ಕಾರವಾರ: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೊಬ್ಬರು ನೇಣುಬಿಗಿದು ಆತ್ಮಹತ್ಯೆ (Suicide Case) ಮಾಡಿಕೊಂಡಿರುವ ಘಟನೆ ಹೊನ್ನಾವರದ ಕಾಸರಕೋಡು ಸಮೀಪ ಇಕೋಬೀಚ್ ಬಳಿ ನಡೆದಿದೆ. ರಾಮ ನಾಗೇಶಗೌಡ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಿಬ್ಬಂದಿ ಆಗಿದ್ದಾರೆ.
ಕುಮಟಾ ತಾಲೂಕಿನ ನಾಡುಮಾಸ್ಕೇರಿ ಮೂಲದ ರಾಮ ನಾಗೇಶಗೌಡ 2017ರ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡಿದ್ದರು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆನ್‌ಲೈನ್ ಆಟ ಹಾಗೂ ಸಾಕಷ್ಟು ಕಡೆ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಹೀಗಾಗಿ ಸಾಲದ ಬಾಧೆಯೂ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.
ಕಳೆದ 5 ದಿನಗಳಿಂದ ಮನೆಗೂ ಬಾರದೆ, ಕರ್ತವ್ಯಕ್ಕೂ ಹಾಜರಾಗದೇ ಹೊನ್ನಾವರದಲ್ಲಿ ಉಳಿದುಕೊಂಡಿದ್ದರು ಎಂದು ತಿಳಿದು ಬಂದಿದೆ. ಮಂಗಳವಾರ (ಫೆ.೭) ಬೆಳಗ್ಗೆ ಕಡಲತೀರದ ಬಳಿ ಇರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕೇಸರಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಸಮೀಪದಲ್ಲಿ ಬ್ಯಾಗ ಕೂಡ ಪತ್ತೆ ಆಗಿದ್ದು, ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದಾಗಿ ತಿಳಿದು ಬಂದಿದ್ದು, ಸಾವಿಗೆ ನಿಖರ ಕಾರಣ ತಿಳಿಯಬೇಕಿದೆ.
ಸದ್ಯ ಸ್ಥಳಕ್ಕೆ ಹೊನ್ನಾವರ ಪಿಎಸ್‌ಐ ಪ್ರವೀಣಕುಮಾರ ಹಾಗೂ ಆರ್.ಎಫ್.ಓ ವಿಕ್ರಂ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕುಡಿದ ನಶೆಯಲ್ಲಿ ಸ್ನೇಹಿತನಿಂದಲೇ ಅತ್ಯಾಚಾರ ಯತ್ನ; ಇಬ್ಬರನ್ನು ಬಂಧಿಸಿದ ವಿವೇಕ ನಗರ ಪೊಲೀಸರು