ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Modi In Bengaluru) ಅವರನ್ನು ಆಹ್ವಾನಿಸಿರುವ ರಾಜ್ಯ ಬಿಜೆಪಿಯ ನಾಯಕರು, ನಾಡಿನ ಸಾಕ್ಷಿ ಪ್ರಜ್ಞೆ, ಮಾಜಿ ಪ್ರಧಾನಿ ದೇವೇಗೌಡರನ್ನು ಆಹ್ವಾನಿಸದೆ ರಾಜ್ಯದ ಜನರಿಗೆ ಅವಮಾನ ಮಾಡಿದ್ದಾರೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ತುಘಲಕ್ ಸರ್ಕಾರ. ಕೆಂಪೇಗೌಡರು ಬೆಂಗಳೂರು ಕಟ್ಟಿದ ಧೀಮಂತರಾದರೆ, ದೇವೇಗೌಡರು ಅಖಂಡ ಭಾರತದ ಪ್ರಧಾನಿಯಾಗಿ ಕನ್ನಡಿಗರ ಹಿರಿಮೆ, ಕರ್ನಾಟಕದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದವರು. ಅಂತಹವರನ್ನು ಕರೆಯದೆ ಈ ಸರ್ಕಾರ ಸಣ್ಣತನ ತೋರಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ | Modi in Bengaluru | ನಿರ್ಮಲಾನಂದನಾಥ ಶ್ರೀಗಳ ಹೆಗಲ ಮೇಲೆ ಕೈ ಇಟ್ಟು ಫೋಟೊಗೆ ಪೋಸ್ ಕೊಟ್ಟ ಅಶೋಕ್!
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿರುವುದು ಸರ್ಕಾರಿ ಕಾರ್ಯಕ್ರಮವಾಗಿದೆ. ಸರ್ಕಾರದ ಬೊಕ್ಕಸದಿಂದ ಜನರ ತೆರಿಗೆ ಹಣ ಖರ್ಚು ಮಾಡಿ ಪ್ರತಿಮೆ ನಿರ್ಮಿಸಿ ಕಾರ್ಯಕ್ರಮ ಮಾಡಲಾಗಿದೆಯೇ ಹೊರತು ಯಾರಪ್ಪನ ವೈಯಕ್ತಿಕ ಹಣ ಖರ್ಚು ಮಾಡಿಲ್ಲ ಎನ್ನುವುದನ್ನು ಅರಿತುಕೊಳ್ಳಲಿ ಎಂದಿದ್ದಾರೆ.
ಒಂದು ದೊಡ್ಡ ಕಾರ್ಯಕ್ರಮ ನಡೆಯುವಾಗ ನಾಡಿನ ಮುತ್ಸದ್ಧಿ ಹಿರಿಯರನ್ನು ಪಕ್ಷಭೇದ ಮರೆತು ಆಹ್ವಾನಿಸುವ ಸಂಪ್ರದಾಯ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪ್ರತಿಪಕ್ಷ ನಾಯಕರು, ಶಾಸಕರನ್ನು ಕರೆಯುವ ಪರಿಪಾಠ ಇದೆ. ಆದರೆ, ಈ ಸರ್ಕಾರ ಮಾಜಿ ಪ್ರಧಾನಿ ದೇವೇಗೌಡರನ್ನು ಕರೆದಿಲ್ಲ. ಕಾಂಗ್ರೆಸ್ ನಾಯಕರನ್ನೂ ಕರೆದಿಲ್ಲ. ಇದೊಂದು ಮತಿಹೀನ ಸರ್ಕಾರ ಎಂದು ಗದಾ ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ | Modi In Bengaluru | ರಾಜ್ಯ ಸರ್ಕಾರ ಎಚ್.ಡಿ. ದೇವೇಗೌಡರಿಗೆ ಅವಮಾನ ಮಾಡಿದೆ ಎಂದ ಜೆಡಿಎಸ್, ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆ