ಉತ್ತರ ಕನ್ನಡ: ಕಾರವಾರದಲ್ಲಿ ವೈದ್ಯಕೀಯ ಕಾಲೇಜಿದ್ದು,ಕರಾವಳಿ ಘಟ್ಟದ ಮೇಲಿರುವ ತಾಲೂಕುಗಳ ಜನರಿಗೆ ಅನುಕೂಲವಾಗುವಂತೆ ಕುಮಟಾ ಕ್ಷೇತ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಅವಶ್ಯವಿರುವ ಅನುದಾನಕ್ಕೆ ಮಂಜೂರಾತಿ ನೀಡಲಾಗುವುದು. ಈ ಯೋಜನೆಗೆ ಶೀಘ್ರ ಅಡಿಗಲ್ಲು ಕಾರ್ಯಕ್ರಮ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶಿರಸಿಯ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಹಾಗೂ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಇದನ್ನೂ ಓದಿ | Vishveshwar Hegde Kageri | ಕಾಗೇರಿ ಅವರ ಅನುಭವದ ಪ್ರಭಾವ ಇಡೀ ರಾಜ್ಯಕ್ಕೆ ದೊರಕಲಿದೆ: ಸಿಎಂ ಬೊಮ್ಮಾಯಿ ವಿಶ್ವಾಸ
ಶಿರಸಿಯಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪನೆ
ಶಿರಸಿಯಲ್ಲಿ ಭೂ ಕುಸಿತ, ಹಸಿರು ಪ್ರದೇಶ ವಿಸ್ತರಣೆ, ಪಶ್ಚಿಮ ಘಟ್ಟ, ಪರಿಸರ ಸೂಕ್ಷ ವಲಯ, ವನ್ಯಜೀವಿಗಳ ಸಂರಕ್ಷಣೆ, ವನ ಮತ್ತು ಜನಗಳ ನಡುವೆ ಸಾಮರಸ್ಯದ ಸಂಬಂಧ ಸೇರಿ ಹಲವು ವಿಷಯಗಳ ಬಗ್ಗೆ ಅಧ್ಯಯನವನ್ನು ಸಾಧ್ಯವಾಗಿಸಲು ಪರಿಸರ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು. ವಿಶ್ವವಿದ್ಯಾಲಯ ಸ್ಥಾಪನೆಗೆ ಅನುದಾನ, ರೂಪುರೇಷೆ ಸಿದ್ಧಪಡಿಸಿ ಅಡಿಗಲ್ಲು ಹಾಕಲಾಗುವುದು. ಈ ಯೋಜನೆ ರಾಜ್ಯದಲ್ಲಿ ಪ್ರಥಮವಾಗಿದೆ. ಪರಿಸರ ರಕ್ಷಣೆಯ ಅಧ್ಯಯನಕ್ಕೆ ಈ ಕಾಲೇಜು ಉಪಯುಕ್ತವಾಗಲಿದೆ. ಆಯವ್ಯಯದಲ್ಲಿ ಹಸಿರು ಬಜೆಟ್ ಅಡಿಯಲ್ಲಿ 100 ಕೋಟಿ ರೂ. ಗಳನ್ನು ಮೀಸಲಿರಿಸಿದ್ದು, ಇದರಡಿ ಉತ್ತರ ಕರ್ನಾಟಕಕ್ಕೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದರು.
ಅರಣ್ಯವಾಸಿಗಳ ರಕ್ಷಣೆ
800 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ, ಅರಣ್ಯದಲ್ಲಿ ವಾಸಿಸುವವರ ಹಕ್ಕು ರಕ್ಷಣೆಗಾಗಿ, ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು ಅಂತಿಮ ಹಂತದಲ್ಲಿದೆ. ರಾಜ್ಯದಿಂದ ಅಫಿಡವಿಟ್ ಸಲ್ಲಿಸಲಾಗಿದೆ. ಅರಣ್ಯವಾಸಿಗಳ ರಕ್ಷಣೆಗಾಗಿ ಕಾನೂನು ಚರ್ಚೆಗಳನ್ನು ನಡೆಸಿ, ಮತ್ತೊಂದು ಅಫಿಡೆವಿಟ್ ಅನ್ನು ಸಲ್ಲಿಸಲಾಗುವುದು. ಅರಣ್ಯವಾಸಿಗಳನ್ನು ಒಕ್ಕಲ್ಲೆಬ್ಬಿಸುವ ಕೆಲಸವನ್ನು ಸರ್ಕಾರ ಮಾಡುವುದಿಲ್ಲ. ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ಯಾವುದೇ ರೀತಿಯ ಕ್ರಮಗಳನ್ನು ಅಧಿಕಾರಿಗಳು ನನ್ನ ಗಮನಕ್ಕೆ ತರಲೇಬೇಕೆಂದು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಶಿವರಾಮ್ ಹೆಬ್ಬಾರ್, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಆರ್. ವಿ. ದೇಶಪಾಂಡೆ ಶಾಸಕರು ಮತ್ತಿತರ ಗಣ್ಯರು ಹಾಜರಿದ್ದರು.
ಇದನ್ನೂ ಓದಿ | Vishveshwar Hegde Kageri | ಉತ್ತರ ಕನ್ನಡದಲ್ಲಿ ಪರಿಸರ ವಿಶ್ವವಿದ್ಯಾಲಯ ಘೋಷಣೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ