ಬೆಂಗಳೂರು/ನವದೆಹಲಿ: ಬೆಂಗಳೂರಿನಲ್ಲಿ ಡಾ.ಶಿವರಾಮ ಕಾರಂತ್ ಬಡಾವಣೆ (Karanth Layout) ನಿರ್ಮಾಣಕ್ಕೆ ಸೆಪ್ಟೆಂಬರ್ ಮುಗಿಯುವುದರೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (BDA) ಸುಪ್ರೀಂ ಕೋರ್ಟ್ (Supreme Court) ಗಡುವು ನೀಡಿದೆ.
ಕಾರಂತ್ ಬಡವಾಣೆ ವಿಷಯದಲ್ಲಿ ಕರ್ನಾಟಕ ಸರ್ಕಾರ ಹಾಗೂ ಬಿಡಿಎ ಮಧ್ಯೆ ಉಂಟಾಗಿರುವ ವಿವಾದದ ಕುರಿತು ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಹಾಗೂ ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠವು ಬಿಡಿಎಗೆ ಗಡುವು ನೀಡಿದೆ. ಹಾಗೆಯೇ, ಅಕ್ಟೋಬರ್ ೧೦ರೊಳಗೆ ಸದ್ಯದ ಸ್ಥಿತಿಗತಿಯ ವರದಿ (Status Report) ನೀಡಬೇಕು ಎಂದೂ ಸೂಚಿಸಿದೆ.
ಕಾರಂತ್ ಲೇಔಟ್‌ನಲ್ಲಿ ೨೫ ಸಾವಿರ ನಿವೇಶನಗಳನ್ನು ಮಾಡಲು ಈಗಾಗಲೇ ೨,೨೫೦ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇನ್ನೂ ೪೫ ಎಕರೆ ೧೭.೨೫ ಗುಂಟೆ ಜಾಗದ ಸ್ವಾಧೀನ ಬಾಕಿ ಇರುವುದರಿಂದ ಕೋರ್ಟ್‌ಗೆ ಬಿಡಿಎ ನಾಲ್ಕು ವಾರ ಕಾಲಾವಕಾಶ ಕೇಳಿತ್ತು. ಇದಕ್ಕೆ ಸರ್ವೋಚ್ಚ ನ್ಯಾಯಾಲಯವು ಒಪ್ಪಿಗೆ ಸೂಚಿಸಿದೆ.
ಸದ್ಯದ ಸ್ಥಿತಿ ಹೇಗಿದೆ?
ಬಡಾವಣೆ ನಿರ್ಮಾಣಕ್ಕೆ ಈಗಾಗಲೇ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಟೆಂಡರ್ ಸಹ ಕರೆಯಲಾಗಿದೆ. ಹಾಗಾಗಿ, ಸುಪ್ರೀಂ ಕೋರ್ಟ್ ನೀಡಿರುವ ಗಡುವಿನಲ್ಲಿಯೇ ಪ್ರಕ್ರಿಯೆ ಮುಗಿಯಲಿದೆ ಎಂದು ಬಿಡಿಎ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಕೆಲವು ತಾಂತ್ರಿಕ ಪ್ರಕ್ರಿಯೆಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ೨,೪೭೫ ಕೋಟಿ ರೂ. ಮೌಲ್ಯದ ಟೆಂಡರ್ ಕರೆಯಲಾಗಿದೆ. ಸೆಪ್ಟೆಂಬರ್ ೨೭ರಂದು ಹಣಕಾಸು ವಿಷಯಕ್ಕೆ ಸಂಬಂಧಿಸಿದ ಸಭೆ ಕರೆಯಲಾಗಿದೆ. ಎರಡು-ಮೂರು ದಿನದಲ್ಲಿ ಪ್ರಕ್ರಿಯೆ ಮುಗಿಯಲಿದೆ” ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಟೆಂಡರ್ ಕರೆಯುವ ವಿವಾದದ ವಿಚಾರಣೆ ವೇಳೆ ನ್ಯಾಯಾಲಯವು ಬಿಡಿಎಗೆ ರಾಜ್ಯ ಸರ್ಕಾರದ ಅನುಮೋದನೆ ಬೇಕಿಲ್ಲ ಎಂದು ತಿಳಿಸಿತ್ತು. ಬಿಡಿಎ ರಾಜ್ಯ ಸರ್ಕಾರದ ಇಲಾಖೆ ಅಲ್ಲ. ಹಾಗಾಗಿ, ಟೆಂಡರ್ ಕರೆಯುವ ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿತ್ತು. ಈಗ ನ್ಯಾಯಾಲಯವು ಟೆಂಡರ್ ಪ್ರಕ್ರಿಯೆ ಮುಗಿಸಲು ಗಡುವು ನೀಡಿದೆ.
ಇದನ್ನೂ ಓದಿ | BDA Site | ಬದಲಿ ನಿವೇಶನಕ್ಕೆ ಪ್ರಭಾವ ಬಳಸಿಲ್ಲ, ಬಿಡಿಎ ವಿರುದ್ಧ ಕೋರ್ಟ್‌ಗೆ – ಸಚಿವ ಆರಗ ಜ್ಞಾನೇಂದ್ರ