ವಿಜಯಪುರ: ಜಿಲ್ಲೆಯ ನಿಡಗುಂದಿ ಪಟ್ಟಣದ ಅಂಗಡಗೇರಿಯಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಹುಡುಗ-ಹುಡುಗಿ ಒಂದೇ ಮರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide Case) ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎನ್ನುವ ಬಗ್ಗೆ ಹಲವು ಸಂಶಯಗಳು ಹುಟ್ಟಿಕೊಂಡಿವೆ.
ಸಚಿನ ಮಾದರ ಹಾಗೂ ಸಕ್ಕುಬಾಯಿ ಮಾದರ ಶವಗಳು ಮರದಲ್ಲಿ ಪತ್ತೆಯಾಗಿವೆ. ಇವರಿಬ್ಬರೂ ಇನ್ನೂ 18 ವರ್ಷ ತುಂಬಿರದ ಅಪ್ರಾಪ್ತರಾಗಿದ್ದಾರೆ. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ.
ಇವರಿಬ್ಬರು ಕಳೆದ ಒಂದೆರಡು ದಿನಗಳಿಂದ ನಾಪತ್ತೆಯಾಗಿದ್ದರು. ಮನೆಯವರು ಅಲ್ಲಿ ಇಲ್ಲಿ ಹುಡುಕಿದ ಬಳಿಕ ಬುಧವಾರ ಇಬ್ಬರ ಶವ ಊರಾಚೆಯ ಮರದಲ್ಲಿ ನೇತಾಡುತ್ತಿರುವುದು ಕಂಡಿತು. ಶವ ಸ್ವಲ್ಪ ಮಟ್ಟಿಗೆ ಕೊಳೆಯಲು ಆರಂಭಿಸಿದ್ದು, ವಾಸನೆಯೂ ಬರುತ್ತಿತ್ತು.
ವಿಷಯ ತಿಳಿದ ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆ ಪೊಲೀಸರು ಆಗಮಿಸಿದ್ದಾರೆ. ಇದೀಗ ಬಹುಶ್ರಮದಿಂದ ಶವಗಳನ್ನು ಕೆಳಗೆ ಇಳಿಸಲಾಗಿದೆ. ಪೊಲೀಸರು ಇದು ಆತ್ಮಹತ್ಯೆಯೋ ಅಥವಾ ಯಾರಾದರೂ ಕೊಲೆ ಮಾಡಿ ನೇತು ಹಾಕಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ.
ಹಿಂದು ಯುವತಿ ಜತೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಥಳಿತ
ಪುತ್ತೂರು (ದಕ್ಷಿಣ ಕನ್ನಡ): ಬಜರಂಗದಳ ನಿಷೇಧದ ಕುರಿತು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ ಮಾಡಲಾಗಿದೆ. ಯುವತಿ ಜತೆ ಮಾತನಾಡಿದ್ದಕ್ಕೆ ಹಿಂದು ಸಂಘಟನೆ ಕಾರ್ಯಕರ್ತರು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಮೊಹಮ್ಮದ್ ಪಾರಿಶ್ (18) ಎಂಬ ಯುವಕನಿಗೆ ಹಿಂದು ಕಾರ್ಯಕರ್ತರು ಥಳಿಸಿದ್ದು, ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಫಾರಿಶ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಿಂದೂ ಯುವತಿ ಜೊತೆ ಮಾತನಾಡಿದ್ದಕ್ಕಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಲಾಗಿದೆ. ಪ್ರಕರಣದ ಕುರಿತು ವಿದ್ಯಾರ್ಥಿಯಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿಯು ಪುತ್ತೂರಿನ ಮರೀಲ್ ಕಾಡುಮನೆ ನಿವಾಸಿಯಾಗಿದ್ದಾನೆ.
suicide-case: minor aged lovers found dead in nidagundi