ಕಡಬ: ಕೆ.ಎಸ್.ಆರ್.ಟಿ.ಸಿ ಚಾಲಕನ ಮೃತದೇಹ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಪತ್ತೆಯಾದ ಘಟನೆ ಏಪ್ರಿಲ್ 7 ರಂದು ನಡೆದಿದೆ. ರಾತ್ರಿ ಕರ್ತವ್ಯದಿಂದ ಇಳಿದ ಪುತ್ತೂರು ವಿಭಾಗದ ಕೆಎಸ್ಆರ್ ಟಿಸಿ ಕಂಡಕ್ಟರ್ ಕಮ್ ಡ್ರೈವರ್ ಆಗಿರುವ ಕುಸುಮಾಧರ ಗೌಡ ಅಭೀರ (34) ಮೃತಪಟ್ಟವರು.
ಸುಮಾರು 8 ವರ್ಷಗಳಿಂದ ಕೆಎಸ್ಆರ್ ಟಿಸಿ ಉದ್ಯೋಗಿಯಾಗಿದ್ದ ಮೃತರು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ದುರ್ಘಟನೆ ಕಾಣಿಯೂರು ರೈಲ್ವೇ ಟ್ರ್ಯಾಕ್ ನಲ್ಲಿ ಮಧ್ಯರಾತ್ರಿ ನಡೆದಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎತ್ತಿನ ಗಾಡಿಗೆ ಬೈಕ್ ಡಿಕ್ಕಿ; ಪಟಾಕಿ ತರಲು ಹೊರಟ ಬಾಲಕರಿಬ್ಬರು ಮೃತ್ಯು
ಚಳ್ಳಕೆರೆ: ಅವರಿಬ್ಬರು ಇನ್ನೂ 16 ತುಂಬದ ವಿದ್ಯಾರ್ಥಿಗಳು. ಊರಿನಲ್ಲಿ ನಡೆಯುತ್ತಿದ್ದ ನಾಟಕದ ಅಂತ್ಯದಲ್ಲಿ ಸಿಡಿಸಲೆಂದು ಪಟಾಕಿ ತರಲು ಹೊರಟಿದ್ದರು. ಆದರೆ, ಅವರು ಹೊರಟಿದ್ದು ಬೈಕ್‌ನಲ್ಲಿ. ಗುರುವಾರ ನಸುಕಿನ ಜಾವ ಹೊರಟ ಅವರ ಬೈಕ್ ಮಾರ್ಗ ಮಧ್ಯೆ ಎತ್ತಿನಗಾಡಿಗೆ ಡಿಕ್ಕಿ ಹೊಡೆದಿದೆ. ಆ ಹುಡುಗರಿಬ್ಬರೂ ರಸ್ತೆಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಜತೆಗಿದ್ದ ಇನ್ನೊಬ್ಬ ಹುಡುಗನಿಗೂ ಗಾಯಗಳಾಗಿವೆ.
ಈ ಘಟನೆ ನಡೆದಿರುವುದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು ಚಳ್ಳಕೆರೆ- ಪಾವಗಡ ಮುಖ್ಯ ರಸ್ತೆಯ ಚೌಳೂರು ಗೇಟ್ ಸನಿಹದ ವೇದಾವತಿ ನದಿ ಸೇತುವೆ ಬಳಿ ನಡೆದಿದೆ. ಮೃತ ಬಾಲಕರನ್ನು ಅಲ್ಲಾಪುರ ಗ್ರಾಮದ ಕಿರಣ(15), ದಿಲೀಪ್ (14) ಎಂದು ಗುರುತಿಸಲಾಗಿದೆ.
ಕಿರಣ್ ಮತ್ತು ದಿಲೀಪ್ ತಮ್ಮ ಗ್ರಾಮದಲ್ಲಿ ನಡೆಯುತ್ತಿದ್ದ ನಾಟಕದ ಮುಕ್ತಾಯ ವೇಳೆ ಪಟಾಕಿ ಹಚ್ಚಬೇಕು ಎಂದುಕೊಂಡು ಸನಿಹದ ಪರಶುರಾಂಪುರ ಗ್ರಾಮಕ್ಕೆ ಪಟಾಕಿ ತರಲು ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಸಾಗುತ್ತಿದ್ದ ಅವರ ಬೈಕ್ ಎತ್ತಿನ ಬಂಡಿ ಹಿಂಬದಿಗೆ ಡಿಕ್ಕಿಯಾಗಿದೆ. ಇದರಿಂದ ದುರಂತ ಸಂಭವಿಸಿತು ಎಂದು ಗಾಯಾಳು ವೀರೇಶ ವಿವರಿಸಿದ್ದಾರೆ.
ಮೃತ ಕಿರಣ ಚೌಳೂರು ಗ್ರಾಮದ ವೀರಭದ್ರಸ್ವಾಮಿ ಗ್ರಾಮೀಣ ಪ್ರೌಢಶಾಲೆಯಲ್ಲಿ ಈ ಸಾರಿ ಎಸ್ ಎಸ್ ಎಲ್ ಸಿ ಓದುತ್ತಿದ್ದ. ಅವನು ಗುರುವಾರ ಇಂಗ್ಲಿಷ್ ಭಾಷೆ ಪರೀಕ್ಷೆಯನ್ನು ಬರೆಯಬೇಕಿತ್ತು. ಮೃತ ದಿಲೀಪ್ ಜುಂಜರಗುಂಟೆ ಗ್ರಾಮದ ಗಾದ್ರಿ ಪಾಲನಾಯಕ ಪ್ರೌಢಶಾಲೆಯ ಒಂಬತ್ತನೆ ತರಗತಿಯ ವಿದ್ಯಾರ್ಥಿ.
ಮೃತ ವಿದ್ಯಾರ್ಥಿಗಳು ಒಂದೇ ಕುಟುಂಬದ ಸಹೋದರ ಮಕ್ಕಳಾದ್ದರಿಂದ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.