Site icon Vistara News

Umesh Reddy | ವಿಕೃತ ಕಾಮಿ ಉಮೇಶ್‌ ರೆಡ್ಡಿ ಗಲ್ಲು ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

Umesh Reddy

ನವದೆಹಲಿ: ವಿಕೃತ ಕಾಮಿ, ಸರಣಿ ಹಂತಕ ಉಮೇಶ್‌ ರೆಡ್ಡಿಗೆ (Umesh Reddy) ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ರದ್ದುಗೊಳಿಸಿದೆ. ಕರ್ನಾಟಕ ಹೈಕೋರ್ಟ್‌ ವಿಧಿಸಿದ್ದ ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್‌ ಜೀವಾವಧಿ ಶಿಕ್ಷೆಗೆ ಇಳಿಸಿದೆ. ಹಾಗಾಗಿ, ಉಮೇಶ್‌ ರೆಡ್ಡಿ ಈಗ 30 ವರ್ಷ ಜೈಲಿನಲ್ಲಿ ಇರಬೇಕಾಗುತ್ತದೆ.

ಉಮೇಶ್‌ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿ ಕರ್ನಾಟಕ ಹೈಕೋರ್ಟ್‌ 2009ರಲ್ಲಿ ತೀರ್ಪು ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ 2011ರಲ್ಲಿ ಎತ್ತಿಹಿಡಿದಿತ್ತು. ಉಮೇಶ್‌ ರೆಡ್ಡಿ ಕ್ಷಮಾದಾನಕ್ಕಾಗಿ ರಾಷ್ಟ್ರಪತಿಯವರಿಗೆ ಮನವಿ ಮಾಡಿದ್ದ. ಆದರೆ, ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಯವರು 2013ರಲ್ಲಿಯೇ ತಿರಸ್ಕರಿಸಿದ್ದರು. ಆದರೆ, ಈಗ ಸುಪ್ರೀಂ ಕೋರ್ಟ್‌, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿದೆ.

ಉಮೇಶ್‌ ರೆಡ್ಡಿಗೆ ವಿಧಿಸಿದ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠವು, “ಉಮೇಶ್‌ ರೆಡ್ಡಿಯನ್ನು 10 ವರ್ಷ ಏಕಾಂತ ಸೆರೆವಾಸದಲ್ಲಿ ಇರಿಸಲಾಗಿದೆ. ಇದರ ಆಧಾರದ ಮೇಲೆ ಉಮೇಶ್‌ ರೆಡ್ಡಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಲಾಗಿದೆ” ಎಂದು ಸ್ಪಷ್ಟಪಡಿಸಿತು.

ಯಾರು ಈ ಉಮೇಶ್‌ ರೆಡ್ಡಿ?

ಕರ್ನಾಟಕ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ವಿಕೃತ ಹಿಂಸಾಚಾರ ನಡೆಸಿದ ಉಮೇಶ್‌ ರೆಡ್ಡಿ (ಬಿ.ಎ.ಉಮೇಶ್) ಒಂದು ಕಾಲದಲ್ಲಿ ದೇಶಾದ್ಯಂತ ಸುದ್ದಿಯಾಗಿದ್ದ. 1969ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ ಉಮೇಶ್‌ ರೆಡ್ಡಿ, 1996ರಿಂದ ಎಸಗಿದ ಸಾಲು ಸಾಲು ವಿಕೃತ ಅಪರಾಧಗಳಿಗೆ ಹೆಸರಾಗಿದ್ದಾನೆ. ಸೈನಿಕನಾಗಿ, ಪೊಲೀಸ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರೂ ಕೊನೆಗೆ ಅಪರಾಧಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಸದ್ಯ ಬೆಳಗಾವಿ ಸೆಂಟ್ರಲ್‌ ಜೈಲಿನಲ್ಲಿದ್ದಾನೆ. ಈತನ ವಿರುದ್ಧ 18 ಕೊಲೆ, 20 ಅತ್ಯಾಚಾರ, ಒಂಬತ್ತು ಇತರ ಕೇಸ್‌ಗಳು ದಾಖಲಾಗಿದ್ದು, ಇವುಗಳಲ್ಲಿ ಅಪರಾಧಿ ಎಂಬುದು ಸಾಬೀತಾಗಿದೆ. ಮನೆಯಲ್ಲಿರುವ ಒಂಟಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದು, ಅವರನ್ನು ಕೊಲೆ ಮಾಡುವುದು ಇವನ ಅಪರಾಧ ಶೈಲಿಯಾಗಿತ್ತು. ಸೈಕೋ ಕಿಲ್ಲರ್‌ ಎಂದೂ ಈತನನ್ನು ಕರೆಯಲಾಗುತ್ತದೆ.

ಇದನ್ನೂ ಓದಿ | Human Sacrifice | ವಿಕೃತ ಹಂತಕ ಶಫಿ ಮನೆಯ ಫ್ರಿಡ್ಜ್‌ನಲ್ಲಿತ್ತು ಮನುಷ್ಯರ 10 ಕೆಜಿ ಮಾಂಸ, ನಿತ್ಯ ಇದೇ ಅಡುಗೆ!

Exit mobile version