ಬೆಂಗಳೂರು/ಧಾರವಾಡ: ಧಾರವಾಡದ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವು ಕವಡಿ (27) ಎಂಬುವವನು ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಭಾನುವಾರ ರಾತ್ರಿ ತಾಯಿಯೊಂದಿಗೆ ಜಗಳ ಮಾಡಿದ್ದ ಶಿವು, ಕುಡಿದ ಅಮಲಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಸಾಲಭಾದೆಗೆ ಬೇಸತ್ತ ರೈತ ವಿಷ ಸೇವಿಸಿ ಆತ್ಮಹತ್ಯೆ
ಕಲಬುರಗಿಯ ಅಫಜಲಪುರ ತಾಲೂಕಿನ ರೇವೂರ್ (ಕೆ) ಗ್ರಾಮದಲ್ಲಿ ಸಾಲಭಾದೆಗೆ ರೈತರೊಬ್ಬರು ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂದ್ರಕಾಂತ್ ಆತ್ಮಹತ್ಯೆ ಮಾಡಿಕೊಂಡ ರೈತರಾಗಿದ್ದಾರೆ. ರೇವೂರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಮೋರಿಯಲ್ಲಿ ಶವ ಪತ್ತೆ
ರಾಮನಗರ ವಿಜಯನಗರದ ರಾಜಕುಮಾರ್ ರಸ್ತೆಯಲ್ಲಿ ಮೋರಿಯಲ್ಲಿ ಶವವೊಂದು ಪತ್ತೆ ಆಗಿದೆ. ಮೃತ ವ್ಯಕ್ತಿ ಸಿದ್ದು (35) ಎಂದು ಗುರುತಿಸಲಾಗಿದೆ. ಸಿದ್ದು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಭಾನುವಾರ ರಾತ್ರಿ ಮನೆಯಿಂದ ಹೊರ ಬಂದವನು, ಬೆಳಗ್ಗೆ ಮೋರಿಯಲ್ಲಿ ಶವವಾಗಿ ಪತ್ತೆ ಆಗಿದ್ದಾರೆ. ಸದ್ಯಕ್ಕೆ ಸ್ಥಳಕ್ಕೆ ರಾಮನಗರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇದು ಕೊಲೆಯೊ ಅಥವಾ ಸಹಜ ಸಾವೋ ಎಂಬುದರ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.
ಡಿಜೆ ಸೌಂಡ್‌ಗೆ ಸ್ಥಳೀಯರ ಆಕ್ರೋಶ
ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿರುವ ಐರನ್ ಹಿಲ್ ಪಬ್ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ. ರಾತ್ರಿ 12 ಗಂಟೆ ಕಳೆದರೂ ಡಿಜೆ ಸೌಂಡ್ ನಿಲ್ಲುತ್ತಿಲ್ಲ. ದೊಡ್ಡ ಶಬ್ಧದಿಂದಾಗಿ ಮನೆಯಲ್ಲಿ ಮಕ್ಕಳು, ಹಿರಿಯರು, ಅನಾರೋಗ್ಯ ಪೀಡಿತರು ಮಲಗಲು ಆಗುತ್ತಿಲ್ಲ. ಡಿಜೆ ಸೌಂಡ್‌ನಿಂದಾಗಿ ನಿತ್ಯವೂ ಜಾಗರಣೆ ಇರುವಂತಾಗಿದೆ. ಈ ಸಂಬಂಧ ಸ್ಥಳೀಯರು ಬೆಂಗಳೂರು ನಗರ ಪೊಲೀಸರಿಗೆ ಮ್ಯೂಸಿಕ್ ಸೌಂಡ್ ಸಮೇತ ಪೋಸ್ಟ್ ಮಾಡಿ ಟ್ಯಾಗ್ ಮಾಡಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Accident News: ಚಲಿಸುತ್ತಿದ್ದ ಶಾಲಾ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ; 30 ಮಕ್ಕಳು ಅಪಾಯದಿಂದ ಪಾರು
ಕುಡುಕ ಲಾರಿ ಚಾಲಕನ ಯಡವಟ್ಟು
ಚಿಕ್ಕಮಗಳೂರಿನ ಕಳಸ ತಾಲೂಕಿನ ಸಂಸೆ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ಟಿಪ್ಪರ್ ಲಾರಿ ಓಡಿಸಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಮಳಿಗೆಗೆ ನುಗ್ಗಿದೆ. ಕೂದಲೆಳೆ ಅಂತರದಲ್ಲಿ ಪಾದಚಾರಿಗಳು ಪಾರಾಗಿದ್ದು, ಕುಡುಕ ಚಾಲಕನ ಅವಾಂತರಕ್ಕೆ ಕಿಡಿಕಾರಿದ್ದಾರೆ. ಮಳಿಗೆಯ ಗೋಡೆಗೆ ಗುದ್ದಿದ ಚಾಲಕನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ