ಗದಗ: ಚಿತ್ರದುರ್ಗದಲ್ಲಿ ಆಪರೇಶನ್ ಥಿಯೇಟರ್‌ನಲ್ಲಿ ಪ್ರಿ ವೆಡ್ಡಿಂಗ್ ಫೋಟೊಶೂಟ್ (Pre Wedding Photoshoot) ಮಾಡಿಸಿದ ವೈದ್ಯನ ವಜಾ ಬೆನ್ನಲ್ಲೇ ಗದಗ ಜಿಲ್ಲಾಸ್ಪತ್ರೆಯಲ್ಲಿ (Gadag District Government Hospital) ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಜಿಲ್ಲಾಸ್ಪತ್ರೆಯನ್ನೇ ರೀಲ್ಸ್ ಸ್ಪಾಟ್ ಮಾಡಿಕೊಂಡಿದ್ದಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದರು. ಹೀಗಾಗಿ ಒಟ್ಟು 38 ವಿದ್ಯಾರ್ಥಿಗಳಿಗೆ ಅಮಾನತು ಶಿಕ್ಷೆ ನೀಡಲಾಗಿದೆ.
ಆಸ್ಪತ್ರೆ ಕಾರಿಡಾರ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮಾಡಿದ್ದ ರೀಲ್ಸ್ ಸಾಕಷ್ಟು ವೈರಲ್ ಆಗಿತ್ತು. ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿದ್ದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ಈ ಕುರಿತು ಶುಕ್ರವಾರ ಬೆಳಗ್ಗೆಯಷ್ಟೇ ವಿಸ್ತಾರ ನ್ಯೂಸ್ ವಿಸ್ಕೃತ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳನ್ನು ಅಮಾನತು ಮಾಡಿ ಜೀಮ್ಸ್ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ಆದೇಶ ಹೊರಡಿಸಿದ್ದಾರೆ. 38 ವಿದ್ಯಾರ್ಥಿಗಳಿಗೆ 10 ದಿನಗಳ ಕಾಲ ಅಮಾನತು ಶಿಕ್ಷೆ ನೀಡಲಾಗಿದೆ.
ಆಸ್ಪತ್ರೆಯಲ್ಲಿ ಈ ರೀತಿ ಮಾಡಿರುವುದು ದೊಡ್ಡ ಅಪರಾಧ. ರೋಗಿಗಳಿಗೆ ಅನಾನುಕೂಲ ಆಗೋ ರೀತಿ ನಡೆದುಕೊಂಡಿರುವುದು ಖಂಡಿತಾ ತಪ್ಪು. ರೀಲ್ಸ್ ಮಾಡಿರೋ ಎಲ್ಲರೂ MBBS ಪೂರ್ಣಗೊಳಿಸಿ ಹೌಸ್ ಮೆನ್‌ಶಿಪ್‌ನಲ್ಲಿದ್ದಾರೆ. ಅವರಿಗೆ ಸಿಗಬೇಕಾಗಿದ್ದ ಪೋಸ್ಟಿಂಗ್ ಹತ್ತು ದಿನಗಳ ಕಾಲ ತಡವಾಗಿ ಸಿಗುತ್ತೆ. ಈ ರೀತಿ ವಿಡಿಯೋ ಮಾಡೋದಕ್ಕೆ ನಾವ್ಯಾರೂ ಅನುಮತಿ ಕೊಟ್ಟಿಲ್ಲ. ಯಾರೇ ಇರಲಿ, ಆಸ್ಪತ್ರೆಯಲ್ಲಿ ಈ ರೀತಿ ಮಾಡಿದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಆಪರೇಷನ್ ಥಿಯೇಟರ್‌ನಲ್ಲೇ ಪ್ರಿ ವೆಡ್ಡಿಂಗ್ ಶೂಟ್; ಕೆಲಸದಿಂದ ಡಾಕ್ಟರ್ ವಜಾ
ಚಿತ್ರದುರ್ಗ: ಪ್ರಿವೆಡ್ಡಿಂಗ್ ಶೂಟ್ (Prewedding Shoot) ಹೆಸರಲ್ಲಿ ಎಲ್ಲೆಲ್ಲೋ ಹೋಗುವುದು, ಹೇಗೇಗೋ ವಿಡಿಯೋ ಮಾಡುವುದು, ಅಶ್ಲೀಲವಾಗಿ ನಡೆದುಕೊಳ್ಳುವುದನ್ನು ನೋಡಿದ್ದೇವೆ. ಹೀಗಾಗಿಯೇ ಹಲವಾರು ಕಡೆಗಳಲ್ಲಿ ಪ್ರಿ ವೆಡ್ಡಿಂಗ್ ಶೂಟ್‌ಗೆ ಅನುಮತಿ ನಿರಾಕರಿಸಲಾಗಿದೆ. ಈ ನಡುವೆ, ಆಸ್ಪತ್ರೆಯ ಆಪರೇಶನ್ ಥಿಯೇಟರ್‌ನಲ್ಲೇ (Operation Theatre) ವೈದ್ಯರೊಬ್ಬರು ಪ್ರಿ ವೆಡ್ಡಿಂಗ್ ಶೂಟ್ ನಡೆಸಿ ವಿವಾದಕ್ಕೆ ಒಳಗಾಗಿದ್ದಾರೆ. ಅವರಿಗೆ ಈಗ ಕೆಲಸದಿಂದ ವಜಾ ಮಾಡುವ ಶಿಕ್ಷೆಯೂ (Doctor Dismissed) ಸಿಕ್ಕಿದೆ.
ಭರಮಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಅಭಿಷೇಕ್ ಅವರು ತಮ್ಮ ಭಾವಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಫೋಟೊ ಶೂಟ್ ಮಾಡಿದ್ದು ವೈರಲ್ ಆಗಿತ್ತು.
ಪ್ರೀವೆಡ್ಡಿಂಗ್ ಶೂಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆಯೇ ಇದೀಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಹೊರಗುತ್ತಿಗೆ ವೈದ್ಯ ಡಾ. ಅಭಿಷೇಕ್ ಅವರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ.
ವಿಡಿಯೊದಲ್ಲಿ ಏನಿದೆ?
ಈ ವಿಡಿಯೊವನ್ನು ಭರಮಸಾಗರ ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ಮಾಡಲಾಗಿದೆ. ಡಾ. ಅಭಿಷೇಕ್ ಅವರು ಆಪರೇಷನ್ ದಿರಸಿನಲ್ಲಿದ್ದಾರೆ. ಅವರು ಆಪರೇಷನ್ ಟೇಬಲ್‌ನಲ್ಲಿ ಮಲಗಿದ ಯಾರಿಗೋ ಆಪರೇಷನ್ ಮಾಡುತ್ತಿರುವಂತೆ ಅವರ ಪತ್ನಿ ಎದುರು ನಿಂತು ಸಹಾಯ ಮಾಡುವಂತೆ ಚಿತ್ರೀಕರಣ ನಡೆಸಲಾಗಿದೆ. ಈ ಶೂಟಿಂಗ್ ವೇಳೆ ಅವರ ಸಹಾಯಕರು ಮತ್ತು ಇತರರ ನಗುತ್ತಿದ್ದಾರೆ.
ಇದನ್ನೂ ಓದಿ : Love Case : ಒಂದೇ ಶಾಲೆಯ ಶಿಕ್ಷಕ-ಶಿಕ್ಷಕಿ ಲವ್ವಿ ಡವ್ವಿ; ರೆಡ್ ಹ್ಯಾಂಡ್ ಆಗಿ ಹಿಡಿದ ಹೆಂಡ್ತಿ!
ಆಪರೇಷನ್ ಥಿಯೇಟರನ್ನು ಇಂಥ ಕೆಲಸಗಳಿಗೆ ಬಳಸಿಕೊಂಡು ಅದರ ಘನತೆಯನ್ನು ಕಡಿಮೆ ಮಾಡಲಾಗಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿ ಖಾಸಗಿ ಶೂಟಿಂಗ್ ನಡೆಸಬಾರದಿತ್ತು ಎಂಬ ಅಭಿಪ್ರಾಯವೂ ಇದೆ.