ರಾಯಚೂರು: ರಾಯಚೂರಲ್ಲಿ ಮತ್ತೊಂದು ಅನುಮಾನಾಸ್ಪದ ಸಾವು ಪ್ರಕರಣವು ಬೆಳಕಿಗೆ ಬಂದಿದೆ. ಇಲ್ಲಿನ ತಿಮ್ಮಾಪುರ ಪೇಟೆಯಲ್ಲಿ ಯುವಕನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ರಮೇಶ್ (19) ಮೃತ ಯುವಕ.
ಬುಧವಾರ ಸಂಜೆ ಏರಿಯಾದಲ್ಲಿ ಗಣೇಶ ಮೂರ್ತಿ ಬಳಿ ಓಡಾಡಿಕೊಂಡಿದ್ದ. ಬಳಿಕ ರಾತ್ರಿ ರಮೇಶ್ನನ್ನು ಸ್ನೇಹಿತನೊಬ್ಬ ಕರೆದೊಯ್ದಿದ್ದ ಎನ್ನಲಾಗಿದೆ. ಉಮೇಶ್ ಎಂಬ ಮತ್ತೊಬ್ಬ ಸ್ನೇಹಿತನ ನಿರ್ಮಾಣ ಹಂತದ ಕಟ್ಟಡದ ಮೇಲೆ ರಮೇಶ್ ಮಲಗಿದ್ದ.
ಆದರೆ ಗುರುವಾರ ಬೆಳಗಿನ ಜಾವ ಎರಡನೇ ಅಂತಸ್ತಿನಿಂದ ಕೆಳಗಿರುವ ಟಿನ್ ಶೆಡ್ ಮನೆ ಮೇಲೆ ಹೆಣವಾಗಿ ಪತ್ತೆಯಾಗಿದ್ದಾನೆ. ಈ ಬಗ್ಗೆ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಜನರು ಜಮಾಯಿಸಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ರಮೇಶ್ನ ಜತೆಗೆ ರಾತ್ರಿಯಿದ್ದ ಸ್ನೇಹಿತರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದು ಆಕಸ್ಮಿಕ ಸಾವುವೋ ಅಥವಾ ಕೊಲೆಯೊ ಎಂಬುದರ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ