ನವದೆಹಲಿ: ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ (Hijab Row)ದ ಕುರಿತ ಆದೇಶವನ್ನು ಎತ್ತಿ ಹಿಡಿದಿದ್ದ ಕರ್ನಾಟಕ ಹೈಕೋರ್ಟ್‌ನ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸತತವಾಗಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಅಕ್ಟೋಬರ್ ೧೩ರಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಆ ಮೂಲಕ ಕರ್ನಾಟಕದಲ್ಲಿ ಆರಂಭವಾಗಿ, ದೇಶಾದ್ಯಂತ ಸುದ್ದಿಯಾಗಿದ್ದ ಪ್ರಕರಣವು ಕೊನೆಯ ಹಂತಕ್ಕೆ ತಲುಪಿದೆ. ಕರ್ನಾಟಕ ಮಾತ್ರವಲ್ಲ, ದೇಶದ ಮಟ್ಟಿಗೆ ಗಮನ ಸೆಳೆದ ಕಾರಣ ಗುರುವಾರದ ಈ ತೀರ್ಪು ಕುತೂಹಲ ಹುಟ್ಟಿಸಿದೆ.
ಕರ್ನಾಟಕದಲ್ಲಿ ಪದವಿ ಪೂರ್ವ ಕಾಲೇಜ್‌ಗಳು, ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು.
ಬಳಿಕ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸರ್ವೋಚ್ಚ ನ್ಯಾಯಾಲಯವು ಸತತವಾಗಿ ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿತ್ತು. ಜಸ್ಟಿಸ್ ಹೇಮಂತ್ ಗುಪ್ತಾ ಮತ್ತು ಸುಧಾಂಶ ಧುಲಿಯಾ ಅವರಿದ್ದ ಪೀಠವು ಈ ಅರ್ಜಿಗಳ ವಿಚಾರಣೆ ನಡೆಸಿದೆ. ಕರ್ನಾಟಕ ಸರ್ಕಾರವು ಫೆಬ್ರವರಿ 5ರಂದು ಆದೇಶ ಹೊರಡಿಸಿ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿತ್ತು.
ಹಲವು ದಿನಗಳವರೆಗೆ ಸುಪ್ರೀಂ ಕೋರ್ಟ್ ಹಿಜಾಬ್ ವಿಚಾರಣೆ ನಡೆಸಿತ್ತು. ಹಿಜಾಬ್ ಪ್ರಕರಣ ತೀವ್ರವಾಗುವುದರ ಹಿಂದೆ ಪಿಎಫ್‌ಐ ಕೈವಾಡ ಇದೆ ಎಂದು ಕರ್ನಾಟಕ ಸರ್ಕಾರ ತಿಳಿಸಿತ್ತು. ಮುಸ್ಲಿಂ ಬಾಲಕಿಯರು ಹಿಜಾಬ್ ಧರಿಸುವುದು ಮೂಲ ಹಕ್ಕು ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.