ಚಿಕ್ಕಮಗಳೂರು: ಕಾಫಿ ನಾಡು ಚಂದು ಯಾರಿಗೆ ಗೊತ್ತಿಲ್ಲ ಹೇಳಿ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿರುವ ಚಿಕ್ಕಮಗಳೂರಿನ ರಿಕ್ಷಾ ಡ್ರೈವರ್ ಇವರು. ʻನಾನು ಶಿವಣ್ಣ.. ಪುನೀತಣ್ಣನ ಅಭಿಮಾನಿʼ ಎಂದು ಹೇಳುತ್ತಲೇ ಪಟಪಟಾಂತ ಮಾತನಾಡುವ ಅತಿ ಸಾಮಾನ್ಯ ವ್ಯಕ್ತಿ ಇವರು. ಅವರ ಕೈಯಲ್ಲಿ ಹುಟ್ಟುಹಬ್ಬ ಹೇಳಿಸಿಕೊಳ್ಳಲು ಸಾವಿರಾರು ಮಂದಿ ಕಾಯುತ್ತಿರುತ್ತಾರೆ. ಶುಭಾಶಯವನ್ನು ಅತ್ಯಂತ ವಿಶಿಷ್ಟ ಶೈಲಿಯಲ್ಲಿ ಹೇಳುವ ಇವರ ಶೈಲಿಯನ್ನು ಬಿಗ್ ಬಾಸ್‌ನಂಥ ವೇದಿಕೆಯಲ್ಲೂ ಅನುಕರಿಸುವಷ್ಟು ಅದು ಸ್ಪೆಷಲ್.
ಇಂಥ ಕಾಫಿ ನಾಡು ಚಂದು ಅವರು ಶುಕ್ರವಾರ ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಭಾಗವಹಿಸಿದ್ದ ಮಕ್ಕಳು ಅಭಿಮಾನದಿಂದ ಮುತ್ತಿಕೊಂಡ ರೀತಿಯಿಂದ ಸ್ವತಃ ಕಾಫಿ ನಾಡು ಚಂದು ಕಣ್ಣೀರಾದರು.
ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಬಂದ ಕಾಫಿ ನಾಡು ಚಂದುವನ್ನು ನೋಡಿದೊಡನೆ ಜೋರಾಗಿ ಬೊಬ್ಬೆ ಹೊಡೆಯುತ್ತಾ ಮುತ್ತಿಕೊಂಡ ವಿದ್ಯಾರ್ಥಿಗಳು ಅಪೂರ್ವ ಅಭಿಮಾನ ಮೆರೆದರು. ಚಂದೂ ಅಣ್ಣ ಚಂದೂ ಅಣ್ಣ ಎಂದು ಕೆಲವರು ಕರೆದರೆ, ಇನ್ನು ಕೆಲವರು ಚಂದೂ ಅಣ್ಣ.. ಚಂದೂ ಅಣ್ಣ ವಿ ಲವ್ ಯೂ ಅಂತ ಮುತ್ತಿಗೆಯನ್ನೇ ಹಾಕಿದರು.
ಮಕ್ಕಳ ಅಭಿಮಾನವನ್ನು ಕಂಡ ಕಾಫಿ ನಾಡು ಚಂದು ಬಿಕ್ಕಳಿಸಿ ಬಿಕ್ಕಳಿಸಿ ಅತ್ತರು. ʻʻನಿಮ್ಮ ಅಭಿಮಾನಕ್ಕೆ ಕಣ್ಣೀರೇ ನಿಲ್ಲುತ್ತಿಲ್ಲʼ ಎಂದು ಚಂದು ಹೇಳಿಕೊಂಡರು. ವಿದ್ಯಾರ್ಥಿಗಳ ಅಭಿಮಾನಕ್ಕೆ ಸುಸ್ತಾಗಿ ಹೋದ ಕಾಫಿ ನಾಡು ಚಂದು ಮಕ್ಕಳ ಕೈಯಿಂದ ತಪ್ಪಿಸಿಕೊಳ್ಳಲು ಹೆಣಗಾಡಬೇಕಾಯಿತು. ಚಂದುವನ್ನು ಮುತ್ತಿಕೊಂಡ ವಿದ್ಯಾರ್ಥಿಗಳನ್ನು ಸಂಭಾಳಿಸುವಲ್ಲಿ ಶಿಕ್ಷಕರು ಹೈರಾಣರಾದರು. ಕೊನೆಗೆ ಶಿಕ್ಷಕರ ಖಡಕ್ ಸೂಚನೆ ಬಂದ ಮೇಲೆಯೇ ವಿದ್ಯಾರ್ಥಿಗಳು ಚಂದುವನ್ನು ಬಿಟ್ಟು ದೂರ ಸರಿದರು.
ಇದನ್ನೂ ಓದಿ | ಕೋಟಿ ಕಂಠ ಗಾಯನ | ಕೋಟಿ ಕೋಟಿ ಕಂಠಗಳಲ್ಲಿ ಮೊಳಗಿತು ಕನ್ನಡದ ಗಾನ: ನೆಲ, ಜಲ, ಆಕಾಶದಲ್ಲೆಲ್ಲ ಅನುರಣನ