ಧಾರವಾಡ: ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಸುದರ್ಶನ ಹೋಮ ಮಾಡಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಒ. ಕರೀಗೌಡರ ಅವರಿಗೆ ನೋಟಿಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಸೂಚನೆ ನೀಡಿದ್ದಾರೆ.
ಡಿಎಚ್‌ಒ ಅವರ ಕಚೇರಿಯಲ್ಲಿ ಇತ್ತೀಚೆಗೆ ಸುದರ್ಶನ ಹೋಮ ನಡೆಸಲಾಗಿತ್ತು. ಗಣೇಶ ಹಬ್ಬದ ಹಿನ್ನೆಲೆ ಮತ್ತು ಇತ್ತೀಚೆಗೆ ಒಬ್ಬ ವ್ಯಕ್ತಿ ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂಬ ಕಾರಣಕ್ಕಾಗಿ ಸುದರ್ಶನ ಹೋಮ ಮಾಡಲಾಗಿತ್ತು ಎನ್ನಲಾಗಿದೆ.
ಈ ವಿಷಯವನ್ನು ತಿಳಿದ ಜಿಲ್ಲಾ ಉಸ್ತುವಾಗಿ ಸಚಿವ ಹಾಲಪ್ಪ ಆಚಾರ್ ಅವರು ಮೊದಲು ಈ ಕ್ರಮವನ್ನು ಸಮರ್ಥನೆ ಮಾಡಿಕೊಂಡರು. ʻʻಸರ್ಕಾರಿ ಕಚೇರಿಗೆ ಒಳ್ಳೆಯದಾಗಲಿ ಅನ್ನೋ ಕಾರಣಕ್ಕೆ ಮಾಡಿರಬಹುದು. ಒಳ್ಳೆಯ ಉದ್ದೇಶದಿಂದ ಹೋಮ ಮಾಡಿರಬಹುದುʼʼ ಎಂದರು. ಬಳಿಕ ʻಆದರೆ ಸರ್ಕಾರಿ ಕಚೇರಿಯಲ್ಲಿ ಆ ರೀತಿ ಮಾಡಲು ಅವಕಾಶವಿಲ್ಲ… ಹೀಗಾಗಿ ಡಿಎಚ್‌ಒಗೆ ನೋಟಿಸ್ ನೀಡಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ʻʻಈ ಸುದರ್ಶನ ಹೋಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ. ದೇವರ ಮೇಲೆ ನಂಬಿಕೆ ಇದ್ದವರು ಹೀಗೆ ಮಾಡುತ್ತಾರೆʼʼ ಎಂದೂ ಹಾಲಪ್ಪ ಆಚಾರ್ ಹೇಳಿದರು.
ಪೂಜೆ ಮಾಡಬಾರದೇ?: ಹೊಸ ಜಿಜ್ಞಾಸೆ
ಜಿಲ್ಲಾ ಆರೋಗ್ಯಾಧಿಕಾರಿಯವರು ಸುದರ್ಶನ ಹೋಮ ಮಾಡಿದ್ದು ಚರ್ಚೆಗೆ ಗ್ರಾಸವಾಗಿರುವುದು ಜಿಜ್ಞಾಸೆಯನ್ನೂ ಹುಟ್ಟುಹಾಕಿದೆ. ಸಾಮಾನ್ಯವಾಗಿ ಸರಕಾರಿ ಕಚೇರಿಗಳಲ್ಲಿ ಪೂಜೆ ಮಾಡುವುದು ಇರುತ್ತದೆ. ಸಚಿವರುಗಳೇ ತಾವು ಅಧಿಕಾರ ವಹಿಸಿಕೊಳ್ಳುವಾಗ ಪೂಜೆ ಮಾಡಿಸುತ್ತಾರೆ. ಹೀಗಿರುವಾಗ ಇಲ್ಲಿ ಪೂಜೆ ಮಾಡಿದ್ದರ ಬಗ್ಗೆ ಆಕ್ಷೇಪ ಯಾಕೆ ಎಂಬ ಜಿಜ್ಞಾಸೆ ಹುಟ್ಟಿಕೊಂಡಿದೆ. ಜತೆಗೆ ಸರ್ಕಾರಿ ನಡಾವಳಿಯಲ್ಲಿ ಪೂಜೆ ಮಾಡಿಸಬಾರದು ಎಂಬ ಅಂಶ ಇದೆಯೇ ಎಂಬ ಬಗ್ಗೆ ಚರ್ಚೆ ಉಂಟಾಗಿದೆ. ಈ ನಡುವೆ ಗಮನ ಸೆಳೆಯುವ ಇನ್ನೊಂದು ಅಂಶವೆಂದರೆ, ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಎಂಬ ಕಾರಣಕ್ಕೆ ಸುದರ್ಶನ ಹೋಮ ಮಾಡಿಸಿದರೆ ಅದು ಒಂದು ರೀತಿಯಲ್ಲಿ ಮೌಢ್ಯ ಬಿತ್ತಿದಂತೆ. ಹಾಗಾಗಿ ಸರ್ಕಾರಿ ಕಚೇರಿಯಲ್ಲಿ ನಡೆದಿರುವುದು ಆಕ್ಷೇಪಾರ್ಹ ಎಂಬ ಅಭಿಪ್ರಾಯವೂ ಇದೆ.