ಬೆಂಗಳೂರು: ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಸಿನಿಮಾದಷ್ಟೇ ಕ್ರಿಕೆಟನ್ನೂ ಪ್ರೀತಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತು. ಕಾಲೇಜಿನಲ್ಲಿ ಅಂಡರ್-೧೭ ಕ್ರಿಕೆಟ್ ತಂಡದಲ್ಲಿ ಆಡಿದ್ದ ಸುದೀಪ್ ದೇಶಾದ್ಯಂತ ಸುದ್ದಿ ಮಾಡಿದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ರೂವಾರಿಯೂ ಹೌದು. ಸುದೀಪ್ ಕ್ರಿಕೆಟನ್ನು ಎಷ್ಟರ ಮಟ್ಟಿಗೆ ಜೀವಿಸುತ್ತಾರೆ ಎಂದರೆ ಕಳೆದ ವರ್ಷ ಹಿಂದಿಯಲ್ಲಿ ನಿರ್ಮಾಣವಾದ ವಿಶ್ವ ಕಪ್ ಕ್ರಿಕೆಟ್ ಗೆಲುವಿನ ರೋಚಕ ಕಥಾನಕ ಹೊಂದಿರುವ ʻ೮೩ʼ ಸಿನಿಮಾವನ್ನು ಕನ್ನಡಕ್ಕೆ ತಾವೇ ಡಬ್ ಮಾಡಿ ಬಿಡುಗಡೆ ಮಾಡಿದರು.
ಇಂಥ ಕ್ರಿಕೆಟ್ ಪ್ರೇಮಿ, ಆಲ್ ಇಂಡಿಯಾ ಸ್ಟಾರ್ ಬದುಕಿನಲ್ಲಿ ಭಾನುವಾರ (ಜೂನ್ ೨೬) ಮರೆಯಲಾಗದ ದಿನ (sunday surprise). ಖುದ್ದು ಅವರೇ ಮುಟ್ಟಿ ನೋಡಿಕೊಳ್ಳುವಂತೆ ಅಚ್ಚರಿಯ ಉಡುಗೊರೆಯೊಂದು ಅವರ ಕೈಗೆ ಬಂದಿತ್ತು. ಅದು ಅವರೇ ಕನಸಿನಲ್ಲೂ ಕಲ್ಪಿಸಿಕೊಂಡಿರದ ಮಹಾನ್ ಗಿಫ್ಟ್. ಆ ಗಿಫ್ಟನ್ನು ಕಳುಹಿಸಿಕೊಟ್ಟಿದ್ದು ಬೇರೆ ಯಾರೂ ಅಲ್ಲ, ಭಾರತೀಯ ಕ್ರಿಕೆಟ್‌ನ ಲೆಜೆಂಡ್‌ಗಳಲ್ಲಿ ಒಬ್ಬರಾದ ಒನ್ ಎಂಡ್ ಓನ್ಲಿ ಕಪಿಲ್ ದೇವ್!
ಟೀಮ್ ಇಂಡಿಯಾ ೧೯೮೩ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ಚೊಚ್ಚಲ ವಿಶ್ವ ಕಪ್‌ನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮಹಾ ವಿಕ್ರಮಕ್ಕೆ ಜೂನ್ ೨೫ಕ್ಕೆ (ಶನಿವಾರ) ೩೯ ವರ್ಷ ಕಳೆದಿತ್ತು. ಅದೇ ಖುಷಿಯಲ್ಲಿದ್ದ ಸುದೀಪ್‌ಗೆ ಮರುದಿನ ಮುಂಜಾನೆ ಮಹಾ ಅಚ್ಚರಿ ಕಾದಿತ್ತು.
ಈ ಸಂಗತಿಯನ್ನು ಸ್ವತಃ ಸುದೀಪ್ ಅವರೇ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹೇಳಿಕೊಂಡಿದ್ದಾರೆ. ಅಂದ ಹಾಗೆ, ಅವರ ಬಂದ ಉಡುಗೊರೆ ಒಂದು ಚಂದದ ಬ್ಯಾಟ್. ಈ ಕ್ರಿಕೆಟ್ ಬ್ಯಾಟ್ ಅಂತಿಂಥದ್ದಲ್ಲ, ೧೯೮೩ರಲ್ಲಿ ವಿಶ್ವಕಪ್ ಗೆದ್ದ ಭಾರತೀಯ ತಂಡದ ಎಲ್ಲ ಆಟಗಾರರ ಸಹಿಯನ್ನು ಒಳಗೊಂಡ ಬ್ಯಾಟ್ ಅದು. ಅದನ್ನು ಕಳುಹಿಸಿಕೊಟ್ಟಿದ್ದು ಆ ತಂಡದ ನಾಯಕತ್ವವನ್ನು ವಹಿಸಿ ಇಡೀ ತಂಡವನ್ನು ಹುರಿದುಂಬಿಸಿ ಗೆಲುವಿನ ಆಕಾಶಕ್ಕೇರಿಸಿದ ರಣವಿಕ್ರಮಿ ಕಪಿಲ್ ದೇವ್!
ಸುದೀಪ್‌ಗೆ ಈ ಉಡುಗೊರೆ ನೋಡಿ ಎಷ್ಟೊಂದು ಖುಷಿಯಾಗಿದೆ ಎನ್ನುವುದು ಅವರು ಟ್ವಿಟರ್‌ನಲ್ಲಿ ಬರೆದಿರುವ ಕ್ಯಾಪ್ಶನ್‌ನಿಂದಲೇ ಗೊತ್ತಾಗುತ್ತದೆ. ʻʻವೋಃಃಃಃಃಃಃಃಃಃಃಃಃಃಃಃಃಃಃ ಇದೆಂಥ ಭಾನುವಾರ.. ಥ್ಯಾಂಕ್ಯೂಃಃಃಃ ಕಪಿಲ್ ದೇವ್ ಸರ್SSSSSS ಬೆಳಗ್ಗೆ ಎದ್ದ ಕೂಡಲೇ ಎದುರಾದ ಈ ದೊಡ್ಡaaaaaa ಅಚ್ಚರಿಗಾಗಿ.. ವೋwwwww ನಾನು ನಿರೀಕ್ಷೆ ಮಾಡಿರಲೇ ಇಲ್ಲ. ಇದೊಂದು ಕ್ಲಾಸಿಕ್ ಪೀಸ್. ಹೋ.. ನಾನೀಗ ಪ್ರಪಂಚದ ಉತ್ತುಂಗ ಶಿಖರದಲ್ಲಿದ್ದೇನೆ ಅನಿಸುತ್ತಿದೆ.. ತ್ಯಾಂಕ್ಯೂ.. ತ್ಯಾಂಕ್ಯೂ…
ಯಾವುದೀ ಬ್ಯಾಟ್?
೧೯೮೩ರಲ್ಲಿ ಭಾರತ ತಂಡ ಮೊದಲ ಬಾರಿಗೆ ವಿಶ್ವ ವಿಜೇತವಾದ ಚಾರಿತ್ರಿಕ ಕ್ಷಣವನ್ನು ಚಿರಸ್ಮರಣೀಯಗೊಳಿಸುವ ಉದ್ದೇಶದಿಂದ ಬ್ಯಾಟ್‌ನ ಸ್ಮರಣಿಕೆಯನ್ನು ರೂಪಿಸಲಾಗಿತ್ತು. ಕಪಿಲ್ ದೇವ್ ಅವರು ಈ ಬ್ಯಾಟನ್ನು ಕಿಚ್ಚ ಸುದೀಪ್‌ಗೆ ಕಳುಹಿಸಿಕೊಟ್ಟಿದ್ದಾರೆ.
ಕಿಚ್ಚ ಕಪಿಲ್‌ರ ಡೈ ಹಾರ್ಡ್ ಫ್ಯಾನ್
ಕಿಚ್ಚ ಸುದೀಪ್ ಕ್ರಿಕೆಟ್‌ನ ಫ್ಯಾನ್ ಅಷ್ಟೇ ಅಲ್ಲ. ಕಪಿಲ್ ದೇವ್ ಅವರ ಫ್ಯಾನ್. ೧೯೭೩ರಲ್ಲಿ ಹುಟ್ಟಿದ ಸುದೀಪ್‌ಗೆ ೧೯೮೩ರ ಹೊತ್ತಿಗಾಗಲೇ ಕ್ರಿಕೆಟ್ ಹುಚ್ಚು ಹಿಡಿದಿತ್ತು. ಆಗಲೇ ತಾನು ಜೀವಮಾನದಲ್ಲೊಮ್ಮೆಯಾದರೂ ಕಪಿಲ್ ದೇವ್ ಅವರನ್ನು ನೋಡಬೇಕೆಂಬ ಆಸೆ ಹೊತ್ತಿದ್ದರು. ಆದರೆ, ಸಾಧ್ಯವಾಗಿರಲಿಲ್ಲ.
ನನಗೂ ಆಸೆ ಇತ್ತು ಎಂದಿದ್ದ ಕಪಿಲ್!
ಕಳೆದ ವರ್ಷ ʻ೮೩ʼ ಸಿನಿಮಾದ ಪ್ರಮೋಷನ್‌ಗಾಗಿ ಬಂದಿದ್ದ ಕಪಿಲ್ ದೇವ್ ಮತ್ತು ಸುದೀಪ್ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು. ಆಗ ಸುದೀಪ್ ತನ್ನ ಬದುಕಿನ ಆಸೆಯನ್ನು ಅವರ ಮುಂದೆ ಹೇಳಿಕೊಂಡಿದ್ದರು. ಇದಕ್ಕೆ ಅತ್ಯಂತ ಭಾವುಕರಾಗಿ ಪ್ರತಿಕ್ರಿಯಿಸಿದ್ದ ಕಪಿಲ್ ದೇವ್ ʻಸುದೀಪ್ ನೀವು ತುಂಬ ದೊಡ್ಡ ಮನುಷ್ಯ. ನಿಜವೆಂದರೆ ನಾನೇ ನಿಮ್ಮನ್ನೊಮ್ಮೆ ಭೇಟಿಯಾಗಬೇಕು ಅಂತ ಬಯಸಿದ್ದೆʼ ಎಂದು ಹೇಳಿದ್ದರು. ಆಗ ಅವರಿಬ್ಬರೂ ಭಾವುಕರಾಗಿದ್ದರು. ʻಈಗʼ ಚಿತ್ರದ ಮೂಲಕ ಸುದೀಪ್ ಉತ್ತರ ಭಾರತದ ಮೂಲೆ ಮೂಲೆಯನ್ನು ತಲುಪಿದ್ದರು.
ಇದನ್ನೂ ಓದಿ| Vikrant Rona Trailer | ಕ್ಯೂರಿಯಾಸಿಟಿ ಕೆರಳಿಸಿದ ʼಗರ ಗರ ಗರ ಗಗ್ಗರ ಜರ್ಬ, ಪಿರ ನಲ್ಕುರಿ ನೆತ್ತರ ಪರ್ಬʼ