Site icon Vistara News

Suicide Case: ಪ್ರೀತಿಸಿ ಮದುವೆ ಆದವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಕೊಲೆ ಎಂದ ಮೃತಳ ಕುಟುಂಬಸ್ಥರು

#image_title

ದೇವನಹಳ್ಳಿ: ಇಲ್ಲಿನ ದೊಡ್ಡಬಳ್ಳಾಪುರ ತಾಲೂಕಿನ ಕಟ್ಟೆಇಂದೆಹಳ್ಳಿ ಗ್ರಾಮದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರ ಮೃತದೇಹ (Suicide Case) ಪತ್ತೆ ಆಗಿದೆ. ಮೇಘನಾ (22) ಮೃತ ದುರ್ದೈವಿ ಆಗಿದ್ದಾರೆ.

ನಾಗೇಶ್‌ ಎಂಬಾತನನ್ನು ಮೇಘನಾ ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಇವರದ್ದು ಪ್ರೇಮ ವಿವಾಹವಾಗಿತ್ತು. ಶುಕ್ರವಾರ ರಾತ್ರಿ ದಂಪತಿ ನಡುವೆ ಊಟದ ವಿಚಾರಕ್ಕೆ ಜಗಳ ನಡೆದಿತ್ತು. ಆದರೆ, ಸಣ್ಣ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪತಿ ನಾಗೇಶ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮನೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಆಗಿದ್ದು, ಮೇಘನಾ ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ, ಬದಲಿಗೆ ಗಂಡನ ಮನೆಯವರು ಸೇರಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಚನ್ನಗಿರಿಯಲ್ಲಿ ಆನೆ ದಾಂಧಲೆಗೆ ಯುವತಿ ಬಲಿ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಗ್ರಾಮದ ಮುಂಜಾನೆಯೇ ನಡೆದ ಆನೆ ದಾಂಧಲೆಗೆ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಸೋಮ್ಲಾಪುರದ ಕವನ (17) ಎಂಬುವವರು ಮೃತಪಟ್ಟಿದ್ದಾರೆ.

ಚನ್ನಗಿರಿ ತಾಲೂಕಿನ ಸೋಮ್ಲಾಪುರ ಹಾಗೂ ಕಾಶಿಪುರ ಸುತ್ತಮುತ್ತ ಶನಿವಾರ ಮುಂಜಾನೆ ಆನೆ ಓಡಾಟ ನಡೆಸಿದೆ. ಈ ನಡುವೆ, ಇದ್ಯಾವುದನ್ನೂ ಅರಿಯದ ಮಂಜುಳಾ (42) ಮತ್ತು ಮಗಳು ಕವನಾ (17) ಬೆಳಬೆಳಗ್ಗೆ ಜಮೀನಿಗೆ ಹೋಗಿದ್ದರು. ಜಮೀನಿನಲ್ಲಿ ಅವರೆಕಾಯಿ ಬಿಡಿಸುವಾಗ ಏಕಾಏಕಿ ಹಿಂದಿನಿಂದ ದಾಳಿ ಮಾಡಿದೆ.

ಗಂಭೀರವಾಗಿ ಗಾಯಗೊಂಡ ಕವನಾಳನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯದಲ್ಲೇ ಆಕೆ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ ತಾಯಿ ಮಂಜುಳಾ ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶವಾಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಕಾಶಿಪುರ, ಸೋಮ್ಲಾಪುರ, ಸೂಳೆಕೆರೆ ಸುತ್ತಮುತ್ತಲು ಓಡಾಡುತ್ತಿರುವ ಆನೆಯಿಂದಾಗಿ ಹತ್ತಾರು ಗ್ರಾಮಗಳಲ್ಲಿ ಆತಂಕ ಉಂಟಾಗಿದೆ. ಯಾರೂ ಕೂಡ ಒಂಟಿಯಾಗಿ ಓಡಾಡಬಾರದು ಎಂದು ಅರಣ್ಯ ಇಲಾಖೆಯಿಂದ‌ ಜನರಿಗೆ ಎಚ್ಚರಿಕೆ ಸಂದೇಶವೂ ಬಂದಿದೆ. ಇಲ್ಲಿನ ತೋಟಗಳಲ್ಲಿ , ಕೆರೆಗಳ ಪ್ರದೇಶದಲ್ಲಿ ಓಡಾಡುತ್ತಿರುವ ಆನೆಯನ್ನು ಕಾಡಿಗಟ್ಟುವ ಪ್ರಯತ್ನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರತರಾಗಿದ್ದಾರೆ.

ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿ ಆನೆ ಬಂದಿದ್ದು, ಪೊಲೀಸರು ಕೂಡಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ. ಆನೆಯನ್ನು ನೋಡಲು ಬರುವ ಜನರನ್ನು ತಡೆಗಟ್ಟುವುದೇ ಅವರಿಗೆ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: Nandini vs Amul: ಶುರುವಾಗಿದೆ ಸೇವ್‌ ನಂದಿನಿ, ಬಾಯ್‌ಕಾಟ್‌ ಅಮುಲ್‌ ಅಭಿಯಾನ; ಕನ್ನಡಿಗರು ಗರಂ

ಆರಂಭದಲ್ಲಿ ತೋಟ ಮತ್ತು ಕೆರೆಯ ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಆನೆ ಬಳಿಕ ಜನವಸತಿ ಭಾಗದತ್ತಲೂ ಬಂದಿರುವುದು ಆತಂಕವನ್ನು ಹೆಚ್ಚಿಸಿದೆ. ಇದೀಗ ಅದನ್ನು ಹಿಡಿಯುವ ಇಲ್ಲವೇ ಕಾಡಿಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ. ಆನೆ ಕೂಡಾ ಭಯಗೊಂಡಂತಿದ್ದು, ಇನ್ನೇನು ಅನಾಹುತ ಮಾಡಲಿದೆಯೋ ಎಂದು ಜನರು ಭಯಗೊಂಡಿದ್ದಾರೆ.

Exit mobile version