ಧಾರವಾಡ: ಶ್ರೀಲಂಕಾ ಮಾಜಿ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ (Muttiah muralitharan) ಒಡೆತನದ ಕಂಪನಿಗೆ ಸರ್ಕಾರದಿಂದ ನೀರು ಪೂರೈಕೆ ಮಾಡುವುದಕ್ಕೆ ಚಿತ್ರ ನಟ, ಪರಿಸರ ಪ್ರೇಮಿ ಸುರೇಶ್ ಹೆಬ್ಳೀಕರ್ ವಿರೋಧ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ (Dharwad News) ಕುಡಿಯುವ ನೀರಿನ ಸಮಸ್ಯೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ಕಂಪನಿಗೆ ಪ್ರತಿ ದಿನ 20 ಲಕ್ಷ ಲೀಟರ್ ನೀರು ಪೂರೈಕೆ ಮಾಡುವುದು ಸರಿಯಲ್ಲ, ಇದರಿಂದ ಅವಳಿನಗರದ ಜನರಿಗೆ ಸಮಸ್ಯೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದರ ಬಗ್ಗೆ ನಾವು ಗಂಭೀರ ಆಲೋಚನೆ ಮಾಡಬೇಕು, ಹುಬ್ಬಳ್ಳಿ-ಧಾರವಾಡ ಶ್ರೇಷ್ಠ ಜಾಗ. ಇಲ್ಲಿ ಭೀಮಸೇನ್ ಜೋಶಿ, ಗಂಗೂಬಾಯಿ, ದ.ರಾ. ಬೇಂದ್ರೆ ಗೋಕಾಕ್‌ನಂತಹವರು ಹುಟ್ಟಿ ಬೆಳೆದಿದ್ದಾರೆ. ನಾನು ಕೈಗಾರಿಕೆಗೆ ವಿರೋಧ ಮಾಡಿಲ್ಲ, ಆದರೆ, ಯಾವ ಉದ್ಯಮ ಬರಬೇಕು, ಅದು ಹೇಗೆ ಬೆಳೆಯಬೇಕು ಎಂಬ ಯೋಜನೆ ಇರಬೇಕು. ಕೈಗಾರಿಕೆ ಸ್ಥಾಪನೆ ಬೇಡ ಎನ್ನಲ್ಲ, ಅವರಿಗೆ ಬೇಕಾದರೆ ಬೇರೆ ಕಡೆ ಕೊಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ | Muttiah Muralitharan : ಚಾಮರಾಜ ನಗರದಲ್ಲಿ ಮುತ್ತಯ್ಯ ಮುರಳೀಧರನ್ ಉದ್ಯಮ; 8 ತಿಂಗಳಲ್ಲಿ ಆರಂಭ
ಸರ್ಕಾರ ಬಹಳ ದಿನ ಉಳಿಯಲ್ಲ
ಮುರಳೀಧರನ್ (ಸಿಲೋನ್ ಬೆವರೇಜ್ ಕ್ಯಾನ್ ಪ್ರೈ. ಲಿಮಿಟೆಡ್) ಇಲ್ಲೇ ಕೈಗಾರಿಕೆ ಪ್ರಾರಂಭಿಸಲು ಬಂದಿದ್ದಾರೆ. ಸರ್ಕಾರ ಈ ಕಂಪನಿಗೆ ಪ್ರತಿ ದಿನ 20 ಲಕ್ಷ ಲೀಟರ್ ನೀರು ಕೊಡಲು ಮುಂದಾಗಿದೆ. ಒಂದು ಕೈಗಾರಿಕೆ ಬೆಳೆಯಬೇಕಾದರೆ ನೀರು, ವಿದ್ಯುತ್ ಬೇಕು. ಅದನ್ನು ಕೊಟ್ಟರೆ ಮಾತ್ರ ಕೈಗಾರಿಕೆಗಳು ಬರುತ್ತವೆ. ಆದರೆ, ಕೈಗಾರಿಕೆಯವರು ಎಷ್ಟು ಲಾಭ ಬರುತ್ತೆ, ಎಷ್ಟು ಜನರಿಗೆ ಕೆಲಸ ಕೊಡಬೇಕು ಅಂತೆಲ್ಲಾ ಇದೆ. ಈಗ ಮುರಳೀಧರನ್ ಕಂಪನಿಯಲ್ಲಿ 20 ಲಕ್ಷ ಲೀಟರ್ ನೀರಿಗೆ ಬಣ್ಣ ಹಾಕಿ, ಬಾಟಲಿಯಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ. ನಾವು ಇಂತ ಕಂಪನಿಗೆ ಪ್ರಮೋಟ್ ಮಾಡಬೇಕು ಎಂದು ಸರ್ಕಾರಕ್ಕೆ ಯೋಚನೆ ಬಂದಿದೆ. ಬಡವರು, ದೀನ ದಲಿತರ ಬಗ್ಗೆ ಯೋಚನೆ ಮಾಡದ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಸುರೇಶ್ ಹೆಬ್ಳೀಕರ್ ಹೇಳಿದ್ದಾರೆ.
ಧಾರವಾಡದಲ್ಲಿ ದುಮ್ಮವಾಡ, ಕೆಲಗೇರಿ ಹಾಗೂ ಉಣಕಲ್ ಕೆರೆ ಮಾತ್ರ ಇವೆ. ಈಗಾಗಲೇ ಧಾರವಾಡ, ಬೇಲೂರಿನಲ್ಲಿ 600 ಕೈಗಾರಿಕೆಗಳು ಇವೆ. ಅವರಿಗೆ ಕೂಡ ನೀರು ಬೇಕು. ಈಗ ಭೂಮಿ ಕೊಡಲಾಗಿದೆ, ಇನ್ನೂ ಫೌಂಡೇಶನ್ ಹಾಕಿಲ್ಲ. ಒಂದೇ ಕಂಪನಿಗೆ 20 ಲಕ್ಷ ಲೀಟರ್ ನೀರು ಕೊಟ್ಟರೆ, ಕುಡಿಯಲು ಏನು ಮಾಡುವುದು. ಅವಳಿನಗರದ 15 ಲಕ್ಷ ಜನರಿಗೆ 20 ಲಕ್ಷ ಲೀಟರ್ ನೀರು ಕೊಟ್ಟರೆ ಅವರು ಆರಾಮವಾಗಿ ಬದುಕಬಹುದು ಎಂದು ತಿಳಿಸಿದರು.
ಸದ್ಯ ಎಂ.ಬಿ.ಪಾಟೀಲರು ಕೈಗಾರಿಕಾ ಸಚಿವ ಇದ್ದಾರೆ. ಅವರು ಒಳ್ಳೆ ಮನುಷ್ಯ, ಅವರಿಗೆ ಕೂಡ ಕೆರೆ ನೀರು ತುಂಬಿಸುವ ಬಗ್ಗೆ ಆಲೋಚನೆ ಇದೆ. ಅವರ ಜತೆ ನಾನು ಮಾತನಾಡುತ್ತೇನೆ. ಪರಿಸರ ರಕ್ಷಣೆ ಬಗ್ಗೆ ಕೂಡ ಅವರಿಗೆ ಮಾಹಿತಿ ಇದೆ. ಇಷ್ಟು ಕೈಗಾರಿಕೆ ಇಲ್ಲಿ ಬರಬಾರದಿತ್ತು, ಈಗ ಬಂದಿವೆ. ಸದ್ಯ ಪರಿಸರ ಉಳಿಸುವ ಬಗ್ಗೆ ಆಲೋಚನೆ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ | Shakti Scheme : ಶಕ್ತಿ ಯೋಜನೆ ನಿಲ್ಲಲ್ಲ, ಇನ್ನೂ 10 ವರ್ಷ ಓಡುತ್ತೆ: ಸರ್ಕಾರದ ಸ್ಪಷ್ಟನೆ
ಸಿಲೋನ್ ಬೆವರೇಜ್ ಕ್ಯಾನ್ ಉತ್ಪಾದನಾ ಘಟಕ ಸ್ಥಾಪನೆಗೆ ಪ್ರಸ್ತಾವನೆ
ಧಾರವಾಡದ ಮುಮ್ಮಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಒಡೆತನದ ಸಿಲೋನ್ ಬೆವರೇಜ್ ಕ್ಯಾನ್ ಕಂಪನಿಯು, ಅಲ್ಯುಮಿನಿಯಂ ಕ್ಯಾನ್ಸ್ ಆ್ಯಂಡ್ ಬೆವರೇಜಸ್ ಫಿಲ್ಲಿಂಗ್ ಪ್ಲಾಂಟ್ ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದೆ. 440 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಉತ್ಪಾದನಾ ಘಟಕಕ್ಕೆ 26 ಎಕರೆ ಜಮೀನು ಬೇಕು. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಈಗಾಗಲೇ 16.70 ಎಕರೆ, 2.64 ಎಕರೆ ಹಾಗೂ 6.15 ಎಕರೆ ಜಾಗ ಇರುವ ಪ್ಲಾಟ್ ಗುರುತಿಸಿದ್ದು, ಇದಕ್ಕೆ 300 ಕೆವಿಎ ವಿದ್ಯುತ್ ಮತ್ತು ದಿನಕ್ಕೆ 20 ಲಕ್ಷ ಲೀಟರ್ ನೀರು ಸರಬರಾಜು ಮಾಡುವ ಪ್ಲ್ಯಾನ್ ಸಿದ್ಧಪಡಿಸಿದೆ.