ಕಾರವಾರ: ಅಂಕೋಲಾ ತಾಲೂಕಿನ ಬೆಳಂಬಾರದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ (Suicide case) ಮಾಡಿಕೊಂಡಿದ್ದಾಳೆ. ಬೆಳಂಬಾರ ತಾಳೇಬೈಲಿನ ನಿವಾಸಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಿಲ್ಪಾ ಗೌಡ (17) ಮೃತ ದುರ್ದೈವಿ. ಇವಳು ಸರ್ಕಾರಿ ಪದವಿ ಪೂರ್ವ ಕಾಲೇಜು ಅಂಕೋಲಾದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು.
ಮಾರ್ಚ್ 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು, ಆಕೆ ಆರಂಭದ ಎರಡು ಪರೀಕ್ಷೆಗಳನ್ನು ಎದುರಿಸಿದ್ದಳು. ಬುಧವಾರ ಬೆಳಗ್ಗೆ ಪಾಲಕರು ಎಂದಿನಂತೆ ಕೂಲಿ ಕೆಲಸಕ್ಕೆ ಮನೆಯಿಂದ ಹೊರಗಡೆ ಹೋಗಿದ್ದ ವೇಳೆ ವಿಷ ಸೇವಿಸಿದ್ದಾಳೆ. ಕೆಲ ಹೊತ್ತಿನ ಬಳಿಕ ಆಕೆ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಂಕೋಲಾದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದುಬಂದಿದೆ.
ಬಡ, ಸಾಮಾನ್ಯ ವರ್ಗಕ್ಕೆ ಸೇರಿದ ವಿದ್ಯಾರ್ಥಿನಿಯ ಸಾವಿಗೆ ಏನು ಕಾರಣ ಎನ್ನುವುದು ಸ್ಪಷ್ಟವಾಗಿಲ್ಲ. ಯಾವುದೇ ಡೆತ್ ನೋಟ್ ಬರೆದಿಟ್ಟಂತೆ ಕಾಣುತ್ತಿಲ್ಲ. ಆಕೆಗೆ ಪರೀಕ್ಷೆಗಳು ಕಷ್ಟವಾಗಿ ಇಲ್ಲವೇ ನಿರೀಕ್ಷಿತ ಅಂಕಗಳು ಬರಲಾರದು ಎಂಬ ಆತಂಕದಲ್ಲಿ ಈ ತೀವ್ರ ಹೆಜ್ಜೆಯನ್ನು ಇಟ್ಟಳೇ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಾಗಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೇಮ ವೈಫಲ್ಯಕ್ಕೆ ನೊಂದು ಯುವತಿ ಆತ್ಮಹತ್ಯೆ
ಗದಗ ಜಿಲ್ಲೆ ಕಣಗಿನಹಾಳ ಗ್ರಾಮದಲ್ಲಿ ಪ್ರೀತಿ ವೈಫಲ್ಯ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಪಾರ್ವತಿ ಬಾಯಿ (24) ಮೃತ ಯುವತಿ. ರೈಲ್ವೆ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಪಾರ್ವತಿ ಅನ್ಯ ಕೋಮಿನ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ, ಬುಧವಾರ (ಮಾ. 15) ಇದ್ದಕ್ಕಿದ್ದಂತೆ ನೇಣಿಗೆ ಶರಣಾಗಿದ್ದಾಳೆ. ಪ್ರೇಮಿಗಳಿಬ್ಬರೂ ಜಗಳ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನನೊಂದ ಯುವತಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಸಾಯುವ ಮುಂಚೆ ಡೆತ್‌ನೋಟ್ ಬರೆದಿಟ್ಟಿದ್ದಾಳೆ ಎಂದು ಕುಟುಂಬಸ್ಥರು ಹೇಳುತ್ತಿದ್ದರೆ, ಪೊಲೀಸರು ಮಾತ್ರ ಡೆತ್‌ನೋಟ್ ಬಹಿರಂಗಪಡಿಸಿಲ್ಲ.
ಕೊಟ್ಟ ಸಾಲ ವಾಪಸ್ ಬಾರದ್ದಕ್ಕೆ ಪಶುವೈದ್ಯ ಆತ್ಮಹತ್ಯೆ
ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದ ಪಶುವೈದ್ಯರೊಬ್ಬರು ಸಹೋದ್ಯೋಗಿ ವೈದ್ಯರೊಬ್ಬರಿಗೆ ಕೊಟ್ಟ ಸಾಲವನ್ನು ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯಲ್ಲಿ ವಿಷ ಸೇವಿಸಿದ್ದಾರೆ. ನಂದೆಪ್ಪ ಬಾಗೇವಾಡಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ನಂದೆಪ್ಪ ತನ್ನ ಸಹೋದ್ಯೋಗಿ ವೈದ್ಯರೊಬ್ಬರಿಗೆ ಐದು ಲಕ್ಷ ರೂಪಾಯಿ, ಮತ್ತೊಬ್ಬ ಗೆಳೆಯನಿಗೆ ತನ್ನ ಮನೆ ಆಧಾರವಾಗಿಟ್ಟುಕೊಂಡು ಏಳು ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ಸಾಲ ಪಡೆದವರು ವಾಪಸ್ ಕೊಟ್ಟಿರಲಿಲ್ಲ. ಕೇಳಿ ಕೇಳಿ ಬೇಸತ್ತ ನಂದೆಪ್ಪ ಮನನೊಂದು ಮನೆಯಲ್ಲಿ ವಿಷ ಸೇವಿಸಿದ್ದಾರೆ. ಸಾಯುವ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಯಾರು ಯಾರಿಗೆ ಸಾಲ ಕೊಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಗಗನಸಖಿ ಸಾವು: ಆತ್ಮಹತ್ಯೆ ಅಲ್ಲ ಕೊಲೆ?; ಮಗಳನ್ನು ಪ್ರಿಯಕರನೇ ತಳ್ಳಿದ್ದು ಎಂದು ತಾಯಿ ದೂರು