Site icon Vistara News

ಪೆನ್ನಾರ್‌ ನದಿ ನೀರು ವಿವಾದ: ನ್ಯಾಯಾಧಿಕರಣ ರಚಿಸಲು ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ, ಕರ್ನಾಟಕಕ್ಕೆ ಹಿನ್ನಡೆ

Supreme Court

Supreme Court Strikes Down Electoral Bonds Scheme: What Are The Reasons? What is the Scheme?

ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಪೆನ್ನಾರ್‌ ನದಿ (ದಕ್ಷಿಣ ಪಿನಾಕಿನಿ) ನೀರು ಬಳಕೆ ವಿವಾದ ಬಗೆಹರಿಸಲು ಮೂರು ತಿಂಗಳೊಳಗೆ ನ್ಯಾಯಾಧಿಕರಣ ರಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ. ಇದರಿಂದಾಗಿ, ಮಾತುಕತೆ ಮೂಲಕ ಜಲವಿವಾದ ಬಗೆಹರಿಸಿಕೊಳ್ಳುವ ಉದ್ದೇಶ ಹೊಂದಿದ್ದ ಕರ್ನಾಟಕಕ್ಕೆ ಹಿನ್ನಡೆಯಾದಂತಾಗಿದೆ.

ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಹಾಗೂ ಸಿ.ಟಿ.ರವಿಕುಮಾರ್‌ ನೇತೃತ್ವದ ನ್ಯಾಯಪೀಠವು ಮೂರು ತಿಂಗಳಲ್ಲಿ ನ್ಯಾಯಾಧಿಕರಣ ರಚಿಸಬೇಕು ಎಂದು ನಿರ್ದೇಶನ ನೀಡಿತು. ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 14ಕ್ಕೆ ಮುಂದೂಡಿತು.

ಇದಕ್ಕೂ ಮೊದಲು ಕೇಂದ್ರ ಸರ್ಕಾರವು ನ್ಯಾಯಾಧಿಕರಣ ರಚಿಸಲು ಹಿಂದೇಟು ಹಾಕಿತ್ತು. ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದಾಗಿ ಕೇಂದ್ರ ಸರ್ಕಾರ ಸೂಚಿಸುವ ಸಾಧ್ಯತೆ ಇದೆ ಎಂದೇ ಹೇಳಲಾಗಿತ್ತು. ಇದರಿಂದ ಕರ್ನಾಟಕದ ವಾದಕ್ಕೂ ಪುಷ್ಟಿ ಬಂದಿತ್ತು. ಆದರೀಗ, ಹೊಸ ನ್ಯಾಯಾಧಿಕರಣ ರಚಿಸಲು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.

ಏನಿದು ಪ್ರಕರಣ?
ದಕ್ಷಿಣ ಪಿನಾಕಿನಿಯ ಉಪನದಿಯಾದ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಕೋಲಾರ ಜಿಲ್ಲೆ ಯರಗೋಳ ಗ್ರಾಮದ ಬಳಿ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ. ಕೋಲಾರ, ಮಾಲೂರು, ಬಂಗಾರಪೇಟೆಯ ಹಲವು ಹಳ್ಳಿಗಳು ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ. ಸುಮಾರು 240 ಕೋಟಿ ರೂ. ವೆಚ್ಚದ ಅಣೆಕಟ್ಟು ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಅನುಮತಿಯನ್ನೂ ಪಡೆದಿದೆ. ಆದರೆ, ಇದಕ್ಕೆ ತಮಿಳುನಾಡು ಸರ್ಕಾರ ತಕರಾರು ತೆಗೆದಿದ್ದು, ಸುಪ್ರೀಂ ಕೋರ್ಟ್‌ ಮೊರೆಹೋಗಿದೆ.

ಮಾರ್ಕಂಡೇಯ ನದಿ ನೀರು ಹರಿವಿನ ನೋಟ.

ತಮಿಳುನಾಡು ತಕರಾರು ಏನು?
ಪೆನ್ನಾರ್‌ ನದಿಯ ನೀರಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವುದು ಅಂತಾರಾಜ್ಯ ಜಲವಿವಾದ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂಬುದು ತಮಿಳುನಾಡಿನ ತಕರಾರಾಗಿದೆ. ಮಾರ್ಕಂಡೇಯ ನದಿಯು ಪೆನ್ನಾರ್‌ನ ಉಪನದಿಯಾದ ಕಾರಣ ಅಣೆಕಟ್ಟು ನಿರ್ಮಿಸಿದರೆ ನದಿ ನೀರಿನ ಹರಿವಿಗೆ ತೊಂದರೆಯಾಗುತ್ತದೆ. ತಮಿಳುನಾಡಿನ ಜನರು ಕೃಷಿ ಹಾಗೂ ಕುಡಿಯಲು ಪೆನ್ನಾರ್‌ ನದಿ ನೀರನ್ನು ಅವಲಂಬಿಸಿದ್ದಾರೆ. ಹಾಗಾಗಿ, ಅಣೆಕಟ್ಟು ನಿರ್ಮಿಸಲು ಅವಕಾಶ ನೀಡಬಾರದು ಎಂದು ತಕರಾರು ತೆಗೆದಿದೆ.

ಕರ್ನಾಟಕದ ವಾದವೇನು?
ಅಣೆಕಟ್ಟು ನಿರ್ಮಾಣ ಯೋಜನೆ ವೈಜ್ಞಾನಿಕವಾಗಿದ್ದು, ಕೇಂದ್ರ ಜಲಶಕ್ತಿ ಸಚಿವಾಲಯವೇ ಅನುಮತಿ ನೀಡಿದೆ ಎಂದು ಕರ್ನಾಟಕ ವಾದ ಮಂಡಿಸಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದು ಕರ್ನಾಟಕದ ಉದ್ದೇಶವಾಗಿತ್ತು. ಇದನ್ನು ರಾಜ್ಯ ಸರ್ಕಾರವು ಕೇಂದ್ರಕ್ಕೂ ಮನವರಿಕೆ ಮಾಡಿತ್ತು. ನ್ಯಾಯಾಧಿಕರಣದ ರಚನೆಯು ಬಿಕ್ಕಟ್ಟು ಬಗೆಹರಿಸಲು ಸಮಯ ತೆಗೆದುಕೊಳ್ಳುವುದರಿಂದ ಮಾತುಕತೆಗೆ ಕರ್ನಾಟಕ ಆದ್ಯತೆ ನೀಡಿತ್ತು.

ಇದನ್ನೂ ಓದಿ | Kaveri River | ತಮಿಳುನಾಡಿಗೆ ಹೆಚ್ಚುವರಿಯಾಗಿ ಹರಿದಳು ಕಾವೇರಿ; ಜಲವಿವಾದಕ್ಕೆ ಅವಕಾಶ ನೀಡದ ವರುಣ

Exit mobile version