ಚಿತ್ರದುರ್ಗ/ಕೊಪ್ಪಳ: ಚಿತ್ರದುರ್ಗದ ಹೊಳಲ್ಕೆರೆ ಪಟ್ಟಣದ ಸ್ಮಶಾನದ ಬಳಿ ಇರುವ ಮರಕ್ಕೆ ನೇಣು ಬಿಗಿದ (Suicide Case) ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ಕೊಳೆತ ಶವವು ಮರದಲ್ಲಿ ನೇತಾಡುತ್ತಿದ್ದನ್ನು ಕಂಡು ಸ್ಥಳೀಯರು ಭೀತಿಕೊಂಡು ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪೊಲೀಸ್ ಠಾಣೆಯಿಂದ ಈ ವ್ಯಕ್ತಿ ನಾಪತ್ತೆಯಾಗಿದ್ದ ಎಂದು ತಿಳಿದು ಬಂದಿದೆ. ಲಾರಿ ಚಾಲಕ ಬಸವಂತ ಕುಮಾರ್ (37) ಮೃತ ವ್ಯಕ್ತಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾ. ಕಟ್ಟಿಗೆಹಳ್ಳಿ ನಿವಾಸಿಯಾಗಿರುವ ಚಾಲಕ ಬಸವಂತ ಕುಮಾರ್, ಕಳೆದ ಜೂನ್ 5 ರಂದು ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದಿದ್ದರು. ದಂಡ ಕಟ್ಟಲು ಹಣವಿಲ್ಲದೆ ಲಾರಿ ಬಿಟ್ಟು ಚಾಲಕ ಬಸವಂತ ನಾಪತ್ತೆಯಾಗಿದ್ದ.
ಜೂನ್ 30ರ ಸಂಜೆ ಬಸವಂತ ಕುಮಾರ್ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದೆ. ಸದ್ಯ ಹೊಳಲ್ಕೆರೆ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲು ಆಗಿದ್ದು, ಪೊಲೀಸರು ಸ್ಥಳ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ.
ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ. ಬೋದೂರು ತಾಂಡಾದಲ್ಲಿ ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಠ್ಠಪ್ಪ ಗೋವಿಂದಪ್ಪ ಚವ್ಹಾಣ (56) ಮೃತ ದುರ್ದೈವಿ.
ಇದನ್ನೂ ಓದಿ: Maharashtra Bus Tragedy: ಬೆಂಕಿ ಬೀಳುತ್ತಿದ್ದಂತೆ ಬಸ್ ಕಿಟಕಿ ಒಡೆದು ಪಾರಾದೆವು ಎಂದ ಪ್ರಯಾಣಿಕ
ರೈತ ವಿಠ್ಠಪ್ಪ ಕೃಷಿಗಾಗಿ ಸಾಲ ಮಾಡಿಕೊಂಡಿದ್ದರು. ಆದರೆ ಸರಿಯಾದ ಸಮಯಕ್ಕೆ ಬೆಳೆ ಬಾರದೆ ಎಲ್ಲವೂ ನಾಶವಾಗಿತ್ತು. ಇತ್ತ ಸಾಲಬಾಧೆಯಿಂದ ನೊಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ