ಬೆಂಗಳೂರು: ಮೇಲ್ನೋಟಕ್ಕೆ ಅದೊಂದು ಆಕಸ್ಮಿಕ ಸಾವೆಂದು ದೂರು ದಾಖಲಾದರೂ, ಪೊಲೀಸರಿಗೆ ಮಾತ್ರ ಅನುಮಾನದ ವಾಸನೆ (Suspicious Case) ಬಡಿದಿತ್ತು. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಮನೆಯೊಂದರಲ್ಲಿ ವೆಂಕಟರಮಣ ನಾಯ್ಕ್ ಎಂಬಾತ ಬಾತ್ ರೂಮ್‌ನಲ್ಲಿ ಬಿದ್ದು ಮೃತಪಟ್ಟಿದ್ದರು. ಮೃತನ ಪತ್ನಿ ನಂದಿನಿ ಎಂಬಾಕೆ ಪತಿ ಬಾತ್‌ರೂಮ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದಳು. ಮೇಲ್ನೋಟಕ್ಕೆ ಆಕಸ್ಮಿಕ ಸಾವಿನಂತೆ ಕಂಡರೂ, ಕ್ರೈಂ ಸೀನ್ ನೋಡಿದ ಪೊಲೀಸರಿಗೆ ಮಾತ್ರ ಹಲವು ಅನುಮಾನಗಳನ್ನು ಮೂಡಿಸಿತ್ತು.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ನಂದಿನಿ ಹಾಗೂ ವೆಂಕಟರಮಣ ನಾಯ್ಕ್, ಹಲವು ವರ್ಷಗಳ ಹಿಂದೆ ಬೆಂಗಳೂರು ನಗರಕ್ಕೆ ಬಂದು ವಾಸವಾಗಿದ್ದರು. ಎಚ್‌ಎಸ್‌ಆರ್ ಲೇಔಟ್‌ನ ಮನೆಯೊಂದರಲ್ಲಿ ಮನೆಗೆಲಸ ಮಾಡಿಕೊಂಡಿದ್ದರು. ಆ ಮನೆ ಮಾಲೀಕರು ತಮ್ಮದೇ ಕಟ್ಟಡದ ಕೆಳ ಭಾಗದಲ್ಲಿ ಮನೆಯನ್ನು ಬಿಟ್ಟುಕೊಟ್ಟಿದ್ದರು. ವೆಂಕಟರಮಣ ಬೆಳಗ್ಗೆ ಕ್ರೋಮಾ ಶೋ ರೂಂನಲ್ಲಿ ಕೆಲಸ ಮಾಡಿ ನಂತರ ಪತ್ನಿ ಜತೆ ಮನೆಯ ಕೆಲಸವನ್ನು ನೋಡಿಕೊಳ್ಳುತ್ತಿದ್ದ. ಆದರೆ ನಿನ್ನೆ ಬುಧವಾರ (ಜ.10) ಏಕಾಏಕಿ ಮನೆ ಬಾತ್‌ರೂಮ್‌ನಲ್ಲಿ ಬಿದ್ದು ಮೃತಪಟ್ಟಿದ್ದ.
ಇನ್ನು ಘಟನೆ ನಡೆದ ಬಳಿಕ ಮೃತನ ಪತ್ನಿ ನಂದಿನಿ 112 ಕಂಟ್ರೋಲ್ ರೂಂಗೆ ಕರೆ ಮಾಡಿ ತನ್ನ ಪತಿ ಬಾತ್‌ರೂಮ್‌ನಲ್ಲಿ ಕಾಲು ಜಾರಿ ಬಿದ್ದಿದ್ದಾನೆಂಬ ವಿಚಾರ ಮುಟ್ಟಿಸಿದ್ದಳು. ಪೊಲೀಸರು ಬಂದು ಪರಿಶೀಲನೆ ನಡಸಿದಾಗ ಆಕೆ ಹೇಳಿದಂತೆ ಜಾರಿ ಬಿದ್ದ ರೀತಿಯಲ್ಲೇ ಶವವಿತ್ತು.
ಇದನ್ನೂ ಓದಿ: Murder Case : ಒಂಟಿ ಮಹಿಳೆ ಕೊಲೆ ಕೇಸ್; ಹಣದಾಸೆಗೆ ಉಂಡ ಮನೆಗೆ ಕನ್ನ ಹಾಕಿದ ಕಿರಾತಕ ಅರೆಸ್ಟ್
ಮೇಲ್ನೋಟಕ್ಕೆ ಇದೊಂದು ಆಕಸ್ಮಿಕ ಸಾವು ಎಂದು ಅನಿಸಿದರೂ, ಮನೆಯ ವಾತಾವರಣ ಹಾಗೂ ನಂದಿನಿಯ ನಡವಳಿಕೆಯು ಪೊಲೀಸರಿಗೆ ಸಾಕಷ್ಟು ಅನುಮಾನ ಮೂಡಿಸಿದೆ. ನಂದಿನಿ ನಂಬರ್‌ಗೆ ಒಂದೇ ನಂಬರ್‌ನಿಂದ ಹಲವು ಬಾರಿ ಕರೆಗಳ ವಿನಿಮಯವಾಗಿದೆ. ಅದೂ ಅಲ್ಲದೆ ಬಾತ್‌ರೂಮ್‌ನಲ್ಲಿ ಕಾಲು ಜಾರಿ ಬಿದ್ದು ಒಂದೇ ಬಾರಿ ಸಾಯುವ ವಯಸ್ಸು ಕೂಡ ವೆಂಕಟರಮಣದಲ್ಲ. ಹೀಗಾಗಿ ಪೊಲೀಸ್ ಬ್ರೇನ್ ಕೆಲಸ ಮಾಡಿದ್ದು, ಆಗಾಗ ಕರೆ ಬರುತ್ತಿದ್ದ ವ್ಯಕ್ತಿ ನಂಬರ್ ಕೂಡ ಅಂದೇ ಸ್ವಿಚ್ಡ್ ಆಫ್ ಆಗಿದೆ. ಇದೊಂದು ಅಕ್ರಮ ಸಂಬಂಧಕ್ಕೆ ನಡೆದ ಕೊಲೆ ಎಂದು ಶಂಕಿಸಿ ಪೊಲೀಸರು ಈಗಾಗಲೇ ಆಗಂತುಕನಿಗಾಗಿ ಹುಡುಕಾಟ ನಡೆಸಿದ್ದಾರೆ.
ಇನ್ನು ಕೊಲೆಯೋ ಅಥವಾ ಆಕಸ್ಮಿಕ ಸಾವುವೋ ಎಂದು ತಿಳಿಯಲು ಶವದ ಮರಣೋತ್ತರ ಪರೀಕ್ಷೆ ನಡೆಯಬೇಕಿದೆ. ಪೊಲೀಸರ ವಿಚಾರಣೆ ವೇಳೆ ನಂದಿನಿ ಕೂಡ ಗಂಟೆಗೊಂದು ಹೇಳಿಕೆ ನೀಡುತ್ತಿರುವುದು ಅನುಮಾನ ಮೂಡಿಸಿದೆ. ಸದ್ಯ ಮೃತನ ತಂದೆಯ ಬಳಿ ದೂರು ಪಡೆದು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ