ನವದೆಹಲಿ: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಇಂಡಿಗೋ (IndiGo flight) ವಿಮಾನದ ತುರ್ತು ಡೋರ್ ಅನ್‌ಲಾಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಅವರು, ಈ ಘಟನೆಯ ಸತ್ಯಾಸತ್ಯತೆ ತಿಳಿಯಬೇಕಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 10ರಂದು ಚೆನ್ನೈಯಿಂದ ತಿರುಚಿರಾಪಳ್ಳಿಗೆ ತೆರಳುತ್ತಿದ್ದ ಇಂಡಿಗೋ 6E ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಸಂಸದ ತೇಜಸ್ವಿ ಸೂರ್ಯ ಅವರು ತೆರೆದಿದ್ದರಿಂದಾಗಿ ಸಹ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ತಪಾಸಣೆಗಳನ್ನು ಪೂರ್ಣಗೊಳಿಸಿದ ನಂತರ ವಿಮಾನ ಟೇಕಾಫ್ ಆಗಿದೆ. ತುರ್ತು ದ್ವಾರವನ್ನು ತೆರೆದಿದ್ದರಿಂದಾಗಿ ವಿಮಾನ ಹಾರಾಟ 142 ನಿಮಿಷ ತಡವಾಯಿತು ಎಂಬ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಮಾನ ಟೇಕ್ ಒಫ್ ಆಗುವ ವೇಳೆ ತುರ್ತು ನಿರ್ಗಮನ ಬಾಗಿಲು ತೆರೆಯಲಾಗಿದೆ ಎಂಬ ಮಾಹಿತಿ ಇದೆ. ಆಕಸ್ಮಾತ್ ಆಗಿ ತುರ್ತು ಡೋರ್ ಓಪನ್ ಮಾಡಲಾಗಿದೆ. ವಿಮಾನ ಟೇಕಾಫ್ ಆಗೋ ಮುಂಚೆಯೇ ಈ ಘಟನೆ ನಡೆದಿದೆ. ಬಳಿಕ ಅವರು(ತೇಜಸ್ವಿ ಸೂರ್ಯ) ಪ್ರಯಾಣಿಕರ ಕ್ಷಮೆ ಕೋರಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರ ಹೆಸರನ್ನೇ ಹೇಳದೇ ಜ್ಯೋತಿರಾಧಿತ್ಯ ಸಿಂಧಿಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | Air Travel : ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದ ಸಂಸದ ತೇಜಸ್ವಿ ಸೂರ್ಯ?: ಸುರಕ್ಷತಾ ಸೂಚನೆ ಉಲ್ಲಂಘನೆ ಆರೋಪ