Site icon Vistara News

Sumanahalli Flyover | ಸುಮ್ಮನಹಳ್ಳಿ ಫ್ಲೈಓವರ್‌ ಮೇಲೆ ಸ್ಲ್ಯಾಬ್‌ ಪುಡಿಪುಡಿ; ಮತ್ತೊಮ್ಮೆ ಬಿರುಕು

flyover

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳಪೆ ರಸ್ತೆ ಕಾಮಗಾರಿಯಿಂದ ಜನರು ಜೀವ ಕೈನಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ. ನಗರದ ಸುಮ್ಮನಹಳ್ಳಿ ಫ್ಲೈಓವರ್‌ನಲ್ಲಿ (Sumanahalli Flyover) ಮತ್ತೊಮ್ಮೆ ಬಿರುಕು ಬಿಟ್ಟಿದ್ದು, ಜನರು ಆತಂಕದಲ್ಲಿಯೇ ಓಡಾಡುವಂತಾಗಿದೆ.

ನಾಗರಬಾವಿಯಿಂದ ಗೊರಗುಂಟೆಪಾಳ್ಯಗೆ ಸಂಪರ್ಕಿಸುವ ರಸ್ತೆಯ ಫ್ಲೈಓವರ್‌ ಇದಾಗಿದ್ದು, ನೆಲ‌ ಕಾಣಿಸುವ ಮಟ್ಟಕ್ಕೆ ಕಾಂಕ್ರಿಟ್ ಸ್ಲ್ಯಾಬ್ ಕಿತ್ತು ಹೋಗಿದೆ. ಫ್ಲೈಓವರ್‌ ಮೇಲಿಂದ ನೆಲಕ್ಕೆ ಸಿಮೆಂಟ್ ಕಲ್ಲುಗಳು ಬಿದ್ದಿದ್ದು ಅನಾಹುತವೊಂದು ತಪ್ಪಿದೆ. ಸ್ಥಳಕ್ಕೆ ಸ್ಥಳೀಯ ಸಂಚಾರಿ ಪೊಲೀಸರು ಆಗಮಿಸಿದ್ದು, ಗುಂಡಿ ಬಿದ್ದ ಜಾಗದಲ್ಲಿ ಅರ್ಧ ರಸ್ತೆಯನ್ನು ಕವರ್ ಮಾಡಿ ಬ್ಯಾರಿಕೇಡ್ ಅಳವಡಿಸಿದ್ದಾರೆ.

2019ರಲ್ಲಿಯೂ ಕುಸಿದ್ದ ಸ್ಲ್ಯಾಬ್‌

2019 ರಲ್ಲಿಯೂ ಸುಮ್ಮನಹಳ್ಳಿ ಫ್ಲೈಓವರ್‌ ಸ್ಲ್ಯಾಬ್ ಕುಸಿದಿತ್ತು. ಪರಿಣಾಮ 6 ತಿಂಗಳ ಕಾಲ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಸ್ಲ್ಯಾಬ್ ಬಿದ್ದ ಪಕ್ಕದ ರಸ್ತೆಯಲ್ಲಿ ಪ್ರಧಾನಿ ಮೋದಿಗಾಗಿ ಗುಣಮಟ್ಟದ ಡಾಂಬರಿಕರಣ ಮಾಡಲಾಗಿತ್ತು. ಸ್ಲ್ಯಾಬ್ ಬಿದ್ದ ರಸ್ತೆಗೆ ಡಾಂಬರಿಕರಣ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ, ಕಳಪೆ ಕಾಮಗಾರಿಯೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಬದಲಿ ಮಾರ್ಗ ಬಳಸಲು ಸೂಚನೆ

ಫ್ಲೈಓವರ್‌ ಮೇಲೆ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಿದ್ದು, ಭಾರಿ ವಾಹನಗಳ ಓಡಾಟಕ್ಕೆ ಫ್ಲೈಓವರ್‌ ಕೆಳ ಭಾಗದ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ. ಪದೇ ಪದೆ ಫ್ಲೈಓವರ್‌ ಬಿರುಕುಬಿಡುತ್ತಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ. ಜೀವಕ್ಕೆ ಅಪಾಯ ಆಗುವ ಮುಂಚೆ ದುರಸ್ತಿ ಮಾಡುವಂತೆ ಒತ್ತಾಯಗಳು ಕೇಳಿಬಂದಿವೆ.

ಇದನ್ನೂ ಓದಿ | flyover | ಹೆಬ್ಬಾಳ ಫ್ಲೈಓವರ್‌ ಅಗಲೀಕರಣ: ಸಿಎಂಗೆ ಪತ್ರ ಬರೆದ ಮಾಜಿ ಸಚಿವ ಕೃಷ್ಣಬೈರೇಗೌಡ

Exit mobile version