ಬೆಂಗಳೂರು: ನಾಡಿನ ಅಪರೂಪದ ಕನ್ನಡ ಸೇನಾನಿ, ಕನ್ನಡಕ್ಕೆ ಸದಾ ಮಿಡಿವ ಚೈತನ್ಯದ ಚಿಲುಮೆ, ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡ (TA Narayana Gowda) ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ʼಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿʼಗೆ ಆಯ್ಕೆಯಾಗಿದ್ದಾರೆ. ಇವರಿಗೆ ಡಿಸೆಂಬರ್ 26 ರಂದು ಸಂಜೆ 5.30ಕ್ಕೆ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ’ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕನ್ನಡ ನೆಲ, ಜಲ, ಕನ್ನಡಿಗರ ನೆಮ್ಮದಿಯ ಬದುಕಿಗಾಗಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಟಿ.ಎ. ನಾರಾಯಣ ಗೌಡರು ಇದುವರೆಗೂ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಯಾವುದೇ ಪುರಸ್ಕಾರವನ್ನೂ ಸ್ವೀಕರಿಸಿಲ್ಲ. ಆದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನ ಮತ್ತು ಕುವೆಂಪು ಅವರ ಸಾಹಿತ್ಯ, ವರನಟ ರಾಜಕುಮಾರ್ ಅವರ ಸಿನಿಮಾಗಳ ಪ್ರೇರಣೆಯಿಂದ ಹೋರಾಟಕ್ಕೆ ಬಂದ ಹಿನ್ನೆಲೆಯಿಂದ ತಮ್ಮ ಜೀವನದ ಮೊಟ್ಟ ಮೊದಲ ಪ್ರಶಸ್ತಿಯಾಗಿ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರು ವಹಿಸಲಿದ್ದು, ಡಾ.ಹಂಪನಾಗರಾಜಯ್ಯನವರು ಉದ್ಘಾಟಿಸಲಿದ್ದಾರೆ. ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಹಿರಿಯ ಸಾಹಿತಿಗಳಾದ ಡಾ. ದೊಡ್ಡರಂಗೇಗೌಡರು ಅಭಿನಂದನಾ ನುಡಿಗಳನ್ನು ಆಡಲಿದ್ದಾರೆ. ಕೋಡಿ ಮಠದ ಶ್ರೀಗಳಾದ ಶ್ರೀ ಶಿವಾನಂದ ಶಿವಯೋಗಿ ಸ್ವಾಮೀಜಿ ಮತ್ತು ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಜನಪದ ಸೇವಾಟ್ರಸ್ಟ್ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಕಸಾಪ ಹಮ್ಮಿಕೊಂಡಿದೆ.
ಇದನ್ನೂ ಓದಿ | Raja Marga Column : ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ; ಎಲ್ಲ 900 ಹಾಡು ಸೂಪರ್ಹಿಟ್
ಕಾರ್ಯಕ್ರಮಕ್ಕೂ ಮುನ್ನಾ ಸಂಜೆ 4:30ಕ್ಕೆ ಖ್ಯಾತ ಗಾಯಕರಾದ ಡಾ.ಶಮಿತಾ ಮಲ್ನಾಡ್ ಮತ್ತು ಆನಂದ ಮಾದಲಗೆರೆಯವರ ತಂಡದಿಂದ ಗೀತ ಗಾಯನ ಕಾರ್ಯಕ್ರಮವಿದ್ದು, ದಿವ್ಯಾ ಆಲೂರು ಜೊತೆಯಲ್ಲಿ ಟಿ. ತಿಮ್ಮೇಶ್ ಈ ಕಾರ್ಯಕ್ರಮದ ನಿರೂಪಣೆಯನ್ನು ಮಾಡಲಿದ್ದಾರೆ. ಕಸಾಪ ಗೌರವ ಕಾರ್ಯದರ್ಶಿಗಳಾದ ನೇ ಭ ರಾಮಲಿಂಗಶೆಟ್ಟಿ ಮತ್ತು ಡಾ ಪದ್ಮಿನಿ ನಾಗರಾಜು ಹಾಗೂ ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ