Site icon Vistara News

ಮೇ 28 ರಿಂದ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಆರಂಭ: ವಿ.ಸುನಿಲ್ ಕುಮಾರ್

amruta bharatige kannadadarati

ಬೆಂಗಳೂರು: ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ರಾಷ್ಟ್ರಭಕ್ತಿ ಅಭಿಯಾನ ಮೇ 28 ರಿಂದ ಆರಂಭವಾಗಲಿದ್ದು, ನಾಡಿನಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ 75 ಸ್ಥಳಗಳಲ್ಲಿ ಅಂದು ಏಕಕಾಲಕ್ಕೆ ಚಾಲನೆ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಕೆ.ಆರ್. ವೃತ್ತದಲ್ಲಿರುವ ಬೆಸ್ಕಾಂ ಮುಖ್ಯಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯಿಂದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಸಲಾಗಿದೆ. ತಂತ್ರ್ಯ ಹೋರಾಟಕ್ಕೆ ಕನ್ನಡದ ವೀರಭೂಮಿ ನೀಡಿದ ಕೊಡುಗೆಯನ್ನು ಸ್ಮರಿಸುವುದು ಹಾಗೂ ರಾಷ್ಟ್ರೀಯ ವಿಚಾರಧಾರೆಗಳನ್ನು ಜಾಗೃತಿಗೊಳಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ‘ಅಮೃತ ಭಾರತಿಗೆ ಕನ್ನಡದಾರತಿ’ ಎಂಬ ಘೋಷವಾಕ್ಯದೊಂದಿಗೆ ಮೂರು ಹಂತದಲ್ಲಿ ಮೂರು ತಿಂಗಳು ಕಾಲ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಇದನ್ನೂ ಓದಿ | ಆಗಸ್ಟ್‌ನಲ್ಲಿ ಮನೆ ಮನೆಯಲ್ಲಿ ರಾಷ್ಟ್ರಧ್ವಜ ಅಭಿಯಾನ

ಮೇ 28 ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೂವರು ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದು, ವಿಧಾನಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ವಿದುರಾಶ್ವತ್ಥದಲ್ಲಿ ಕಾರ್ಯಕ್ರಮ ಉದ್ಘಾಟಿಸುವರು.

ಅಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯಕ್ರಮ ನಡೆಯುತ್ತದೆ. ಹೋರಾಟ ನಡೆದ ವೀರಭೂಮಿಯಲ್ಲಿ ಶಿಲಾಫಲಕ ಅಳವಡಿಸಲಾಗುತ್ತದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಧಿಕಾರಿಗಳಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಸ್ವಾತಂತ್ರ‍್ಯದ ಹೋರಾಟ ನಡೆದ ಪ್ರಮುಖ 75 ಸ್ಥಳಗಳನ್ನು ಗುರುತಿಸಿ ಆ ಐತಿಹಾಸಿಕ ಸ್ಥಳಗಳಲ್ಲಿ ನಡೆದ ಸ್ವಾತಂತ್ರ‍್ಯದ ಹೋರಾಟದ ಬಗ್ಗೆ ಈಗಾಗಲೇ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ 75 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಈ ಎಲ್ಲಾ ೭೫ ಸ್ಥಳಗಳಲ್ಲಿ ಸ್ವಾತಂತ್ರ‍್ಯ ಹೋರಾಟದ ಸ್ಮರಣೆ, ಸ್ಮಾರಕ ಶಿಲಾಫಲಕ ಅನಾವರಣ ಹಾಗೂ ದೇಶಭಕ್ತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನದಲ್ಲಿ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ | ಸಂಪುಟದ ಕುರಿತು ಸಿಎಂ ನಿರ್ಧಾರಕ್ಕೆ ಬದ್ಧ ಎಂದ ಸುನಿಲ್‌ಕುಮಾರ್‌

ಜುಲೈ ೧ ರಿಂದ ಜುಲೈ ೧೫ ರವರೆಗೆ ‘ಹೋರಾಟದ ನೆಲದಲ್ಲಿ ಒಂದು ದಿನ’ ಎನ್ನುವ ಪ್ರೇರಣಾದಾಯಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸ್ವಾತಂತ್ರ‍್ಯ ಹೋರಾಟ ನಡೆದ ನಾಡಿನ ಪ್ರಮುಖ 15 ಸ್ಥಳಗಳಲ್ಲಿ ನಾಟಕಗಳು, ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಮೆರವಣಿಗೆ, ಸಾಕ್ಷ್ಯಚಿತ್ರಗಳ ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೂರನೇ ಹಂತದಲ್ಲಿ ಆಗಸ್ಟ್ 1 ರಿಂದ ಆಗಸ್ಟ್ 8 ರ ವರೆಗೆ ರಾಜ್ಯದ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಎಂಬ ಶೀರ್ಷಿಕೆಯಲ್ಲಿ ಮಹೋತ್ಸವದ ರಥಯಾತ್ರೆ ನಡೆಸಲಾಗುತ್ತದೆ.

ರಾಜ್ಯದ 31 ಜಿಲ್ಲೆಗಳನ್ನು ಸ್ಪರ್ಷಿಸಿ ಈ ರಥಯಾತ್ರೆ ಬೆಂಗಳೂರಿಗೆ ತಲುಪಲಿದೆ. ರಥಯಾತ್ರೆ ಸಾಗಬೇಕಾದ ಮಾರ್ಗಗಳ ರೂಟ್ ಮ್ಯಾಪನ್ನು ಕರಾರುವಕ್ಕಾಗಿ ಸಿದ್ದಪಡಿಸಲಾಗುತ್ತಿದ್ದು, ಜಿಲ್ಲಾವಾರು ಕಾಲೇಜು ವಿದ್ಯಾರ್ಥಿಗಳು, ಯುವಕ ಸಂಘ, ಕಲಾ ತಂಡಗಳನ್ನು ಬಳಸಿಕೊಂಡು ಮೆರವಣಿಗೆ ನಡೆಸಲಾಗುತ್ತದೆ.

ವಿವಿಧ ರಂಗಾಯಣದಿಂದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ನಾಟಕಗಳನ್ನು ಆಯಾ ಜಿಲ್ಲಾವಾರು ರಚನೆ ಮಾಡಲು ಸೂಚನೆ ನೀಡಲಾಗಿದೆ. ಆಗಸ್ಟ್ 9, 10, 11 ರಂದು ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ.

ಜಿಲ್ಲೆಗಳಿಂದ ಹೊರಟ ರಥಯಾತ್ರೆ ಆಗಸ್ಟ್ 9 ರಂದು ಬೆಂಗಳೂರು ತಲುಪಲಿವೆ. ರಾಜಧಾನಿಯಲ್ಲಿ ಭಾರೀ ಮೆರವಣಿಗೆ, ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯುತ್ತದೆ. ಆಗಸ್ಟ್ 9 ರಿಂದ ಇಡೀ ರಾಜ್ಯದಲ್ಲಿ ಎಲ್ಲರ ಮನೆ ಮನೆಯಲ್ಲಿ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮ ಆಯೋಜಿಸಲಾಗುವುದು. ಇದಕ್ಕೆ ಸಾಕಷ್ಟು ಪೂರ್ವ ತಯಾರಿ ಮಾಡಬೇಕು ಎಂದು ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ವಿವರಿಸಿದರು.

ಇದನ್ನೂ ಓದಿ: ಕನ್ನಡ ಅನುಷ್ಠಾನದಲ್ಲಿ ಹಿಂದೆ ಬಿದ್ದ BDA: ಟಿ.ಎಸ್‌. ನಾಗಾಭರಣ ಅಸಮಾಧಾನ

Exit mobile version