ಬಾಗಲಕೋಟೆ: ನಿತ್ಯವೂ ಜನರ ಜತೆಗೆ ಒಡನಾಡುತ್ತಿದ್ದ ಮಂಗ ಅಂದು ಗಾಯಗೊಂಡಿತ್ತು. ಅದನ್ನು ಸಂತೈಸುವುದಷ್ಟೆ ಅಲ್ಲದೆ, ವೈದ್ಯರನ್ನೂ ಕರೆಸಿ ಶಸ್ತ್ರಚಿಕಿತ್ಸೆ ನೆರವೇರಿಸಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ.
ಹುನಗುಂದ ತಾಲೂಕಿನ ಗುಡೂರ(ಎಸ್‌ಸಿ) ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಂಗ ಕಾಲಿನ ಮೂಳೆ ಮುರಿದುಕೊಂಡು ನರಳಾಡುತ್ತಿತ್ತು. ಪಶು ವೈದ್ಯ ಬಿ.ಜಿ.ಬಿಳ್ಳೂರ ಅವರನ್ನು ಗ್ರಾಮಸ್ಥರು ಕರೆಸಿದರು. ವೈದ್ಯರು ತಕ್ಷಣ ಆಗಮಿಸಿ ಮಂಗಕ್ಕೆ ಅರವಳಿಕೆ ಚುಚ್ಚುಮದ್ದು ನೀಡಿ ಆಪರೇಶನ್ ಮಾಡಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ, ಎರಡು ಗಂಟೆಯ ಬಳಿಕ ಮಂಗ ಓಡಾಟ ಆರಂಭಿಸಿತು.
ಈ ಕುರಿತು ಮಾತನಾಡಿದ ಗ್ರಾಮಸ್ಥ ಗದ್ದೆಪ್ಪ ಭಜಂತ್ರಿ ʼʼನಮ್ಮೂರಲ್ಲಿ ಸಾಕಷ್ಟು ಮಂಗಗಳಿವೆ. ಆದರೆ ಅವುಗಳಿಂದ ಯಾವುದೇ ತೊಂದರೆ ಆಗಿಲ್ಲ. ಜಗಳ ಆಡುವ ಭರದಲ್ಲಿ ಒಂದು ಮಂಗ ಕೆಳಗೆ ಬಿದ್ದು ಕಾಲು ಮುರಿದುಹೋಯಿತು. ಆಸ್ಪತ್ರೆಗೆ ಕರೆದೊಯ್ಯುವವರೆಗೂ ಅದಕ್ಕೆ ಪ್ರಜ್ಞೆ ಇರಲಿಲ್ಲ. ಚಿಕಿತ್ಸೆ ಬಳಿಕ ಸುಮಾರು ಎರಡು ಗಂಟೆ ನಂತರ ಮಂಗ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಯಿತು. ನಮ್ಮ ಪ್ರಯತ್ನ ಸಫಲವಾಗಿದ್ದಕ್ಕೆ ನಮಗೆ ಸಂತೋಷವಾಯಿತುʼʼ ಎಂದಿದ್ದಾರೆ.
ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಜಿ.ಜಿ. ಬಿಳ್ಳೂರ ಮಾತನಾಡಿ ʼʼನನ್ನ ಕರ್ತವ್ಯ ನಾನು ಮಾಡಿದ್ದೇನೆ. ಮಂಗ ಸಹಜ ಸ್ಥಿತಿಗೆ ಮರಳಿದ್ದು ಕಂಡು ಖುಷಿಯಾಯಿತುʼʼ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮೊಸಳೆ ಪಾರ್ಕ್ ಆರಂಭಿಸಿ ಎಂದು ಅಂಗಲಾಚುತ್ತಿರುವ ಜನರು