆಕ್ರೋಶ ವಿದ್ಯಾರ್ಥಿಗಳದ್ದು.

ಕೆರಕಲಮಟ್ಟಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

ವಿವಿಧ ಗ್ರಾಮಗಗಳಿಂದ ಕಾಲೇಜ್ ಗೆ ಹೋಗುವ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಎದುರಾಗುತ್ತಿದೆ. ಇರುವ ಒಂದೆರಡು ಬಸ್‌ಗಳನ್ನು ಮಹಿಳೆಯರೇ ಆಕ್ರಮಿಸಿಕೊಂಡು ಬಿಟ್ಟರೆ, ನಾವು ಹೇಗೆ ಹೋಗುವುದು ಎಂದು ಅವರು ಪ್ರಶ್ನಿಸಿದ್ದಾರೆ. ಈಗಾಗಲೇ ಹಲವು ಬಾರಿ ಹೆಚ್ಚಿನ ಬಸ್ ಬಿಡುವಂತೆ ವಿದ್ಯಾರ್ಥಿಗಳು ಮನವಿ ಕೊಟ್ಟಿದ್ದಾರೆ. ಆದರೆ, ಅಧಿಕಾರಿಗಳಿಂದ ಇನ್ನೂ ಸ್ಪಂದನೆ ಸಿಕ್ಕಿಲ್ಲ.

ಪ್ರಮುಖವಾಗಿ ಶೆಲ್ಲಿಕೇರಿ, ನೀರ ಬೂದಿಹಾಳ, ಗಂಗನಬೂದಿಹಾಳ, ಯಂಡಿಗೇರಿ, ಕೆರಕಲಮಟ್ಟಿ ಗ್ರಾಮಗಳ ಮೂಲಕ ಬರೋ ಬಸ್‌ಗಳಲ್ಲಿ ಈ ಸಮಸ್ಯೆ ಇದೆ. ಈ ಭಾಗದಲ್ಲಿ ಮೊದಲೇ ಸರಿಯಾದ ಸಂಖ್ಯೆಯಲ್ಲಿ, ಪ್ರಯಾಣಿಕರಿಗೆ ಪೂರಕವಾಗಿ ಬಸ್‌ಗಳಿಲ್ಲ. ಈಗಂತೂ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಆದರೆ, ಬಸ್‌ಗಳೇ ಇಲ್ಲ. ಒಂದೋ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಇಲ್ಲವಾದರೆ ಶಕ್ತಿ ಯೋಜನೆಯನ್ನು ನಿಲ್ಲಿಸಬೇಕು ಎನ್ನುವುದು ಇಲ್ಲಿನ ಸಾಮಾನ್ಯರ ಆಗ್ರಹ.

ಯಾಕೆಂದರೆ, ಇಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ, ಕಚೇರಿಗಳಿಗೆ, ಉದ್ಯೋಗಕ್ಕೆ ಹೋಗುವವರಿಗೂ ಶಕ್ತಿ ಯೋಜನೆ ಮಾರಕ ಹೊಡೆತವನ್ನು ನೀಡಿದೆ. ನಿತ್ಯ ಬಸ್‌ನಲ್ಲಿ ಹೋಗಿ ಬರುತ್ತಿದ್ದ ಅವರಿಗೆ ಈಗ ಬಸ್‌ಗಳೇ ಸಿಗುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Free Bus service: ಮಹಿಳಾ ಪ್ರಯಾಣಿಕರ ಜತೆ ಸೌಜನ್ಯದಿಂದ ವರ್ತಿಸಲು KSRTC ಸೂಚನೆ

Exit mobile version