Site icon Vistara News

Cauvery Water Dispute: ಸುಪ್ರೀಂ ಕೋರ್ಟ್ ವಾಸ್ತವದ ಆಧಾರದಲ್ಲಿ ಆದೇಶ ನೀಡಬೇಕು: ಬಸವರಾಜ ಬೊಮ್ಮಾಯಿ

Ex CM Basavaraj Bommai

ಬೆಂಗಳೂರು: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ (Cauvery Water Dispute) ಸುಪ್ರೀಂ ಕೋರ್ಟ್ ಸಂಪೂರ್ಣ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಆದೇಶವನ್ನೇ ಪರಿಗಣಿಸದೇ, ವಾಸ್ತವದ ಆಧಾರದಲ್ಲಿ ತೀರ್ಪು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇವತ್ತು ಕಾವೇರಿ ವಿಚಾರದಲ್ಲಿ ಸುಪ್ರೀಂ ಕೊರ್ಟ್ ಎರಡು ರಾಜ್ಯಗಳ ವಾದ ಕೇಳಿ ಸಿಡಬ್ಲ್ಯುಎಂಎ ಆದೇಶ ಎತ್ತಿ ಹಿಡಿದಿದೆ. ಮುಂದಿನ 15 ದಿನ ಸಿಡಬ್ಲುಎಂಎ ಆದೇಶ ಪಾಲನೆ ಮಾಡಬೇಕು ಅಂತ ಹೇಳಿರುವುದು ದುರದೃಷ್ಟ. ಮತ್ತೊಮ್ಮೆ ಕರ್ನಾಟಕದ ವಸ್ತು ಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಬೇಕಿದೆ. ಸಿಡಬ್ಲುಎಂಎ ಆದೇಶ ಅಂತಿಮವಲ್ಲ. ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ತನಗೆ ಸಂಬಂಧ ಇಲ್ಲ ಎನ್ನುವುದು ಸರಿಯಲ್ಲ. ಕೇವಲ ಕರ್ನಾಟಕದ ಡ್ಯಾಮ್‌ಗಳ ನೀರಿನ ಮಟ್ಟ ಲೆಕ್ಕ ಹಾಕುವುದಲ್ಲ. ತಮಿಳುನಾಡು ಡ್ಯಾಮ್‌ಗಳಲ್ಲಿನ ನೀರಿನ ಮಟ್ಟ ಲೆಕ್ಕ ಹಾಕಬೇಕು ಎಂದು ಆಗ್ರಹಿಸಿದರು.

ಸಿಡಬ್ಲುಎಂಎ ಮೊದಲ ಆದೇಶ ಬಂದಾಗಲೇ ರಾಜ್ಯ ಸರ್ಕಾರ ಸುಪ್ರೀಂ ‌ಕೋರ್ಟ್ ಮುಂದೆ ಮೆಲ್ಮನವಿ ಸಲ್ಲಿಸಬೇಕಿತ್ತು. ಸರ್ಕಾರ ಎರಡು ಬಾರಿ ನೀರು ಬಿಟ್ಟು ಈಗ ಸುಪ್ರೀಂ ಕೊರ್ಟ್ ಮುಂದೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ಸಂಪೂರ್ಣ ವಾಗಿ ಸಿಡಬ್ಲ್ಯುಎಂಎ ಮೇಲೆ ಅವಲಂಬನೆ ಆಗಿದೆ. ಸಿಡಬ್ಲ್ಯುಆರ್‌ಸಿ, ಸಿಡಬ್ಲುಎಂಎ ಎರಡರ ಧೋರಣೆಯೂ ಸರಿಯಿಲ್ಲ. ಸಿಡಬ್ಲ್ಯುಎಂಎ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ನೋಡಬೇಕು. ಕೇವಲ ಅಂಕಿ ಅಂಶಗಳನ್ನು ಇಟ್ಟುಕೊಂಡು ಆದೇಶ ಮಾಡುತ್ತಿವೆ.

ಕುಡಿಯಲು ನೀರು ಉಳಿಸಿಕೊಳ್ಳಲು ಸರ್ಕಾರ ಹೋರಾಟ ಮಾಡಲಿ

ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳುತ್ತಾರೆ. ತಮಿಳುನಾಡು ಈಗಾಗಲೇ ಅಕ್ರಮವಾಗಿ ನೀರು ಬಳಕೆ ಮಾಡಿಕೊಂಡಿದೆ. ಅದನ್ನು ಸುಪ್ರೀಂಕೋರ್ಟ್ ಗಮನಕ್ಕೆ ತರಬೇಕು. ರಾಜ್ಯ ಸರ್ಕಾರ ಕೇವಲ ನಮ್ಮಲ್ಲಿ ನೀರಿಲ್ಲ ಅಂತ ಹೇಳುವುದಷ್ಟೇ ಅಲ್ಲ. ಬೆಂಗಳೂರು ಒಂದು ಅಂತಾರಾಷ್ಟ್ರೀಯ ನಗರ ಇಲ್ಲಿ ಎಲ್ಲ ಭಾಗದ ಜನರು ಬರುತ್ತಾರೆ. ಬೆಂಗಳೂರಿಗೆ ಕುಡಿಯಲು ಪ್ರತ್ಯೇಕವಾಗಿ ನೀರು ಇಟ್ಟಿದ್ದಾರೆ. ಅದನ್ನು ಸುಪ್ರೀಂ ಕೋರ್ಟ್ ಮುಂದೆ ವಾದ ಮಾಡಬೇಕು ಎಂದು ಮಾಜಿ ಸಿಎಂ ತಿಳಿಸಿದರು.

ಇದನ್ನೂ ಓದಿ | Cauvery Dispute : ಸುಪ್ರೀಂ ಆದೇಶ ಪಾಲಿಸಿದರೆ ಬರಿದಾಗಲಿದೆ KRS; ಇಕ್ಕಟ್ಟಿನಲ್ಲಿ ರಾಜ್ಯ ಸರ್ಕಾರ, ಎಲ್ಲಿಂದ ತರೋದು ನೀರು?

ತಮಿಳುನಾಡಿಗೆ ನವೆಂಬರ್‌ನಲ್ಲಿ ಮತ್ತೊಂದು ಹಿಂಗಾರು ಮಳೆ ಬರುತ್ತದೆ. ಆದರೆ, ಕರ್ನಾಟಕಕ್ಕೆ ಮುಂಗಾರು ಮುಗಿಯುವ ಹಂತದಲ್ಲಿದೆ. ಇದೆಲ್ಲವನ್ನು ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು. ಕುಡಿಯುವ ನೀರಿಗಾದರು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಹೋರಾಟ ಮಾಡಬೇಕು. ಇದರಲ್ಲಿ ನಮಗೆ ರಾಜಕಾರಣ ಮಾಡಲು ಇಷ್ಟ ಇಲ್ಲ. ಈಗಾಗಲೇ ರೈತರ ಬೆಳೆ ಒಣಗಿ ಹೋಗುತ್ತಿದೆ. ರಾಜ್ಯ ಸರ್ಕಾರ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಸಮರ್ಪಕ ವಾದ ಮಾಡದೆ ನಮಗೆ ಹಿನ್ನಡೆ; ಈಗಲಾದರೂ ಸ್ಟಾಲಿನ್‌ ಜತೆ ಮಾತಾಡಿ ಎಂದ ಬಿಎಸ್‌ವೈ

ಬೆಂಗಳೂರು: ರಾಜ್ಯ ಸರ್ಕಾರ (Karnataka Government) ಸಮರ್ಪಕ ವಾದ ಮಾಡದೆ ಇದ್ದುದರಿಂದ, ವಾಸ್ತವಿಕ ಸ್ಥಿತಿಯನ್ನು ಸಮರ್ಥವಾಗಿ ಮನದಟ್ಟು ಮಾಡಿಕೊಡಲು ವಿಫಲವಾಗಿದ್ದರಿಂದ ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ (Supreme court) ರಾಜ್ಯಕ್ಕೆ ಹಿನ್ನಡೆಯಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ (BS Yediyurappa) ವಿಶ್ಲೇಷಿಸಿದ್ದಾರೆ.

ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ನೀರು ಬಿಟ್ಟು ತಪ್ಪು ಮಾಡಿತು. ಈಗ ಕೋರ್ಟ್ ಮುಂದೆ ಸಮರ್ಪಕವಾದ ವಾದ ಮಂಡಿಸುವಲ್ಲಿ ವಿಫಲವಾಯಿತು. ಸರಿಯಾಗಿ ಹೋಂ ವರ್ಕ್ ಮಾಡದೆ ಕೋರ್ಟ್ ಮೆಟ್ಟಿಲೇರಿರುವುದು ಸಾಬೀತಾಗಿದೆ ಎಂದರು.

ಕೋರ್ಟ್ ಆದೇಶಕ್ಕೂ ಮೊದಲೇ ನೀರು ಬಿಟ್ಟು ತಪ್ಪು ಮಾಡಿದರು. ಈಗ ಕೋರ್ಟ್ ಲ್ಲಿ ಸರಿಯಾಗಿ ವಾದ ಮಂಡಿಸದೇ ವಿಫಲರಾದರು. ಈಗ ಮತ್ತೆ ತಪ್ಪು ಮಾಡುವುದು ಬೇಡ, ಮೇಲ್ಮನವಿ ಸಲ್ಲಿಸುವ ಕೆಲಸ ಆಗಬೇಕು ಎಂದು ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಸಲಹೆ ನೀಡಿದರು.

ಈಗಲಾದರೂ ಸ್ಟಾಲಿನ್‌ ಜತೆ ಮಾತನಾಡಿ

ಇನ್ನಾದರೂ ಕಾಂಗ್ರೆಸ್‌ ನಾಯಕರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದು ಹೇಳಿದ್ದಾರೆ. ಸಮಸ್ಯೆಯನ್ನು ಬಗೆಹರಿಸುವಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವಂತೆ ಒತ್ತಾಯ ಮಾಡುವುದು ಸರಿಯಲ್ಲ, ಕಾಂಗ್ರೆಸ್ ತನ್ನ ಮಿತ್ರ ಪಕ್ಷವಾದ ಡಿಎಂಕೆಯ ನಾಯಕರ ಜೊತೆ ಮಾತನಾಡಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ | Cauvery Dispute : ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲೇಬೇಕು; ಪರಿಣತರ ತಂಡ ಕಳುಹಿಸಲಿ ಎಂದ ಎಂ.ಬಿ ಪಾಟೀಲ್‌

ಕಾವೇರಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವೆ ವೈಮನಸ್ಸು ಇರುವುದು ಜಗಜ್ಜಾಹೀರಾಗಿದೆ ಎಂದೂ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಮುಂದೇನು ಮಾಡಬೇಕು?: ಬಿಎಸ್‌ವೈ ಸಲಹೆಗಳು ಇಂತಿವೆ.

  1. ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯಾಗಿರುವುದರಿಂದ ಡಿಎಂಕೆ ನಾಯಕರ ಜತೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಬಹುದು. ಇದನ್ನು ಕಾಂಗ್ರೆಸ್‌ ನಾಯಕರು ಪ್ರಯತ್ನಿಸಬೇಕು.
  2. ಹೋಂ ವರ್ಕ್ ಮಾಡದೆ ಕೋರ್ಟ್ ಮೆಟ್ಟಿಲೇರಿರುವ ಸರಕಾರ ತಕ್ಷಣವೇ ಸುಪ್ರೀಂ ಕೋರ್ಟ್ ಆದೇಶಕ್ಕೆ ಮೇಲ್ಮನವಿ ಸಲ್ಲಿಸಿ ವಾಸ್ತವಿಕ ಪರಿಸ್ಥಿತಿ ವಿವರಿಸಬೇಕು.
  3. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ಸಮಿತಿಯನ್ನು ರಾಜ್ಯಕ್ಕೆ ಕಳುಹಿಸಿ ಜಲಾಶಯಗಳಿಗೆ ಭೇಟಿ ಕೊಟ್ಟು ವಾಸ್ತವ ಸ್ಥಿತಿ ಅಧ್ಯಯನ ಮಾಡಲು ಆದೇಶ ನೀಡುವಂತೆ ಮೇಲ್ಮನವಿ ಸಲ್ಲಿಸಬೇಕು.
  4. ಪ್ರಾಧಿಕಾರದ ಆದೇಶಕ್ಕೆ ನಾವು ಮಧ್ಯ ಪ್ರವೇಶ ಮಾಡಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರಿಂದ ಸುಪ್ರೀಂ ಕೋರ್ಟ್ ಜಲಾಶಯಗಳ ವೀಕ್ಷಣೆಗೆ ಯಾವುದಾದರೂ ಸಮಿತಿಯನ್ನು ಕಳುಹಿಸಿ ಕೊಡಲಿ ಇದನ್ನ ಸರ್ಕಾರ ಮೇಲ್ಮನವಿಯಲ್ಲಿ ಮನವಿ ಮಾಡಬೇಕು.
Exit mobile version