ಬೆಂಗಳೂರು: ಹಲವು ಬೇಡಿಕೆಗಳಿಗೆ ಆಗ್ರಹಿಸಿ ಮುಷ್ಕರ ನಡೆಸಿ ಅಮಾನತಾಗಿದ್ದ ಸಾರಿಗೆ ನಿಗಮದ ನೌಕರರ ((KSRTC staff) ಮರುನೇಮಕದ ಬಗ್ಗೆ ನೀಡಲಾದ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
2021-22ರಲ್ಲಿ ಮುಷ್ಕರ ನಡೆಸಿದ್ದ ಹಲವು ಸಾರಿಗೆ ನೌಕರರನ್ನು ಅಮಾನತು ಮಾಡಲಾಗಿತ್ತು. ವೇತನ ಪರಿಷ್ಕರಣೆ, ಕೆಲಸ ಖಾಯಂಗಾಗಿ ಆಗ್ರಹಿಸಿ ಸಾರಿಗೆ ಮುಷ್ಕರ ನಡೆದಿತ್ತು. ಈ ವೇಳೆ ಹಲವರನ್ನು ಸಾರಿಗೆ ಇಲಾಖೆ ಅಮಾನತ್ತು ಮಾಡಿತ್ತು. ಇವರು ಒಟ್ಟಾಗಿ ಮರುನೇಮಕಕ್ಕೆ ಆಗ್ರಹಿಸಿ ಸಾರಿಗೆ ಸಚಿವರಿಗೆ ಮನವಿ ಪತ್ರ ನೀಡಿದ್ದರು.
ಇದೀಗ ಅಮಾನತ್ತಾದ ನೌಕರರ ಮರುನೇಮಕದ ಬಗ್ಗೆ ನೌಕರರ ಮನವಿಗೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ವಜಾಗೊಳಿಸಿರುವ ಬಗ್ಗೆ ತನಿಖೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 11ನೇ ತಾರೀಕಿನ ಬಳಿಕ ಮರುನೇಮಕದ ಬಗ್ಗೆ ನಿರ್ಧರಿಸಲಾಗುವುದು ಎಂದಿದ್ದಾರೆ.
ವಜಾಗೊಂಡ ನೌಕರರ ಮರುನೇಮಕವಾದ್ರೆ ಇನ್ನೊಂದು ಬಗೆಯ ಸಂಕಷ್ಟ ಎದುರಾಗಲಿದೆ. ಇವರ ಸ್ಥಾನದಲ್ಲಿ ಇತರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಮರುನೇಮಕದಿಂದ ಗೊಂದಲ ಉಂಟಾಗಲಿದೆ. ಒಂದು ವೇಳೆ ಮರುನೇಮಕವಾದರೆ ಸರ್ಕಾರಕ್ಕೆ ಮತ್ತಷ್ಟು ಸಂಬಳದ ಹೊರೆ ಬೀಳಲಿದೆ. ಸದ್ಯ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯಿದ್ದು, ಉಚಿತ ಸೇವೆ ಮಧ್ಯೆ ನೌಕರರ ಮರು ಎಂಟ್ರಿಯಾದ್ರೆ ನಿಗಮಕ್ಕೆ ಇನ್ನಷ್ಟು ಆರ್ಥಿಕ ಹೊರೆ ಉಂಟಾಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: KSRTC Bus Pass: ಶಾಲಾ ಮಕ್ಕಳಿಗೆ ಬಸ್ ಪಾಸ್ ಅವಧಿ ವಿಸ್ತರಣೆ; ಎಷ್ಟು ದಿನಕ್ಕೆ ಅವಕಾಶ, ಏನಿದೆ ಕಂಡೀಷನ್?