Site icon Vistara News

Sugar Cane | ಟನ್ ಕಬ್ಬಿಗೆ 5500 ರೂಪಾಯಿ ನೀಡಲು ಆಗ್ರಹಿಸಿ ಸುವರ್ಣಸೌಧದೆದುರು ರೈತರ ಪ್ರತಿಭಟನೆ

protest

ಬೆಳಗಾವಿ: ಪ್ರತಿ ಟನ್ ಕಬ್ಬಿಗೆ (Sugar Cane) 5500 ರೂ. ದರ ನಿಗದಿ ಮಾಡುವಂತೆ ಒತ್ತಾಯಿಸಿ ಸುವರ್ಣಸೌಧ ಎದುರು ರೈತರು ಸೋಮವಾರ ದಿಢೀರ್‌ ಪ್ರತಿಭಟನೆ ನಡೆಸಿದ್ದು, ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹೊರವಲಯದ ಸುವರ್ಣವಿಧಾನಸೌಧ ಬಳಿ ರೈತ ಮುಖಂಡ ಶ್ರೀಶೈಲ ಅಂಗಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಅಥಣಿ, ನಿಪ್ಪಾಣಿ ತಾಲೂಕಿನ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ತಕ್ಷಣ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾನಿರತ ರೈತರ ಮಧ್ಯೆ ತಳ್ಳಾಟ, ನೂಕಾಟಗಳು ಆಗಿವೆ. ಆದರೂ ಪಟ್ಟು ಬಿಡದ ರೈತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಪ್ರತಿ ಟನ್‌ ಕಬ್ಬಿಗೆ ೫೫೦೦ ರೂಪಾಯಿ ದರವನ್ನು ಸರ್ಕಾರ ನಿಗದಿ ಮಾಡಬೇಕು. ಒಂದು ಟನ್ ಕಬ್ಬಿಗೆ ಸರ್ಕಾರಕ್ಕೆ ಕಾರ್ಖಾನೆಗಳಿಂದ 4500 ರೂ. ತೆರಿಗೆ ಹೋಗುತ್ತದೆ. ಹೀಗಾಗಿ ಅದರಲ್ಲಿ ರಾಜ್ಯ ಸರ್ಕಾರ 2000 ರೂಪಾಯಿ ಸಹಾಯಧನ ನೀಡಬೇಕು. ಕಾರ್ಖಾನೆಗಳು ರೈತರಿಗೆ ಪ್ರತಿ ಟನ್‌ಗೆ 3500 ರೂಪಾಯಿ ನೀಡಬೇಕು. ಒಟ್ಟಾರೆಯಾಗಿ ಪ್ರತಿ ಟನ್‌ ಕಬ್ಬಿಗೆ 5500 ರೂಪಾಯಿ ದರ ಘೋಷಣೆ ಮಾಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಮೂರು ದಿನದ ಹಿಂದಷ್ಟೇ ನಡೆದಿದ್ದ ಪ್ರತಿಭಟನೆ
ಮೂರು ದಿನದ ಹಿಂದೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನು ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್‌ಗೇಟ್ ಬಳಿಯೇ ತಡೆದಿದ್ದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಕಿತ್ತೂರು ಉತ್ಸವದಲ್ಲಿ ಯಾವುದೇ ಜನಪ್ರತಿನಿಧಿಗಳು ಭಾಗವಹಿಸುವಂತಿಲ್ಲ, ಒಂದು ವೇಳೆ ಸಿಎಂ ಭಾಗಿಯಾದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಸೋಮವಾರ ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದು, ಇದರ ಬೆನ್ನಲ್ಲೇ ರೈತರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ | Sugar Cane | ಟನ್‌ ಕಬ್ಬಿಗೆ ₹5,500 ನಿಗದಿಗೆ ಪಟ್ಟು; ಸುವರ್ಣಸೌಧ ಮುತ್ತಿಗೆಗೆ ಯತ್ನಿಸಿದ ರೈತರು ಪೊಲೀಸ್‌ ವಶಕ್ಕೆ

Exit mobile version