Site icon Vistara News

Suttur Jatre: ನಡೆ-ನುಡಿಯಿಂದ ಮಾತ್ರ ಮನುಷ್ಯ ದೊಡ್ಡವನಾಗಲು ಸಾಧ್ಯ: ಸಿಎಂ ಬಸವರಾಜ ಬೊಮ್ಮಾಯಿ

Suttur Jatre

ಮೈಸೂರು: ನಾಗರಿಕತೆ ಹಾಗೂ ಸಂಸ್ಕೃತಿ ಬಗ್ಗೆ ಬಹಳ ಜನರಿಗೆ ಗೊತ್ತಿಲ್ಲ. ನಮ್ಮ ಹತ್ತಿರ ಇರುವುದು ನಾಗರಿಕತೆ. ನಾನು ಏನು ಆಗಿದ್ದೇನೆ ಎಂಬುವುದು ಸಂಸ್ಕೃತಿ. ಮನುಷ್ಯ ಆಸ್ತಿ, ಅಂತಸ್ತಿನಿಂದ ದೊಡ್ಡವನಾಗುವುದಿಲ್ಲ. ನಡೆ ನುಡಿಯಿಂದ ಮಾತ್ರ ದೊಡ್ಡವನಾಗಲು ಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ (Suttur Jatre) ಆಯೋಜಿಸಿದ್ದ ಸುತ್ತೂರು ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದದರು.

ವಿರೋಧ ಪಕ್ಷದ ನಾಯಕರು ಅಸಂಬದ್ಧವಾಗಿ ಮಾತನಾಡಿದ್ದಾರೆ. ಆದರೆ, ನಾನು ಅವರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದಿದ್ದೇನೆ. ಅವರ ಮಾತು ದೊಡ್ಡವರ ಸಣ್ಣತನ. ಸ್ಥಾನದಿಂದ ಗೌರವ ಬರುವುದು ಬೇರೆ. ಆದರೆ, ಆ ಸ್ಥಾನದ ಗೌರವವನ್ನು ನಾವು ಉಳಿಸಿಕೊಂಡು ಹೋಗಬೇಕು. ಮುಂದಿನ ಪೀಳಿಗೆಗೆ ಏನು ಉಳಿಸಿಕೊಂಡು ಹೋಗಬೇಕು ಎಂಬುವುದು ಗೊತ್ತಾಗಬೇಕು. ಯಾರು ತಮ್ಮನ್ನು ಪ್ರಭಾವಿಗಳು ಎಂದುಕೊಂಡಿದ್ದಾರೆ, ಅವರು ಇನ್ನೊಬ್ಬರಿಗೆ ನೋವಾಗದಂತೆ ಮಾತನಾಡಬೇಕು. ಮನುಷ್ಯ ಮಾತಿನಿಂದ ದೊಡ್ಡವನಾಗಬೇಕು ಎಂದು ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಜಾತ್ರೆ ಎಂದರೆ ನಾವೆಲ್ಲರೂ ಸೇರುವಂತಹ ಸುಸಂದರ್ಭ. ಇಲ್ಲಿ ಜಾತಿ, ಮತ, ಪಂಥದ ಭೇದಭಾವವಿಲ್ಲ. ಜಾತ್ರೆಯು ಒಂದು ರೀತಿಯಲ್ಲಿ ನಮ್ಮನೆಲ್ಲ ಸಮಾನವಾಗಿ ರೂಢಿಸುವ ಉತ್ಸವವಾಗಿದೆ. ನಮ್ಮ ಹಿರಿಯರು ಉದ್ದೇಶಪೂರ್ವಕವಾಗಿ ಯೋಜಿಸಿ ಕೆಲವು ಆಚರಣೆಗಳನ್ನು ತಂದಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಂಕಷ್ಟದಲ್ಲೂ ಜನ ಶಾಂತಿ ಕದಡಲಿಲ್ಲ ಎಂದ ಬಿ.ಎಲ್‌. ಸಂತೋಷ್‌

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮಾತನಾಡಿ, ನಮ್ಮ ದೇಶದಲ್ಲಿ ಕೆಲವರು ಎಡಬಿಡಂಗಿಗಳಿದ್ದಾರೆ. ಅವರಿಗೆ ನಾವು ಏನೇ ಮಾಡಿದರೂ ತಪ್ಪು. ಬರೀ ತಪ್ಪು ಹುಡುಕುವುದೇ ಅವರ ಕೆಲಸ. ಕೋವಿಡ್ ಇದ್ದಾಗ ಜನ ಸರ್ಕಾರದ ಬಗ್ಗೆ ಬೇಸರ ಪಟ್ಟುಕೊಳ್ಳಲಿಲ್ಲ. ಪರಿಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಜನ ಕಷ್ಟಗಳನ್ನು ಅನುಭವಿಸಿದರೂ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡಲಿಲ್ಲ. ಇದಕ್ಕೆ ಕಾರಣ ಈ ದೇಶದಲ್ಲಿನ ಸುತ್ತೂರು ಶ್ರೀ ಕ್ಷೇತ್ರಗಳಂತಹ ಪುಣ್ಯ ಸ್ಥಾನಗಳು ಎಂದು ಹೇಳಿದರು.

ಈ ಪುಣ್ಯ ಸ್ಥಾನಗಳ ಫಲವಾಗಿ ಈ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲಿಲ್ಲ. ಬೇರೆ ದೇಶದಲ್ಲಿ ಆಗಿದ್ದರೆ ಜನ ಬೀದಿ ಬೀದಿಗೆ ಬೆಂಕಿ ಹಚ್ಚುತ್ತಿದ್ದರು. ಸತ್ಯ ಸುಳ್ಳಿನ ಅಂತರ ಬಹಳ ಕಡಮೆಯಾಗಿದೆ. ಈ ಅಂತರ ಹೆಚ್ಚಾಗಬೇಕಿದೆ. ಸಮಾಜದ ಆರೋಗ್ಯ ದೃಷ್ಟಿಯಿಂದ ಸತ್ಯ – ಸುಳ್ಳಿನ ಅಂತರ ಹೆಚ್ಚಾಗಬೇಕು. ಒಬ್ಬನೇ ಮನುಷ್ಯ ಕಾಲಕ್ಕೆ ತಕ್ಕಂತೆ ಒಳ್ಳೆಯದು ಮಾಡುತ್ತಾನೆ, ಕೆಟ್ಟದ್ದನ್ನೂ ಮಾಡುತ್ತಾನೆ. ಮನುಷ್ಯನೊಳಗೆ ಒಳ್ಳೆಯವನು, ಕೆಟ್ಟವನೂ ಇದ್ದಾನೆ. ಸುತ್ತೂರಿನಂತಹ ಧಾರ್ಮಿಕ ಕ್ಷೇತ್ರಗಳ ಮೂಲಕ ಮಾತ್ರ ಮನುಷ್ಯನ ಈ ವರ್ತನೆಗಳು ಬದಲಾಗುತ್ತವೆ ಎಂದು ಹೇಳಿದರು.

ದೇಸಿ ಆಟಗಳಿಗೆ ವಿಶೇಷ ಗೌರವ: ಹರಿಪ್ರಕಾಶ್‌ ಕೋಣೆಮನೆ

ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರು ಮಾತನಾಡಿ, ದೇಶದ ಇತಿಹಾಸ, ನಮ್ಮ ಸಂಸ್ಕೃತಿಯಲ್ಲಿ ದೇಸಿ ಆಟಗಳಿಗೆ ವಿಶೇಷ ಗೌರವವಿದೆ. ಉದಾಹರಣೆಗೆ ಚದುರಂಗ ಆಟ ಯುದ್ಧಕ್ಕೆ ಸಮಾನವಾದ ಸ್ಪರ್ಧೆ. ಯುದ್ಧವೆಂದರೆ ಕಾಲಾಳು, ರಥ ಪಡೆ, ಗಜಪಡೆ ಹಾಗೂ ಅಶ್ವಪಡೆ ಇರುತ್ತದೆ. ಇವೆಲ್ಲವೂ ಸೇರಿ ಚದುರಂಗವಾಗುತ್ತದೆ. ಇದರಲ್ಲಿ ಸೈನ್ಯದಲ್ಲಿ ಎಷ್ಟು ಜನ ಇರುತ್ತಾರೆ, ಯಾರು ಸೋತರು, ಯಾರು ಗೆದ್ದರು ಎಂಬುವುದಕ್ಕಿಂತ ಬುದ್ಧಿಮತ್ತೆಗೆ ವಿಶೇಷ ಸ್ಥಾನವಿದೆ. ಹಲವು ಶತಮಾನಗಳ ಹಿಂದೆ ಭಾರತವು ಜಗತ್ತಿಗೆ ನೀಡಿದ ಕೊಡುಗೆ ಚದುರಂಗವಾಗಿದೆ ಎಂದು ಹೇಳಿದರು.

ಎರಡನೇಯದಾಗಿ ಕಬಡ್ಡಿ ಆಟಕ್ಕೆ ಇತ್ತೀಚೆಗೆ ಜನಪ್ರಿಯತೆ ಹೆಚ್ಚಾಗಿದೆ. ಹೀಗಾಗಿ ಕಬಡ್ಡಿ ಹಾಗೂ ಹಾಕಿ ಕ್ರೀಡೆಗೆ ವಿಶೇಷ ಮೆರುಗು ಬರುತ್ತಿದೆ, ಇದು ಸಂತಸದ ವಿಷಯವಾಗಿದೆ. ಆದರೆ, ಶತಮಾನಗಳ ಹಿಂದೆ ಕಬಡ್ಡಿ ಆಟಕ್ಕೆ ವಿಶೇಷವಾದ ಸ್ಥಾನವಿತ್ತು. ಶಿವಾಜಿ ಮಹಾರಾಜರು, ಮೊಘಲರ ವಿರುದ್ಧ ಗೆದ್ದದ್ದನ್ನು ನಾವು ನೋಡಬಹುದು. ಗುಡ್ಡಗಾಡಿನ ಮಾವಳಿ ಜನಾಂಗವನ್ನು ಬಳಸಿಕೊಂಡು ಯದ್ಧದಲ್ಲಿ ಅವರು ಗೆದ್ದರು. ಆದರೆ, ಯುದ್ಧಕ್ಕೂ ಮುನ್ನ ಅವರು, ಕಬಡ್ಡಿ ಆಟದ ಮೂಲಕ ಸೈನ್ಯವನ್ನು ಅಣಿಗೊಳಿಸುತ್ತಾರೆ. ಇದು ಇತಿಹಾಸದಲ್ಲಿ ನಮ್ಮ ದೇಸಿ ಆಟಗಳಿಗೆ ಇರುವ ಮಹತ್ವವನ್ನು ತಿಳಿಸುತ್ತದೆ ಎಂದು ಹೇಳಿದರು.

ಕ್ರೀಡೆಗಳಿಗೆ ಸಾಂಸ್ಕೃತಿಕ, ಐತಿಹಾಸಿಕ ಸಂಬಂಧವಿದೆ ಎಂಬುವುದನ್ನು ಸ್ವಾಮಿ ವಿವೇಕಾನಂದರ ಮಾತುಗಳಲ್ಲಿ ಕೇಳಬಹುದು. ನಿಮಗೆ ಭಗವದ್ಗೀತೆ, ಮಹಾಭಾರತ ಅರ್ಥವಾಗಬೇಕಾದರೆ ನೀವು ಫುಟ್‌ಬಾಲ್‌ ಆಟವಾಡಬೇಕು ಎಂದವರು ಹೇಳಿದ್ದರು. ಯಾಕೆ ಈ ಆಟ ಆಡಬೇಕು ಎಂದರೆ, ನಿಮಗೆ ಶಕ್ತಿಯ ಆವಾಹನೆಯಾಗಬೇಕು. ನಾವು ಯುದ್ಧದಲ್ಲಿ ಗೆಲ್ಲಬೇಕೆಂದರೆ ಶಕ್ತಿಯ ಆವಾಹನೆಯಾಗಬೇಕು, ಹೀಗಾಗಿ ಫುಟ್‌ಬಾಲ್‌ ಆಡಲು ಅವರು ಸೂಚಿಸಿದ್ದರು. ಇದರಿಂದ ಹಾಕಿ ಹಾಗೂ ಫುಟ್‌ಬಾಲ್‌ ಆಟಕ್ಕೆ ಜಾಗತಿಕ ಮನ್ನಣೆ ಸಿಗುತ್ತಿರುವುದನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.

ಕ್ರೀಡಾ ಮನೋಭಾವ ಬೆಳೆಯಬೇಕು ಎಂದು ನಾವು ಹೇಳುತ್ತೇವೆ. ಆದರೆ, ಕ್ರೀಡೆಗಳೇ ಇಲ್ಲದಿದ್ದರೆ ಕ್ರೀಡಾ ಮನೋಭಾವ ಬೆಳೆಯುವುದು ಹೇಗೆ? ಈಗಿನ ಕ್ರಿಕೆಟ್‌ ಅಥವಾ ಬೇರೆ ಆಟಗಳಲ್ಲಿ ಕ್ರೀಡಾ ಮನೋಭಾವ ಇರುತ್ತದಾ? ಎಲ್ಲರಿಗೂ ಭಾಗವಹಿಸಲು ಅವಕಾಶವಿರುತ್ತದಾ? ಅದರಲ್ಲಿ ಶಕ್ತಿಯ ಆವಾಹನೆಗೆ ಅವಕಾಶವಿರುತ್ತದಾ ಎಂಬುದನ್ನು ನೋಡಬೇಕು. ಈ ನಿಟ್ಟಿನಲ್ಲಿ ನೋಡಿದರೆ ನಮ್ಮ ದೇಸಿ ಆಟಗಳಲ್ಲಿ ವೈಯಕ್ತಿಕ ಶಕ್ತಿ ಪ್ರದರ್ಶನಕ್ಕೆ ಅವಕಾಶವಿದೆ. ಈ ಆಟಗಳನ್ನು ನಾವು ಮರೆತರೆ ನಮ್ಮ ತನವನ್ನು ನಾವು ಮರೆತಂತೆ. ಈ ಕಾರಣಕ್ಕಾಗಿ ನಮ್ಮ ಜನಪದ, ಸಂಸ್ಕೃತಿ ಹಾಗೂ ಭಾಷೆ, ಜನ ಜೀವನ ಪದ್ಧತಿ ಉಳಿಯಬೇಕು ಎಂದು ಅಪೇಕ್ಷಿಸುತ್ತೇವೆ. ಈ ನಿಟ್ಟಿನಲ್ಲಿ ಸುತ್ತೂರು ಮಠ ದೇಸಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಅಭಿನಂದಿಸುತ್ತೇನೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ, ಮಾಜಿ ಸಚಿವ ಈಶ್ವರ ಖಂಡ್ರೆ, ಶಾಸಕ ಅನಿಲ್ ಚಿಕ್ಕಮಾದು, ಸಚಿವರಾದ ಆರ್.ಅಶೋಕ್, ಡಾ.ಕೆ.ಸುಧಾಕರ್, ಬಿ.ಸಿ.ನಾಗೇಶ್, ಶಾಸಕರಾದ ಸಿ.ಎಸ್.ನಿರಂಜನ್ ಕುಮಾರ್, ಹರ್ಷವರ್ಧನ್ ಸೇರಿ ಹಲವರು ಇದ್ದರು.

ಇದನ್ನೂ ಓದಿ | ಬೇರೆ ದೇಶದ ಜನರಾಗಿದ್ದರೆ ಕಲ್ಲು ಹೊಡೆಯುತ್ತ, ಬೆಂಕಿ ಹಚ್ಚುತ್ತಾ ನಡೆಯುತ್ತಿದ್ದರು : ಭಾರತದ ಜನರ ಕುರಿತು ಬಿ.ಎಲ್‌. ಸಂತೋಷ್‌ ಪ್ರಶಂಸೆ

Exit mobile version