ಬೆಂಗಳೂರು: ʻʻನಾನು ಭಾರಿ ಭಕ್ತಿಯಿಂದ ಈ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿದ್ದೆ. ದೇವರ ಪಾತ್ರ ಮಾಡುತ್ತಿದ್ದೇನೆ ಅಂತ ಖುಷಿ ಆಗುತ್ತಿತ್ತು. ನಾನು ೨೫ ದಿನದಿಂದ ಸಸ್ಯಾಹಾರದಲ್ಲೇ ಇದ್ದೆ. ನೃತ್ಯ ಮಾಡುತ್ತಲೇ ಏನಾಯ್ತು ಅಂತಾನೇ ಗೊತ್ತಾಗಲಿಲ್ಲ. ಒಂದು ಪಾಸಿಟೀವ್ ವೈಬ್ರೇಷನ್ ಪಾಸ್ ಆದ ಹಾಗಾಯ್ತು. ಆ ಬಳಿಕ ನನ್ನ ಮೇಲೆ ನನಗೆ ಕಂಟ್ರೋಲ್ ಸಿಗಲಿಲ್ಲʼʼ- ಹೀಗೆಂದು ತಮ್ಮ ಅನುಭವ ಹೇಳಿಕೊಂಡಿದ್ದಾರೆ ಹೊಂಬೇಗೌಡ ಪಿಯು ಕಾಲೇಜಿನ ವಿದ್ಯಾರ್ಥಿ ವಿಶಾಲ್. ಬೆಂಗಳೂರಿನ ಗಾಯತ್ರಿ ನಗರದಲ್ಲಿರುವ ಹೊಂಬೇಗೌಡ ಪಿಯು ಕಾಲೇಜಿನಲ್ಲಿ ಶನಿವಾರ ರಾತ್ರಿ ಆನ್ಯುವಲ್ ಡೇ ಫಂಕ್ಷನ್ ವೇಳೆ ಕಾಂತಾರ ಸಿನಿಮಾದ (Kantara movie) ವರಾಹ ರೂಪಂ ಹಾಡಿಗೆ ಪಂಜುರ್ಲಿ ವೇಷಭೂಷಣ ಧರಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿಶಾಲ್ ನೃತ್ಯ ಪ್ರದರ್ಶನ ಮಾಡಿದ್ದರು.
ಹಾಡಿಗೆ ನರ್ತಿಸುತ್ತಿದ್ದ ವಿಶಾಲ್ ಇದ್ದಕ್ಕಿದ್ದಂತೆ ವೇದಿಕೆಯಿಂದ ಕೆಳಗಿಳಿದು ಹುಚ್ಚು ಆವೇಶದಲ್ಲಿ ನರ್ತಿಸಲು ಆರಂಭಿಸಿದಾಗ ನಾಲ್ಕೈದು ಮಂದಿ ಆತನನ್ನು ಸಮಾಧಾನಪಡಿಸಿದರೂ ಸಾಧ್ಯವಾಗಿಲ್ಲ. ಹೀಗಾಗಿ ಆಯೋಜಕರು ಹಾಡು ನಿಲ್ಲಿಸಿದ್ದಾರೆ. ವಿದ್ಯಾರ್ಥಿಯ ಆರ್ಭಟ ಕಂಡು ಪೋಷಕರು, ವಿದ್ಯಾರ್ಥಿಗಳು, ಕಾಲೇಜು ಸಿಬ್ಬಂದಿಗಳು ಶಾಕ್ ಆದರು.
ಈ ಘಟನೆಯ ಬಗ್ಗೆ ವಿಸ್ತಾರ ನ್ಯೂಸ್ ಜತೆ ತನ್ನ ಅನುಭವ ಹಂಚಿಕೊಂಡ ವಿದ್ಯಾರ್ಥಿ ವಿಶಾಲ್, ಒಮ್ಮೆ ದೇಹ ಕಂಪಿಸಲು ಆರಂಭವಾದ ಮೇಲೆ ನನಗೆ ಕಂಟ್ರೋಲ್ ಮಾಡಲು ಆಗಲಿಲ್ಲ. ಎಲ್ಲರೂ ನನ್ನನ್ನು ಗಟ್ಟಿಯಾಗಿ ಹಿಡಿದು ಒಂದು ಕಡೆ ಕೂರಿಸಿದರು. ಮುಖಕ್ಕೆ ನೀರು ಸಿಂಪಡಿಸಿದಾಗ ಎಚ್ಚರವಾಯಿತು ಎಂದಿದ್ದಾನೆ.
ದೈವದ ವೇಷ ಧರಿಸುವ ಮೊದಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ನನ್ನ ಕೊರಿಯೋಗ್ರಾಫರ್ ಹೇಳಿಕೊಟ್ಟಂತೆ ಸಿದ್ಧನಾಗುತ್ತಿದ್ದೆ. ತರಬೇತಿ ಪಡೆದ ಸುಮಾರು ೨೦-೨೫ ದಿನ ಸಸ್ಯಾಹಾರವನ್ನೇ ಸೇವಿಸುತ್ತಿದ್ದೆ ಎಂದು ವಿಶಾಲ್ ಹೇಳಿದ್ದಾನೆ.
ಇದನ್ನೂ ಓದಿ : Amit shah in Karavali : ಅಮಿತ್ ಶಾ ಕೂಡಾ ಕಾಂತಾರ ಸಿನಿಮಾ ನೋಡಿದ್ದಾರಂತೆ! ಅವರು ಕಾಂತಾರ ಕತೆ ಹೇಳಿದ್ಯಾಕೆ?