ಬಾಗಲಕೋಟೆ/ವಿಜಯಪುರ: ಕಬ್ಬು ಬೆಳೆಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ (Sugarcane protest) ಇನ್ನಷ್ಟು ತೀವ್ರಗೊಂಡಿದೆ. ಅದರಲ್ಲೂ ಮುಖ್ಯವಾಗಿ ಬಾಗಲಕೋಟೆ ಮತ್ತು ವಿಜಯಪುರದಲ್ಲಿ ಗುರುವಾರ ಹೆದ್ದಾರಿ ಬಂದ್ ಮಾಡಿ ಬೆಳೆಗಾರರು ಪ್ರತಿಭಟಿಸುತ್ತಿದ್ದಾರೆ. ಮುಧೋಳ ತಾಲೂಕಿನಲ್ಲಿ ಅತಿ ದೊಡ್ಡ ಪ್ರತಿಭಟನೆ ನಡೆಯುತ್ತಿದ್ದು, ಇಡೀ ಪ್ರದೇಶದ ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದೆ.
ಬಾಗಲಕೋಟೆಯ ಗದ್ದನಕೇರಿ ಕ್ರಾಸ್‌ನ್ನು ಬಂದ್ ಮಾಡಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರು ಗದ್ದನಕೇರಿ ಕ್ರಾಸ್ ಬಂದ್ ಮಾಡಿರುವುದರಿಂದ ಹುಬ್ಬಳ್ಳಿ-ಸೊಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೨೧೮ ಬಂದ್ ಆಗಿದೆ. ಹೀಗಾಗಿ ಹುಬ್ಬಳ್ಳಿ- ಸೊಲ್ಲಾಪುರ, ಬೆಳಗಾವಿ- ರಾಯಚೂರು ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸಂಚಾರವೇ ಇಲ್ಲದಾಗಿದೆ.
ಬೀಳಗಿ, ಮುಧೋಳ ಭಾಗದ ರೈತರು ಬಂದು ಪ್ರತಿಭಟನೆ ನಡೆಸುತ್ತಿರುವುದರಿಂದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ೨೧೮ರ ರಸ್ತೆ ಸಂಚಾರವೇ ಸ್ತಬ್ಧಗೊಂಡಿದೆ. ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಅನಗವಾಡಿ ಸೇತುವೆಯನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ಸೇತುವೆಯಲ್ಲಿ ನೂರಾರು ವಾಹನಗಳು, ರಸ್ತೆಯಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಾರ್ಖಾನೆ ಶುರು ಮಾಡುವ ಮೊದಲು ಬೆಲೆ ನಿಗದಿ ಮಾಡಿ
ʻʻರೈತರು ನ್ಯಾಯಯುತ ಬೆಲೆಯನ್ನು ಕೇಳುತಿದ್ದಾರೆ. ಆದರೆ ಸರ್ಕಾರ, ಜಿಲ್ಲಾಡಳಿತ ನ್ಯಾಯಯುತ ಬೆಲೆ ನೀಡುವಲ್ಲಿ ವಿಫಲವಾಗಿದೆ. ಸಚಿವತ್ರಯರ ಮಧ್ಯಸ್ಥಿಕೆಯ ಸಭೆ ಕೂಡಾ ಸಫಲವಾಗಿಲ್ಲ. ಜಿಲ್ಲೆಯ ಎಲ್ಲ ಕಾರ್ಖಾನೆಗಳು ಒಂದೇ ಬೆಲೆ ನೀಡಬೇಕು. ಕಳೆದ ಸಾರಿ ೨೭೦೦ ರೂಪಾಯಿಯನ್ನು ನೀಡಿದ್ದರು. ಆದರೆ ಬಾಗಲಕೋಟೆ ಭಾಗದಲ್ಲಿದ್ದ ಸಚಿವ ಮುರುಗೇಶ್ ನಿರಾಣಿ ಒಡೆತನದ ಕಾರ್ಖಾನೆಗಳು ೨೬೦೦ ರೂ. ನೀಡಿವೆ. ಎಸ್.ಆರ್. ಪಾಟೀಲರಿಗೆ ಸೇರಿದ ಕಾರ್ಖಾನೆಯಲ್ಲಿ ಕಳೆದ ವರ್ಷ ೨೦೦ ರೂ. ಕಡಿಮೆ ಕೊಡಲಾಗಿದೆ. ಈಗ ಸದ್ಯ ಮುರುಗೇಶ್ ನಿರಾಣಿ ಒಡೆತನದ ಮೂರು ಕಾರ್ಖಾನೆಗಳು ಆರಂಭಗೊಂಡಿವೆ. ಆದರೆ, ನ್ಯಾಯಯುತ ಬೆಲೆ ಘೋಷಣೆ ಮಾಡಲಾಗಿಲ್ಲ. ಹೀಗಾಗಿ ನ್ಯಾಯಯುತ ಬೆಲೆ ಘೋಷಣೆ ಮಾಡಿ ಕಾರ್ಖಾನೆ ಪ್ರಾರಂಭ ಮಾಡಬೇಕುʼʼ ಎಂದು ರೈತ ಮುಖಂಡ ಯಲ್ಲಪ್ಪ ಹೆಗಡೆ ಕಾರ್ಖಾನೆ ಮಾಲೀಕರಿಗೆ ಮನವಿ ಮಾಡಿದರು.
ವಿಜಯಪುರದಲ್ಲಿ
ವಿಜಯಪುರ: ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ದರ ನಿಗದಿ ಮಾಡುತ್ತಿಲ್ಲ ಎಂದು ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಸಮೀಪ ಇರುವ ಬಸವೇಶ್ವರ ಸಕ್ಕರೆ ಕಾರ್ಖಾನೆ ಎದುರು ಇರುವ ರಾಷ್ಟ್ರೀಯ ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದಿಂದ ಪ್ರತಿಭಟನೆ ಮಾಡಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರೈತರು ಬೇಡಿಕೆಯಂತೆ ಕಬ್ಬಿನ ಸೂಕ್ತ ದರ ಮಾಡುವಲ್ಲಿ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಯ ಮಾಲೀಕರು ನಿರ್ಲಕ್ಷ್ಯತನ ತೋರುತ್ತಿದ್ದಾರೆ. ಒಂದು ಟನ್ ಕಬ್ಬಿಗೆ 2900 ₹ ದರವನ್ನು ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ | ಕಬ್ಬು ಬೆಲೆ ಆಗ್ರಹಿಸಿ ಎರಡನೇ ದಿನವೂ ಮುಂದುವರಿದ ಮುಧೋಳ ಬಂದ್