ಮಂಗಳೂರು: ಸುರತ್ಕಲ್ ನ ಫಾಜಿಲ್ ಹತ್ಯೆಗೆ (Surathkal Murder) ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರಾತ್ರಿ ಸುಮಾರು 8 ಗಂಟೆಗೆ ಈ ಕೃತ್ಯ ನಡೆದಿದೆ.
ಸುರತ್ಕಲ್ ನ ಬಟ್ಟೆ ಅಂಗಡಿಯ ಮುಂದೆ ಫಾಸಿಲ್ ನಿಂತಿದ್ದ. ಈತ ಸಮೀಪದ ಹೆಚ್ ಪಿ ಗ್ಯಾಸ್ ಕಂಪನಿಯಲ್ಲಿ ಲೋಡಿಂಗ್ ಕೆಲಸ ಮಾಡುತ್ತಿದ್ದ. ಬಿ ಜೇಸ್ ಎಂಬ ಅಂಗಡಿಯಲ್ಲಿದ್ದ ಸ್ನೇಹಿತನ ಭೇಟಿಗೆ ಬಂದಿದ್ದ ಎನ್ನಲಾಗಿದೆ.
ಕಾರಿನಿಂದ ಇಳಿದ ಮೂವರು ಫಾಜಿಲ್ ಮೇಲೆ ದಾಳಿ ಮಾಡಿದರು. ತಕ್ಷಣವೇ ಫಾಜಿಲ್ ರಕ್ಷಣೆಗೆ ಸ್ನೇಹಿತರು ಹಾಗೂ ಸ್ಥಳೀಯರು ಧಾವಿಸಿದರು. ದುಷ್ಕರ್ಮಿಗಳು ಮುಖಕ್ಕೆ ಕವರ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ದುಷ್ಕರ್ಮಿಗಳ ಮಚ್ಚಿನ ಏಟಿಗೆ ಫಾಜಿಲ್ ನ ಕತ್ತು ಹಾಗೂ ತಲೆಗೆ ಗಂಭೀರ ಗಾಯವಾಗಿತ್ತು. ತೀವ್ರ ರಕ್ತ ಸ್ರಾವದಿಂದ ಫಾಸಿಲ್ ಆಸ್ಪತ್ರೆಯಲ್ಲಿ ಮೃತಪಟ್ಟ. ಈ ನಡುವೆ ಸ್ಥಳೀಯರು ಒಬ್ಬ ಆರೋಪಿಯ ಗುರುತು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಆತ ಸಮೀಪದ ಕುಳಾಯಿ ಪ್ರದೇಶದವನು ಎನ್ನಲಾಗಿದೆ.
ಫಾಜಿಲ್ ನನ್ನು ರಕ್ಷಿಸಲು ಸ್ಥಳೀಯರು ಕಲ್ಲು ತೂರಿದ್ದರಿಂದ ಆರೋಪಿಗಳೂ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಮುಲ್ಕಿ, ಸುರತ್ಕಲ್, ಪಣಂಬೂರು, ಬಜ್ಪೆ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಕೆಎಸ್‌ಆರ್‌ಪಿಯ ಆರು ತುಕಡಿಗಳನ್ನು ಬೆಂಗಳೂರಿನಿಂದ ಕರೆಸಿಕೊಳ್ಳಲಾಗುತ್ತಿದೆ. ವದಂತಿಗಳಿಗೆ ಕಿವಿಯಾಗಬೇಡಿ ಎಂದು ಪೊಲೀಸರು ಪದೇ ಪದೇ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ| Surathkal Murder | ಚುರುಕುಗೊಂಡ ಪೊಲೀಸರ ತನಿಖೆ; ಮಹತ್ವದ ಮಾಹಿತಿ ಸಂಗ್ರಹ