Site icon Vistara News

Suryamitra Award | ಸೆಲ್ಕೋ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೂರ್ಯಮಿತ್ರ ಪ್ರಶಸ್ತಿ; ಸೆ.24ಕ್ಕೆ ಪ್ರದಾನ

selco

ಬೆಂಗಳೂರು: ಸಾಮಾಜಿಕ ಉದ್ಯಮವಾಗಿರುವ ಸೆಲ್ಕೋ ಸಂಸ್ಥೆಯು ಕೊಡಮಾಡುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ (Suryamitra Award) ಪ್ರಧಾನ ಸಮಾರಂಭವು ಸೆಪ್ಟೆಂಬರ್ 24ರಂದು ನಡೆಯಲಿದೆ.

ಬೆಂಗಳೂರಿನ ವಸಂತ ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಸೌರಶಕ್ತಿ ಬಗ್ಗೆ ಜಗತ್ತಿನೆಲ್ಲೆಡೆ ಉಪಯೋಗ ಮತ್ತು ಬಳಕೆಯನ್ನು ಉತ್ತೇಜಿಸುವ ಕೆಲಸವನ್ನು ನೇವಿಲ್ಲೆ ವಿಲಿಯಮ್ಸ್ ಮಾಡುತ್ತಾ ಬಂದಿದ್ದು, ಇವರು 2020ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2021ನೇ ಸಾಲಿನ ಪ್ರಶಸ್ತಿಗೆ ಇಂಧನ ಬಳಕೆ ಕುರಿತ ಜಾಗತಿಕ ಮನ್ನಣೆ ಪಡೆದ ಪ್ರಮುಖ ತಜ್ಞೆ, ಜಾಗತಿಕ ಸಂಸ್ಥೆಗಳ ಮಾರ್ಗದರ್ಶಕಿ ರಿಚೆಂಡಾ ವಾನ್ ಲೀವೆನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇನ್ನು ಕರ್ನಾಟಕ ರಾಜ್ಯದ ಒಳ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಮೂಲ ಸೌಕರ್ಯಗಳನ್ನು ಬಲಪಡಿಸುವ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಯಾದ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಸಂಸ್ಥೆ (ಎಸ್ ವಿ ವೈಎಂ) 2022ನೇ ಸಾಲಿನ ಪ್ರಶಸ್ತಿಗೆ ಪಾತ್ರವಾಗಿದೆ.

ರಿಚೆಂಡಾ ವಾನ್ ಲೀವೆನ್

ಸಮಾರಂಭವು ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದ್ದು, ಕೌನ್ಸಿಲ್‌ ಆಫ್‌ ಎನರ್ಜಿ, ಎನ್ವಿರಾನ್ಮೆಂಟ್‌ ಆ್ಯಂಡ್ ವಾಟರ್‌ನ (ಸಿಇಇಡಬ್ಲೂ) ಸಿಇಒ ಡಾ. ಅರುಣಾಭ್‌ ಘೋಷ್ ಉದ್ಘಾಟಿಸಲಿದ್ದಾರೆ. ಹರ್ಯಾಣದ ರಿಷಿವುಡ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕೇಂದ್ರ ಮಾಜಿ ಸಚಿವ ಸುರೇಶ್ ಪ್ರಭು ಮುಖ್ಯ ಅತಿಥಿಗಳಾಗಿದ್ದಾರೆ. ಸೆಲ್ಕೋ ಇಂಡಿಯಾದ ನಿರ್ದೇಶಕಿ ಎಲೆನಾ ಕ್ಯಾಸೋಲೆರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮ್ಯಾಗ್ಸೆಸ್ಸೆ ಪ್ರಶಸ್ತಿ ಪರಸ್ಕೃತ ಹಾಗೂ ಸೆಲ್ಕೋ ಸಂಸ್ಥಾಪಕ ಡಾ. ಹರೀಶ್ ಹಂದೆ, ಸೆಲ್ಕೋ ನಿರ್ದೇಶಕ ಥಾಮಸ್ ಪುಲ್ಲೆಂಕೇವ್, ಪ್ರೊ. ಎಂ.ಎಸ್. ಶ್ರೀರಾಮ್ ಉಪಸ್ಥಿತರಿರಲಿದ್ದಾರೆ. ಎಸ್‌ವಿವೈಎಂ ಸಂಸ್ಥೆಯ ಪರವಾಗಿ ಸಂಸ್ಥಾಪಕ ಅಧ್ಯಕ್ಷರಾದ ಡಾ. ಆರ್. ಬಾಲಸುಬ್ರಮಣಿಯಮ್ ಭಾಗವಹಿಸುವರು ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏನಿದು ಸೂರ್ಯಮಿತ್ರ ಪ್ರಶಸ್ತಿ?
ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಡಾ. ಎಚ್. ಹರೀಶ್ ಹಂದೆ ಸಂಸ್ಥಾಪಕರಾಗಿರುವ ಸೆಲ್ಕೋ ಸಂಸ್ಥೆಯು ಪ್ರತಿಷ್ಠಿತ ವಾರ್ಷಿಕ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಯನ್ನು 2012ರಿಂದ ಕೊಡಮಾಡುತ್ತಾ ಬಂದಿದೆ. ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುವ ಹರಿಕಾರರು ಮತ್ತು ಗ್ರಾಮೀಣ ಜನತೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದ ಅಸಾಧಾರಣ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಏನಿದು ಸೆಲ್ಕೋ?
1995ರಲ್ಲಿ ಸ್ಥಾಪಿತವಾದ ಸೇಲ್ಕೋ ಇಂಡಿಯಾ ಸಂಸ್ಥೆಯು, ಮಾನ್ಯತೆ ಪಡೆದ ಸಾಮಾಜಿಕ ಉದ್ಯಮವಾಗಿದೆ. ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ನವೀಕರಿಸಬಹುದಾದ ಇಂಧನ ಆಧಾರಿತ ಪರಿಹಾರಗಳನ್ನು ಒದಗಿಸುವ ಮೂಲಕ ಬಡತನ ನಿರ್ಮೂಲನೆಯಲ್ಲಿ ವಿಶಿಷ್ಟ ಮಾದರಿಯ ಕೆಲಸ ಮಾಡುತ್ತಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೆಲ್ಕೋ ಇಂಡಿಯಾ, ದೇಶಾದ್ಯಂತ ಏಳು ರಾಜ್ಯಗಳಲ್ಲಿ ಇಂಧನ, ಶಿಕ್ಷಣ, ಆರೋಗ್ಯ ರಕ್ಷಣೆ, ಜೀವನೋಪಾಯ ಮತ್ತು ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.

ಈ ವಲಯಗಳ ಸುಸ್ಥಿರ ಅಭಿವೃದ್ಧಿಗೆ ಬೇಕಾದ ಹಣಕಾಸು, ಕೌಶಲ್ಯಾಭಿವೃದ್ಧಿ, ಪೂರೈಕೆ ಸರಪಳಿ ಮತ್ತು ನೀತಿ-ನಿರೂಪಣೆಗಳ ಚೌಕಟ್ಟನ್ನು ಬಲಪಡಿಸುವ ಕೆಲಸಗಳ ಮೂಲಕ ಎಲ್ಲರೂ ಬಳಸಲು ಸಾಧ್ಯವಾಗುವಂತೆ ವಿಕೇಂದ್ರೀಕೃತ ಇಂಧನ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಭಾರತವು ಹೊಂದಿರುವ, ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪುವ ಬದ್ಧತೆಯನ್ನು ಸೆಲ್ಕೋ ತೋರುತ್ತಿದೆ.

ಕಳೆದ 27 ವರ್ಷಗಳಲ್ಲಿ ಸೆಲ್ಕೋ 6 ಲಕ್ಷಕ್ಕೂ ಹೆಚ್ಚು ಮನೆಗಳು, 3000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮತ್ತು ಆರೋಗ್ಯ ಕೇಂದ್ರಗಳು ಹಾಗೂ ಜೀವನೋಪಾಯ ಕಸುಬುಗಳನ್ನು ಮಾಡುವ 5000ಕ್ಕಿಂತ ಹೆಚ್ಚು ಗ್ರಾಮೀಣ ಕುಟುಂಬಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಕಾರ್ಯವನ್ನು ಕೈಗೊಂಡಿದೆ. ಸೆಲ್ಕೋದ ಈ ಎಲ್ಲ ಸಮಾಜಮುಖಿ ಕೆಲಸಗಳಿಗಾಗಿ ಆಶ್ಡೆನ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

ಇದನ್ನು ಓದಿ| ಆಸ್ಕರ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಿರೂಪಕನಿಗೆ ಕಪಾಳಮೋಕ್ಷ: ವಿಡಿಯೋ ವೈರಲ್‌

Exit mobile version