Site icon Vistara News

ಬಿಜೆಪಿ ಪರಾಜಿತ ಅಭ್ಯರ್ಥಿಗೆ ಸಂಸದೆ ಸುಮಲತಾ ತಿರುಗೇಟು; ಅಂಬರೀಶ್ ಹುಟ್ಟೂರಲ್ಲಿ ಬರ್ತ್​ ಡೇ ಆಚರಣೆ

Sumalatha ambareesh celebreted Ambareesh Birthday In Doddarasinakere Of Mandya

#image_title

ಪತಿ, ರೆಬೆಲ್​ ಸ್ಟಾರ್​ ಅಂಬರೀಶ್ 71ನೇ ಹುಟ್ಟುಹಬ್ಬದ (Ambarish Birthday) ನಿಮಿತ್ತ ಸಂಸದೆ ಸುಮಲತಾ ಅವರು ಇಂದು ಅಂಬರೀಶ್ (Sumalatha Ambareesh)ಹುಟ್ಟೂರಾದ ದೊಡ್ಡರಸಿನಕೆರೆ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿದರು. ಸಮಾಧಿ ಮೇಲೆಯೇ ಕೇಕ್​ ಇಟ್ಟು ಕತ್ತರಿಸಿ, ಹುಟ್ಟುಹಬ್ಬ ಆಚರಣೆ ಮಾಡಿದರು. ಸುಮಲತಾ ಬರುವುದಕ್ಕೂ ಮುನ್ನವೇ, ಗ್ರಾಮಸ್ಥರೆಲ್ಲ ಸೇರಿ ಅಂಬರೀಶ್ ಸಮಾಧಿಯನ್ನು ಹೂವಿನಿಂದ ಅಲಂಕಾರ ಮಾಡಿದ್ದರು. ಮಕ್ಕಳೂ ಕೂಡ ಅಂಬಿ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸುಮಲತಾ, ಅಂಬರೀಶ್​ರನ್ನು ನಾನು ಮಾತ್ರವಲ್ಲ, ಅವರನ್ನು ಪ್ರೀತಿಸುತ್ತಿದ್ದ ಎಲ್ಲ ಅಭಿಮಾನಿಗಳೂ ಮಿಸ್​ ಮಾಡಿಕೊಳ್ಳುತ್ತಿದ್ದಾರೆ ಅವರ ಹಲವು ಅಭಿಮಾನಿಗಳು ನನಗೆ ಅಂಬರೀಶ್ ಅವರ ಫೋಟೋಗಳನ್ನು ಕಳಿಸುತ್ತಿರುತ್ತಾರೆ. ಮಂಡ್ಯದ ಪ್ರತಿಮನೆಯಲ್ಲೂ ಅಂಬರೀಶ್​ ಅಭೀಮಾನಿಗಳು ಇದ್ದಾರೆ. ಅವರನ್ನು ನೋಡಿದಾಗ ನನಗೆ ಧೈರ್ಯ ಬರುತ್ತದೆ. ಅವರೆಲ್ಲರ ಆಶೀರ್ವಾದ ನನ್ನಮೇಲೆ ಇದೆ ಎನ್ನಿಸುತ್ತಿದೆ ಎಂದು ಹೇಳಿದರು.

ಇದೇ ವೇಳೆ ಸುಮಲತಾ ಅವರಿಗೆ ಮಾಧ್ಯಮದವರು ರಾಜಕೀಯಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನೂ ಕೇಳಿದರು. ಮೇಲುಕೋಟೆಯಲ್ಲಿ ಮೂರನೇ ಸ್ಥಾನಕ್ಕೆ ಇಳಿದು ಸೋತಿರುವ ಬಿಜೆಪಿ ಅಭ್ಯರ್ಥಿ ಡಾ. ಇಂದ್ರೇಶ್​ ಇತ್ತೀಚೆಗೆ ಮಾತನಾಡಿ, ಸುಮಲತಾ ಅವರ ಮ್ಯಾಚ್​ ಫಿಕ್ಸಿಂಗ್​ನಿಂದ ನಾನು ಸೋತೆ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಉತ್ತರಿಸಿದ ಸುಮಲತಾ ‘ಇಂದ್ರೇಶ್ ಹೇಳಿಕೆಗೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ. ಮ್ಯಾಚ್ ಫಿಕ್ಸಿಂಗ್ ಮಾಡುವ ಅಗತ್ಯ ನನಗೆ ಇಲ್ಲ. ನನ್ನ ಅಭಿಪ್ರಾಯ, ಮಾತುಗಳನ್ನು ಬಿಜೆಪಿ ಪಕ್ಷದ ವರಿಷ್ಠರಿಗೆ ನೇರವಾಗಿ ಹೇಳಿದ್ದೆ. ಅವರೂ ಅದನ್ನು ಒಪ್ಪಿಕೊಂಡಿದ್ದರು. ನನಗೆ ಯಾವುದೇ ನಿರ್ಬಂಧವನ್ನೂ ಹೇರಿರಲಿಲ್ಲ. ಇಂದ್ರೇಶ್​ ತಮ್ಮ ಸಮಸ್ಯೆಯನ್ನು ಪಕ್ಷದ ಮುಖಂಡರ ಬೇಳಿ ಹೇಳಿಕೊಳ್ಳಬೇಕು. ಬಾಲಿಶ ಹೇಳಿಕೆ ನೀಡಬಾರದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Karnataka Election: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಸಾಧ್ಯ: ಸುಮಲತಾ ಅಂಬರೀಶ್

ಮಂಡ್ಯದಲ್ಲಿ ಬಿಜೆಪಿ ಏಳೂ ಕ್ಷೇತ್ರದಲ್ಲಿ ಸೋತಿದ್ದರ ಬಗ್ಗೆ ಮಾತನಾಡಿದ ಅವರು ‘ಇಡೀ ರಾಜ್ಯದಲ್ಲಿಯೇ ಆಡಳಿತ ವಿರೋಧಿ ಅಲೆ ಇತ್ತು. ಜನರು ಕಾಂಗ್ರೆಸ್​ನ ಐದು ಗ್ಯಾರಂಟಿಗಳ ಕಡೆಗೆ ವಾಲಿದ್ದರು. ಕಳೆದ 35ವರ್ಷಗಳಲ್ಲಿ ಕರ್ನಾಟಕದಲ್ಲಿ ಯಾವುದೇ ಪಕ್ಷ 135 ಸೀಟ್​ಗಳನ್ನು ಗೆದ್ದಿರಲಿಲ್ಲ. ಮಂಡ್ಯದಲ್ಲಿ ಮೊದಲಿನಿಂದಲೂ ಬಿಜೆಪಿಗೆ ನೆಲೆ ಇಲ್ಲ. ನಾವೂ ಇಲ್ಲಿ ಬಿಜೆಪಿ ಗೆಲ್ಲಲಿ ಎಂದು ಶ್ರಮಿಸಿದ್ದೇವೆ. ಆದರೆ ಆಗಲಿಲ್ಲ. ಹಾಗಿದ್ದಾಗ್ಯೂ 2018ಕ್ಕಿಂತಲೂ ಹೆಚ್ಚಿನ ಮತಗಳು ಬಿಜೆಪಿಗೆ ಬಿದ್ದಿವೆ ಎಂದು ಸುಮಲತಾ ತಿಳಿಸಿದರು.

’ಗ್ಯಾರಂಟಿ’ ಮಾತಿಲ್ಲ !
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ಸುಮಲತಾ ಜಾಸ್ತಿ ಮಾತನಾಡಲು ಇಷ್ಟಪಡಿಲಿಲ್ಲ. ಕಾಂಗ್ರೆಸ್​ನವರು ಸ್ವಲ್ಪ ಸಮಯ ಕೇಳಿದ್ದಾರೆ. ಆದರೆ ಯಾವುದೇ ರಾಜಕೀಯ ಪಕ್ಷಗಳು ಪ್ರಚಾರದ ವೇಳೆ ನೀಡುವ ಆಶ್ವಾಸನೆಯನ್ನು ಪೂರೈಸಬೇಕು ಎಂದು ಜನರು ನಿರೀಕ್ಷಿಸುತ್ತಾರೆ. ಹೀಗಾಗಿ ಎಲ್ಲ ಗ್ಯಾರಂಟಿಗಳನ್ನೂ ಕಾಂಗ್ರೆಸ್ಸಿಗರು ಪೂರೈಸಬೇಕು ಎಂದು ಹೇಳಿದರು.

Exit mobile version