Site icon Vistara News

Suicide Case: ಗಂಡ ಚಾಕೊಲೇಟ್‌ ತಂದು ಕೊಡಲಿಲ್ಲವೆಂದು ನೇಣಿಗೆ ಶರಣಾದಳು ಹೆಂಡತಿ!

Wife commits suicide for not bringing chocolates

Wife commits suicide for not bringing chocolates

ಬೆಂಗಳೂರು: ಕೆಲವೊಮ್ಮೆ ಎಂಥೆಂಥ ಕ್ಷುಲ್ಲಕ ಎನಿಸಬಹುದಾದ ಕಾರಣಗಳು, ದುಡುಕಿನ ನಿರ್ಧಾರಗಳು ಸಾವಿಗೆ ಕಾರಣವಾಗುತ್ತವೆ ಎಂದು ಹೇಳುವುದೇ ಕಷ್ಟ. ಇಲ್ಲೊಬ್ಬ ಗೃಹಿಣಿ ಗಂಡ ಚಾಕೊಲೇಟ್‌ ತಂದು ಕೊಡಲಿಲ್ಲ ಎಂಬ ಕಾರಣದಿಂದ ಮನನೊಂದು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೆಣ್ಣೂರು ಪೊಲೀಸ್ ಠಾಣಾ (Hennur police station) ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದ್ದು, ನಂದಿನಿ (30) ಎಂಬ ಮಹಿಳೆ ಪತಿ ಚಾಕೊಲೇಟ್ (chocolate) ತಂದು ಕೊಡಲಿಲ್ಲ ಎಂಬ ಕಾರಣಕ್ಕಾಗಿ ಬೇಸತ್ತು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾರೆ.

ಆರು ವರ್ಷದ ಹಿಂದೆ ಮದುವೆಯಾಗಿದ್ದ ನಂದಿನಿ‌ಗೆ ಇಬ್ಬರು ಮಕ್ಕಳಿದ್ದು, ಪತಿ ಸಲೂನ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಗುರುವಾರ ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೊರಟಿದ್ದ ಪತಿಯ ಬಳಿ ಚಾಕೋಲೇಟ್‌ ತಂದು ಕೊಡುವಂತೆ ನಂದಿನಿ ಕೇಳಿದ್ದರಂತೆ. ಆದರೆ ಮಧ್ಯಾಹ್ನ ಕಳೆದರೂ ಪತಿ ಚಾಕೊಲೇಟ್‌ ತಂದು ಕೊಡದೆ ಇದ್ದಾಗ ಮನ ನೊಂದು ನೇಣಿಗೆ ಶರಣಾಗಿದ್ದಾರೆ.

ಇತ್ತ ನಂದಿನಿ ಪತಿ ಮಧ್ಯಾಹ್ನ ಕರೆ ಮಾಡಿದಾಗ ಫೋನ್ ಸ್ವೀಕರಿಸದೆ ಇದ್ದಾಗ ಅನುಮಾನಗೊಂಡಿದ್ದಾರೆ. ಮನೆಗೆ ಬಂದು ನೋಡಿದಾಗ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ. ನಂದಿನಿ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸುಂದರ ಸಂಸಾರದಲ್ಲಿ ನಂದಿನಿಯ ದುಡುಕಿನ ನಿರ್ಧಾರದಿಂದ ಮಕ್ಕಳು ತಾಯಿ ಇಲ್ಲದ ತಬ್ಬಲಿಯಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಣ್ಣೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಾವಿಗೆ ಚಾಕೊಲೇಟ್‌ ತಂದು ಕೊಡದೆ ಇದ್ದುದೇ ಕಾರಣವೇ ಅಥವಾ ಬೇರೆ ಏನಾದರೂ ಕಾರಣಗಳಿವೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿಡಿಲಿನ ಹೊಡೆತಕ್ಕೆ ಮನೆಯ ಚಾವಣಿ ಕುಸಿದು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವು

ಬಾಗಲಕೋಟೆ: ಸಿಡಿಲಿನ ಹೊಡೆತಕ್ಕೆ ಮನೆಯ ಮಣ್ಣಿನ ಮೇಲ್ಚಾವಣಿ ಕುಸಿದು (House collapse) ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ನಡೆದಿದೆ.

ಗುರುವಾರ ರಾತ್ರಿ 11.30ರ ಸುಮಾರಿಗೆ ಜೋರಾಗಿ ಸಿಡಿಲು ಬಡಿದು, ಮನೆಯ ಚಾವಣಿ ಒಮ್ಮಿಂದೊಮ್ಮೆಗೇ ಉದುರಿಬಿದ್ದು, ಯಂಕುಬಾಯಿ ಕುಲಕರ್ಣಿ (79), ಶಾರದಾ ಪತ್ತಾರ (61) ಪ್ರಾಣ ಕಳೆದುಕೊಂಡರು.

ಈ ಮಹಿಳೆಯರಿಬ್ಬರೂ ಅಕ್ಕಪಕ್ಕದ ಮನೆಯವರಾಗಿದ್ದು, ರಾತ್ರಿ ಒಂದೇ ಮನೆಯಲ್ಲಿ ಮಲಗುತ್ತಿದ್ದರು. ಶಾರದಾ ಪತ್ತಾರ ಅವರಿಗೆ ಬೇರೆ ಮನೆ ಇದ್ದರೂ ದಿನಂಪ್ರತಿ ಯಂಕುಬಾಯಿ ಕುಲಕರ್ಣಿ ಅವರ ಮನೆಗೇ ಬರುತ್ತಿದ್ದರು ಎನ್ನಲಾಗಿದೆ. ಆಗಲೇ ದುರಂತ ನಡೆದು ಇಬ್ಬರೂ ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ ಈ ಭಾಗದಲ್ಲಿ ಸಿಡಿಲು ಗುಡುಗಿನ ಅಬ್ಬರವಿತ್ತು. ಮಳೆಯೂ ಜೋರಾಗಿ ಬಿದ್ದಿತ್ತು. ಈ ವೇಳೆ ಮಣ್ಣಿನಿಂದ ಮಾಡಿದ ಮೇಲ್ಚಾವಣಿ ಸಿಡಿಲಿಗೆ ತತ್ತರಿಸಿ ಕುಸಿದುಬಿದ್ದಿದೆ. ಮೇಲ್ಚಾವಣಿಯ ಮಣ್ಣು ಮತ್ತು ಕಲ್ಲು ಕೆಳಗೆ ಮಲಗಿದ್ದ ಯಂಕುಬಾಯಿ ಮತ್ತು ಶಾರದಾ ಅವ್ರ ಮೇಲೆ ಬಿದ್ದಿದೆ. ಪರಿಣಾಮವಾಗಿ ಅವರು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೂಡಲೇ ಸ್ಥಳೀಯರು ಧಾವಿಸಿ ರಕ್ಷಣೆಗೆ ಪ್ರಯತ್ನ ನಡೆಸಿದರು. ಕೊನೆಗೆ ಅಗ್ನಿಶಾಮಕ ದಳ ಸಿಬ್ಬಂದಿಗಳ ಸಹಾಯದಿಂದ ಶವಗಳನ್ನು ಹೊರತೆಗೆಯಲಾಗಿದೆ.

ಇದನ್ನೂ ಓದಿ: Death News : ಧ್ರುವನಾರಾಯಣ್‌ ಪತ್ನಿ ವೀಣಾ ನಿಧನ; ಪತಿಯ ಸಾವಿನಿಂದ ಕುಗ್ಗಿದ್ದರು, ತಿಂಗಳೊಳಗೆ ಮತ್ತೊಂದು ಆಘಾತ

ಬಾದಾಮಿ ತಾಲೂಕು ಆಸ್ಪತ್ರೆಯಲ್ಲಿ ಮೃತ ಮಹಿಳೆಯರ ಶವ ಪರೀಕ್ಷೆ ನಡೆದಿದ್ದು, ಕುಟುಂಬದವರಿಗೆ ಬಿಟ್ಟುಕೊಡಲಾಗಿದೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version