ಮಂಗಳೂರು: ಸುರತ್ಕಲ್‌ನಲ್ಲಿ (Surathkal Murder) ಗುರುವಾರ ರಾತ್ರಿ ನಡೆದ ಫಾಜಿಲ್ (೨೩) ಎಂಬ ಯುವಕನ ಹತ್ಯೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ, ಸ್ಥಳೀಯ ಶಾಲೆ, ಕಾಲೇಜುಗಳಿಗೆ ಇಂದು (ಜುಲೈ ೨೯) ರಜೆಯನ್ನು ಘೋಷಿಸಲಾಗಿದೆ.
ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಂಗಳೂರು ನಗರದ ಸುರತ್ಕಲ್, ಬಜಪೆ, ಮುಲ್ಕಿ ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವಂತೆ ಕೋರಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ತಿಳಿಸಿದ್ದಾರೆ.
ಸುರತ್ಕಲ್‌ನಲ್ಲಿ ಫಾಜಿಲ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿರುವುದರಿಂದ ಸುರತ್ಕಲ್, ಬಜಪೆ, ಮುಲ್ಕಿ, ಪಣಂಬೂರು ವ್ಯಾಪ್ತಿಯಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದೆ.
ಹಂತಕರ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ನಡುವೆ ಇದು ಕೋಮು ದ್ವೇಷದಿಂದ ನಡೆದ ಹತ್ಯೆಯಲ್ಲ. ಬದಲಾಗಿ ಫಾಜಿಲ್‌ನ ದೂರದ ಸಂಬಂಧಿಗಳೇ ನಡೆಸಿದ ಕೃತ್ಯವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಹಳೆಯ ದ್ವೇಷ ಹಾಗೂ ಯುವತಿಯೋರ್ವಳ ಜತೆಗಿನ ಪ್ರೀತಿ ಈ ಹತ್ಯೆಗೆ ಕಾರಣ. ಇತ್ತೀಚೆಗೆ ಫಾಜಿಲ್ ಸಂಬಂಧಿಗಳೊಂದಿಗೆ ಜಗಳ ಕೂಡ ಆಡಿದ್ದ ಎನ್ನಲಾಗಿದೆ. ಆದರೆ ಪೊಲೀಸರು ಈ ಮಾಹಿತಿಯನ್ನು ಖಚಿತ ಪಡಿಸಿಲ್ಲ.
ಇದನ್ನೂ ಓದಿ:ದಕ್ಷಿಣ ಕನ್ನಡದಲ್ಲಿ ಮತ್ತೊಂದು ಹತ್ಯೆ: ಸುರತ್ಕಲ್‌ನಲ್ಲಿ ಮುಸ್ಲಿಂ ಯುವಕನ ಕೊಲೆ