ತುಮಕೂರು: ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ವಿರುದ್ಧ ಕೊಲೆಗೆ ಸುಪಾರಿ ಆರೋಪ ಮಾಡಿದ್ದ ತಮ್ಮ ವಿರುದ್ಧವೇ ಎಫ್‌ಐಆರ್ ದಾಖಲಾಗಿರುವ ಬಗ್ಗೆ ಮಾಜಿ ಶಾಸಕ ಬಿ.ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆ ಸುಪಾರಿ (Supari for Murder) ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಕೂಡ ಈ ಹಿಂದೆಯೇ ದೂರು ನೀಡಿದ್ದೇನೆ. ನನಗೆ ಗೌರಿಶಂಕರ್ ಮೇಲೆ ಯಾವುದೇ ದ್ವೇಷ ಇಲ್ಲ, ರಾಜಕಾರಣಿಗಳು ಸತ್ಯ ಹೇಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶಾಸಕ ಗೌರಿಶಂಕರ್ ಠಾಣೆಗೆ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ತುಮಕೂರು ಎಸ್‌ಪಿ, ಡಿಜಿ, ಗೃಹಸಚಿವ ಹಾಗೂ ಮುಖ್ಯಮಂತ್ರಿಗಳಿಗೆ ಈಗಾಗಲೇ ದಾಖಲೆ ಸಮೇತ ನಾನು ಕೂಡ ದೂರು ನೀಡಿದ್ದೇನೆ. ಶಾಸಕ ಗೌರಿಶಂಕರ್ ನನ್ನ ಮೇಲೆ ಆರೋಪ ಮಾಡುವುದರಿಂದ ಬೇಸರ ಮಾಡಿಕೊಳ್ಳಲ್ಲ. ಮಾಡಿರುವ ತಪ್ಪನ್ನು ಅವರು ಸಮರ್ಥಿಸಿಕೊಳ್ಳುವುದನ್ನು ಬಿಡಬೇಕು. ಯಾವುದೇ ದಾಖಲೆ ಇಲ್ಲದೆ ನನ್ನ ವಿರುದ್ಧ ಅವರು ದೂರು ನೀಡಿದ್ದಾರೆ. ನಾನು ಆ ತರಹದ ನೀಚ ರಾಜಕಾರಣಕ್ಕೆ ಇಳಿಯುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Karnataka Election 2023 | ಸುಮಲತಾ ಬೆಂಬಲಿಗ 28ರಂದು ಬಿಜೆಪಿಗೆ; ಅಂಬರೀಷ್ ಪತ್ನಿಯ ಬಿಜೆಪಿ ಸೇರ್ಪಡೆಗೆ ಇದು ಮುನ್ನುಡಿ?
ಗೌರಿಶಂಕರ್‌ನಿಂದ ಸುಪಾರಿ ಪಡೆದವರೇ ಬೇರೆಯವರ ಕಡೆಯಿಂದ ನನಗೆ ಹೇಳಿ ಕಳುಹಿಸಿದ್ದಾರೆ. ಇದರ ಜತೆಗೆ ಗುಪ್ತಚರ ಮಾಹಿತಿ ಆಧಾರದ ಮೇಲೆ ನಾನು ದೂರು ನೀಡಿದ್ದೇನೆ. ಗೌರಿಶಂಕರ್ ಹತಾಶರಾಗಿದ್ದಾರೆ. ಏಕೆಂದರೆ ಅವರ ವಿರುದ್ಧ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಹಾಕಿದ್ದೇನೆ. ಎರಡನೇಯದಾಗಿ ಅವರ ಮೇಲೆ ಸಿಒಡಿ ರಿಪೋರ್ಟ್, ಚಾರ್ಜ್‌ಶೀಟ್ ಆಗಿದೆ. ಮೂರನೇಯದಾಗಿ ಕೊರೊನಾ ಲಸಿಕಾಕರಣದಲ್ಲಿ ನಕಲಿ ವ್ಯಾಕ್ಸಿನ್ ಕೊಡಿಸಿರುವ ಆರೋಪವಿದೆ. ಈಗ ನನ್ನ ಕೊಲೆಗೆ ಸಪಾರಿ ಕೊಟ್ಟಿರುವ ಕೇಸ್ ಕೂಡ ಇದೆ. ಇವರು ಶಾಸಕರಾಗಿ ಬಂದಾಗಿನಿಂದ ಒಂದಲ್ಲ ಒಂದು ಅಪರಾಧ ಪ್ರಕರಣದಲ್ಲಿ ತೊಡಗಿದ್ದಾರೆ. ಈ ಮೂಲಕ ಕ್ಷೇತ್ರ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೇರೆ ಬೇರೆ ಕಾರಣದಿಂದ ಗೌರಿಶಂಕರ್ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿದ್ದಾರೆ. ಈಗ ಹಳ್ಳಿ ಹಳ್ಳಿಗಳಲ್ಲಿ ಜನ ಸುರೇಶ್ ಗೌಡ ಹೆಸರು ಹೇಳುತ್ತಿರುವ ಕಾರಣ, ಹತಾಶರಾಗಿ ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಹೀಗಾಗಿ ನಾನು ಒಂದೂವರೆ ತಿಂಗಳ ಹಿಂದೆಯೇ ಅವರ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಹೇಳಿದರು.
ಕೀಳುಮಟ್ಟದ ರಾಜಕೀಯ ನನಗೆ ಬೇಕಾಗಿಲ್ಲ
ಕೊಲೆಗೆ ಸುಪಾರಿ ನೀಡಿರುವುದು ರುಜುವಾತು ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂಬ ಗೌರಿಶಂಕರ್ ಹೇಳಿಕೆಗೆ ಸ್ಪಂದಿಸಿ, ಅವರು ನೇಣು ಹಾಕಿಕೊಳ್ಳುತ್ತಾರೋ, ಇಲ್ಲ ಬೇರೆ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೋ, ಕೋರ್ಟ್ ಕಟಕಟೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೋ ಎಂಬುವುದು ಅವರಿಗೆ ಬಿಟ್ಟ ವಿಚಾರ. ಸತ್ಯಾಸತ್ಯತೆ ನೋಡುವ ಭಗವಂತ ಮೇಲಿದ್ದಾನೆ. ಗೌರಿಶಂಕರ್ ಸುಪಾರಿ ಕೊಟ್ಟಿದ್ದರೆಂಬ ವಿಚಾರ ನಿಜ, ಶಾಸಕರನ್ನು ಹೆದರಿಸುವ, ಬೆದರಿಸುವ ಕೀಳು ಮಟ್ಟದ ರಾಜಕೀಯ ನನಗೆ ಬೇಕಾಗಿಲ್ಲ ಎಂದ ಅವರು, ಗೌರಿಶಂಕರ್ ಅವರು ಪದೇ ಪದೆ ನನ್ನ ಮೇಲೆ ಸಿಡಿ ಬಿಡುವುದು, ಅಪಪ್ರಚಾರ ಮಾಡುವುದು ಸರಿಯಲ್ಲ. ನನ್ನ ವಿರುದ್ಧ ಅಪಪ್ರಚಾರ ಮಾಡಿಯೇ ಅವರು ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ಆರೋಪಿಸಿದರು.
ವೈರಲ್ ಆಡಿಯೊಗೂ ನನಗೂ ಸಂಬಂಧವಿಲ್ಲ
ಆಡಿಯೊ ವೈರಲ್ ಹಿನ್ನೆಲೆಯಲ್ಲಿ ಗೌರಿಶಂಕರ್ ನನ್ನ ಮೇಲೆ ದೂರು ಕೊಟ್ಟಿದ್ದಾರೆ. ರಾಜ್ಯ ಸರ್ಕಾರ, ತನಿಖಾ ಸಂಸ್ಥೆಗಳಿವೆ. ಹಾಗೆಯೇ ಪೊಲೀಸ್ ಇಲಾಖೆ ಮೇಲೆಯೂ ನನಗೆ ನಂಬಿಕೆ ಇದೆ. ಅವರು ಈ ಬಗ್ಗೆ ತನಿಖೆ ನಡೆಸುತ್ತಾರೆ ಎಂದ ಅವರು, ಗೌರಿಶಂಕರ್ ಅವರೇ ಈ ಕೇಸ್ ಅನ್ನು ಸಿಒಡಿ ತನಿಖೆಗೆ ಕೊಡಿ ಎಂದು ಹೇಳಿದ್ದಾರೆ. ನಾನು ಯಾವ ದೇವರ ಮುಂದೆ ಬೇಕಾದರೂ ಆಣೆ ಪ್ರಮಾಣ ಮಾಡಿ ಹೇಳಲು ಸಿದ್ಧನಿದ್ದೇನೆ, ಗೌರಿ ಶಂಕರ್ ನನ್ನ ಕೊಲೆಗೆ ಸುಪಾರಿ ಕೊಟ್ಟಿರುವುದು ನಿಜ. ನನಗೂ, ವೈರಲ್ ಆಗಿರುವ ಆಡಿಯೊಗೂ ಸಂಬಂಧವಿಲ್ಲ ಎಂದು ತಿಳಿಸಿದರು.
ಕಾನೂನು ಪ್ರಕಾರ ಕಾಲ್ ರೆಕಾರ್ಡ್ ಮಾಡುವುದು ತಪ್ಪು. ಆ ವ್ಯಕ್ತಿಯನ್ನು ಕೇಳದೆ ಅವರ ಕಾಲ್ ರೆಕಾರ್ಡ್ ಮಾಡುವಂತಿಲ್ಲ. ಯಾವುದೇ ವ್ಯಕ್ತಿಯ ಆಡಿಯೊ, ವಿಡಿಯೊಗಳನ್ನು ವೈರಲ್ ಮಾಡುವಂತಿಲ್ಲ. ಈ ರೀತಿ ಮಾಡಿದರೆ ಹೈಕೋರ್ಟ್‌ಗೆ ತೆರಳಿ, ಆಡಿಯೊ ವೈರಲ್ ಸಂಬಂಧಿಸಿದಂತೆ ತನಿಖೆಗೆ ಒತ್ತಾಯಿಸುತ್ತೇನೆ. ಕಾಲ್ ರೆಕಾರ್ಡ್ ಮಾಡಿ, ಬಿಡುಗಡೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಹ ಕೆಲಸ ಮಾಡುತ್ತೇನೆ ಎಂದರು.
ಸುರೇಶ್ ಗೌಡ ಫ್ಲೆಕ್ಸ್‌ಗೆ ಎಲೆ ಅಡಕೆ ಜಗಿದು ಉಗಿದ ಕಿಡಿಗೇಡಿಗಳು
ಮಾಜಿ ಶಾಸಕ ಸುರೇಶ್ ಗೌಡ ಮತ್ತು ಶಾಸಕ ಗೌರಿಶಂಕರ್ ನಡುವೆ ಕೊಲೆ ಸುಪಾರಿ ಆರೋಪ, ಪ್ರತ್ಯಾರೋಪ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ಮಾಜಿ ಶಾಸಕ ಸುರೇಶ್ ಗೌಡ ಫ್ಲೆಕ್ಸ್‌ಗೆ ಕಿಡಿಗೇಡಿಗಳು ಎಲೆ ಅಡಕೆ ತಿಂದು ಉಗಿದಿರುವುದು ಕಂಡುಬಂದಿದೆ. ಮದಕರಿ ನಾಯಕರ ಜಯಂತ್ಯುತ್ಸವ ಹಿನ್ನೆಲೆಯಲ್ಲಿ ನಗರದ ಟೌನ್ ಹಾಲ್ ವೃತ್ತದ ಎದುರಿನ ಅಶೋಕ ರಸ್ತೆಯಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಅವರ ಫ್ಲೆಕ್ಸ್ ಅಳವಡಿಸಲಾಗಿತ್ತು. ಜತೆಗೆ ರಸ್ತೆಯುದ್ದಕ್ಕೂ ವಿವಿಧ ನಾಯಕರ ಭಾವಚಿತ್ರವಿರುವ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು. ಆದರೆ ಸುರೇಶ್ ಗೌಡ ಭಾವಚಿತ್ರ ಇರುವ ಫ್ಲೆಕ್ಸ್ ಮೇಲೆ ಮುಖದ ಭಾಗಕ್ಕೆ ಎಲೆ ಅಡಿಕೆ ತಿಂದು ಉಗಿದಿರುವುದು ಕಂಡುಬಂದಿದೆ. ಸುರೇಶ್ ಗೌಡ ವಿರುದ್ಧ ಶಾಸಕ ಗೌರಿಶಂಕರ್ ದೂರು ದಾಖಲಿಸಿದ ಮರುದಿನವೇ ಈ ಘಟನೆ ಬೆಳಕಿಗೆ ಬಂದಿದೆ.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾಜಿ ಶಾಸಕ ಸುರೇಶ್ ಗೌಡ, ತುಮಕೂರು ಗ್ರಾಮಾಂತರ ಹಾಲಿ ಶಾಸಕ ಗೌರಿಶಂಕರ್ ವಿರುದ್ಧ ತನ್ನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಸುರೇಶ್ ಗೌಡ ಹೇಳಿಕೆಯಿಂದ ತೇಜೋವಧೆಯಾಗಿದೆ, ಅವರ ಭಾಷಣದಿಂದ ನನ್ನ ವಿರುದ್ಧವೇ ಕೊಲೆ ಸಂಚು ರೂಪಿಸಲಾಗಿದೆ ಎಂಬ ಅನುಮಾನ ಹಾಗೂ ಜೀವಭಯ ಕಾಡುತ್ತಿದೆ ಎಂದು ಶಾಸಕ ಗೌರಶಂಕರ್ ನೀಡಿದ ದೂರಿನ ಮೇರೆಗೆ ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Murder plan | ಕೊಲೆಗೆ ಸುಪಾರಿ ಕೊಟ್ಟಿದ್ದಾರೆ ಎಂದ ಸುರೇಶ್ ಗೌಡ ವಿರುದ್ಧ ಎಸ್ಪಿಗೆ ದೂರು ನೀಡಿದ ಶಾಸಕ ಗೌರಿಶಂಕರ್