ಬೆಂಗಳೂರು: ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಮಗನ ಅರ್ಧ ಎಡಗೈ ಹಿಡಿದು, ಮಗನನ್ನು ಉಳಿಸಿ ಎಂದು ರಾಜಧಾನಿಗೆ ಓಡೋಡಿ ಬಂದ ಕುಪ್ಪಂನ ತಂದೆಗೆ ಸಿಟಿ ವೈದ್ಯರು ಮಗನನ್ನು ಉಳಿಸಿಕೊಟ್ಟಿರುವುದಲ್ಲದೆ, ಶಾಶ್ವತ ಅಂಗವೈಕಲ್ಯದಿಂದ ಪಾರು ಮಾಡಿದ್ದಾರೆ. ನಾರಾಯಣ ಹೆಲ್ತ್ ಆರ್ಥೋಪೆಡಿಕ್ಸ್, ಸ್ಪೇನ್ ಆ್ಯಂಡ್ ಟ್ರಾಮಾ ಕೇರ್ ವೈದ್ಯರು, ಆಂಧ್ರಪ್ರದೇಶದ ಕುಪ್ಪಂ ಮೂಲದ ಚರಣ್ (11) ಎಂಬಾತನಿಗೆ ಎಡಗೈ ಜೋಡಿಸಿ ಮರು ಜೀವ (Surgery) ನೀಡಿದ್ದಾರೆ.
ಅಂದಹಾಗೆ, ಚುರುಕು ಬುದ್ಧಿಯ ಹುಡುಗ ಚರಣ್‌ಗೆ ತಂದೆ ಎಂದರೆ ಆಕಾಶದಷ್ಟು ಪ್ರೀತಿ ಇತ್ತು. ಹೀಗಾಗಿ ಅಪ್ಪನ ದುಡಿಮೆಯನ್ನು ಕಮ್ಮಿ ಮಾಡುವ ಆಸೆಯಿಂದ ಹುಲ್ಲು ಕಟ್ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದ. ಹೀಗಿದ್ದಾಗ ಅದೇನು ಗ್ರಹಚಾರವೋ ಏನು ಕೆಲಸದ ವೇಳೆ ಅಚಾನಕ್ ಆಗಿ ಮೆಷಿನ್‌ಗೆ ಕೈ ಹಾಕಿದ್ದರಿಂದ ಚರಣ್‌ನ ಕೈ ಕಟ್ ಆಗಿತ್ತು. ಕೈ ಅರ್ಧ ಕಟ್ಟಾಗಿ ರಕ್ತದ ಮಡುವಿನಲ್ಲಿ ಬಿದ್ದ ಮಗನ ನೋವು ಕಂಡು ಅಪ್ಪ ಹೌಹಾರಿ ಹೋಗಿದ್ದರು.
ತಡಮಾಡದೇ ತುಂಡಾದ ಎಡಗೈ ಹೊತ್ತು ಬೆಂಗಳೂರಿಗೆ ದೌಡಾಯಿಸಿದ್ದರು. ನಾರಾಯಣ ಹೆಲ್ತ್ ಆರ್ಥೋಪೆಡಿಕ್ಸ್, ಸ್ಪೇನ್ ಆ್ಯಂಡ್ ಟ್ರಾಮಾ ಕೇರ್‌ಗೆ ಕೇವಲ 2 ಗಂಟೆಯಲ್ಲಿ ಬಂದು ಚರಣ್‌ನನ್ನು ದಾಖಲು ಮಾಡಿದ್ದರು. ಪಿಡಿಯಾಟ್ರಿಕ್, ಪ್ಲಾಸ್ಟಿಕ್ ಸರ್ಜನ್ಸ್, ಅನಸ್ತೇಶಿಯಾ, ಪಿಡಿಯಾಟ್ರಿಕ್ ಆರ್ಥೋ ತಂಡ ಸರ್ಜರಿಗೆ ಸಿದ್ಧತೆ ಮಾಡಿಕೊಂಡು, ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಚರಣ್ ಎಡಗೈಯನ್ನು ಮರುಜೋಡಿಸಿದ್ದಾರೆ.
ಚರಣ್ ಎಡಗೈಗೆ ಶಾರ್ಪ್ ಕಟ್ ಆಗಿತ್ತು. ಮೆಷಿನ್‌ನಿಂದ ಕೈ ಹಿಂದಕ್ಕೆ ಎಳೆದ ಕಾರಣ ನಜ್ಜುಗುಜ್ಜಾಗಿತ್ತು. ಸಾಕಷ್ಟು ರಕ್ತ ಕೂಡ ಹೋಗಿತ್ತು. ಆದರೆ, ಅದೃಷ್ಟವಶಾತ್ ಆಸ್ಪತ್ರೆಗೆ ಬರುವ ಹೊತ್ತಿಗೆ ಚರಣ್ ಬ್ಲೀಡಿಂಗ್ ನಿಂತಿತ್ತು. ಧೈರ್ಯಶಾಲಿ ಚರಣ್ ಚಿಕಿತ್ಸೆಗೆ ಸ್ಪಂದಿಸಿದ ಕಾರಣ ಶೇಕಡಾ 70ರಷ್ಟು ಕೈ ಗುಣವಾಗಿದೆ.
ಇದನ್ನೂ ಓದಿ: Drowned in river: ಸ್ನೇಹಿತರೊಂದಿಗೆ ಈಜಲು ಹೋದ ಎಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು
ಮೂರೇ ತಿಂಗಳಲ್ಲಿ ಬೆರಳುಗಳು ಆ್ಯಕ್ಟಿವ್ ಆಗಿದೆ. ವಸ್ತುವನ್ನು ಹಿಡಿಯುವಷ್ಟು ಕೈ ಬಲಿಷ್ಠಗೊಂಡಿದೆ. ಇನ್ನು 5 ತಿಂಗಳಲ್ಲಿ ಸಾಮಾನ್ಯ ಸ್ಥಿತಿಗೆ ಬರುವ ಭರವಸೆಯನ್ನು ವೈದ್ಯರಾದ ಡಾ.ರವಿ ನೀಡಿದ್ದಾರೆ.