Site icon Vistara News

ತಹಸೀಲ್ದಾರ್, ಎಸಿ, ಡಿಸಿ ಕೋರ್ಟ್‌ ತಕರಾರು ಪ್ರಕರಣ ಗಡುವಿನೊಳಗೆ ಇತ್ಯರ್ಥಗೊಳಿಸಿ: ಸಚಿವ ಕೃಷ್ಣ ಬೈರೇಗೌಡ

Minister krishna byregowda

ಬೆಂಗಳೂರು: ತಹಸೀಲ್ದಾರ್, ಎಸಿ ಹಾಗೂ ಡಿಸಿ ಮಟ್ಟದ ನ್ಯಾಯಾಲಯಗಳಲ್ಲಿ 6 ತಿಂಗಳಿನಿಂದ 5 ವರ್ಷಗಳವರೆಗೆ ನೂರಾರು ತಕರಾರು ಪ್ರಕರಣಗಳು ಬಾಕಿ ಉಳಿದಿದ್ದು, ಈ ಎಲ್ಲ ಪ್ರಕರಣಗಳನ್ನು 4 ತಿಂಗಳ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಜನರಿಗೆ ಒಳಿತು ಕೆಡುಕು ಎರಡನ್ನೂ ಮಾಡುವ ಶಕ್ತಿ ಕಂದಾಯ ಇಲಾಖೆಗೆ ಇದೆ. ಆದರೆ, ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಲಿದೆ ಎಂಬ ಭರವಸೆಯಲ್ಲಿ ಜನ ನಮಗೆ ಮತ ನೀಡಿದ್ದು, ಜನಸ್ನೇಹಿ ಆಡಳಿತ ನೀಡುವುದು ನಮ್ಮ ಆದ್ಯತೆಯಾಗಲಿ ಎಂದು ಕಿವಿಮಾತು ಹೇಳಿದರು.

ಬೆಂಗಳೂರು ಪ್ರದೇಶಿಕ ವಿಭಾಗದ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ 6 ತಿಂಗಳಿಂದ 5 ವರ್ಷಗಳವರೆಗಿನ ಒಟ್ಟು 6,859 ತಕರಾರು ಪ್ರಕರಣಗಳು ಈವರೆಗೆ ಇತ್ಯರ್ಥವಾಗದೆ ಬಾಕಿ ಉಳಿದಿವೆ. ಇದರಿಂದಾಗಿ ಸಾರ್ವಜನಿಕರು ಪ್ರತಿದಿನ ತಹಸೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ. ಹೀಗಾಗಿ ಬಾಕಿ ಉಳಿದಿರುವ ಪ್ರಕರಣಗಳಲ್ಲಿ 4000 ಪ್ರಕರಣಗಳನ್ನು ಮುಂದಿನ 4 ತಿಂಗಳ ಒಳಗಾಗಿ ಇತ್ಯರ್ಥಗೊಳಿಸಬೇಕು ಎಂದು ಸೂಚಿಸಿದರು.

ಇದನ್ನೂ ಓದಿ | Ration Card : ಹೊಸ ರೇಷನ್ ಕಾರ್ಡ್ ಸದ್ಯಕ್ಕಿಲ್ಲ; ಗೃಹಲಕ್ಷ್ಮಿ, ಅನ್ನಭಾಗ್ಯದ ಕನಸು ನನಸು ದೂರ!

ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳ ವಿರುದ್ಧ ಅಸಮಾಧಾನ

ಬೆಂಗಳೂರು ಪ್ರಾದೇಶಿಕ ವಿಭಾಗದ ಉಪ ವಿಭಾಗಾಧಿಕಾರಿ (ಎಸಿ) ಹಾಗೂ ಜಿಲ್ಲಾಧಿಕಾರಿ (ಡಿಸಿ) ನ್ಯಾಯಾಲಯಗಳಲ್ಲೂ ಸಾಕಷ್ಟು ತಕರಾರು ಪ್ರಕರಣಗಳು ಬಾಕಿ ಉಳಿದಿವೆ ಎಂದು ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತೀವ್ರ ಅಸಮಾಧಾನ ಹೊರಹಾಕಿದರು.

ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳ ಪೈಕಿ ದೊಡ್ಡಬಳ್ಳಾಪುರ 5683, ಬೆಂಗಳೂರು ದಕ್ಷಿಣ 6129, ಬೆಂಗಳೂರು ಉತ್ತರ 6035, ಚಿಕ್ಕಬಳ್ಳಾಪುರ 3014, ಚಿತ್ರದುರ್ಗ 1374, ದಾವಣಗೆರೆ 152, ಹೊನ್ನಾಳಿ 456, ಕೋಲಾರ 5112, ರಾಮಮನಗರ 4210, ಶಿವಮೊಗ್ಗ 613, ಸಾಗರ 411, ತುಮಕೂರು 7354, ಮಧುಗಿರಿ 3167 ಮತ್ತು ತಿಪಟೂರಿನ 742 ಪ್ರಕರಣಗಳು ಸೇರಿದಂತೆ ಒಟ್ಟಾರೆಯಾಗಿ 45,482 ಪ್ರಕರಣಗಳು ಬಾಕಿ ಇವೆ.

ಜಿಲ್ಲಾಧಿಕಾರಿ ನ್ಯಾಯಾಲಯಗಳ ಪೈಕಿ ಬೆಂಗಳೂರು ಗ್ರಾಮಾಂತರ 1384, ಬೆಂಗಳೂರು ನಗರ 4974, ಚಿಕ್ಕಬಳ್ಳಾಪುರ 429, ಚಿತ್ರದುರ್ಗ 1711, ದಾವಣಗೆರೆ 81, ಕೋಲಾರ 102, ರಾಮನಗರ 501, ಶಿವಮೊಗ್ಗ 73, ತುಮಕೂರಿನಲ್ಲಿ 697 ಪ್ರಕರಣಗಳು ಬಾಕಿ ಇವೆ. ಇವುಗಳನ್ನು ಶೀಘ್ರ ಇತ್ಯರ್ಥ ಮಾಡಬೇಕು ಎಂದು ಸಚಿವರು ಹೇಳಿದರು.

ಉಪ ವಿಭಾಗಾಧಿಕಾರಿಗಳು ತಮ್ಮ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ 6 ತಿಂಗಳಿಗಿಂತ ಹಳೆಯ ಎಲ್ಲಾ ಪ್ರಕರಣಗಳೂ ಸೇರಿದಂತೆ ಉಳಿದಿರುವ 12000 ಪ್ರಕರಣಗಳನ್ನೂ ಮುಂದಿನ 4 ತಿಂಗಳಲ್ಲಿ ವಿಲೇವಾರಿ ಮಾಡಬೇಕು. ಜಿಲ್ಲಾಧಿಕಾರಿಗಳೂ ಸಹ ತಮ್ಮ ನ್ಯಾಯಾಲಯದಲ್ಲಿರುವ 6 ತಿಂಗಳಿಗಿಂತ ಹಳೆಯ ಎಲ್ಲಾ ಪ್ರಕರಣಗಳನ್ನೂ ಮುಂದಿನ 3 ತಿಂಗಳಲ್ಲಿ ವಿಲೇವಾರಿ ಮಾಡಬೇಕು ಎಂದು ಕಾಲಮಿತಿ ನೀಡಿದರು.

ಸೆಪ್ಟೆಂಬರ್ 10ನೇ ತಾರಿಖಿನ ಒಳಗಾಗಿ ಮತ್ತೊಂದು ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಈ ಸಭೆಯಲ್ಲಿ ತಹಶೀಲ್ದಾರ್, ಎಸಿ-ಡಿಸಿ ನ್ಯಾಯಾಲಯಗಳಲ್ಲಿ ವಿಲೇವಾರಿಯಾಗಿರುವ ಪ್ರಕರಣಗಳ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಬಾಕಿ ಕಾಮಗಾರಿ ಪೂರ್ಣಗೊಳಿಸಲು ತಾಕೀತು

ಸಾರ್ವಜನಿಕ ಆಸ್ತಿಗಳಿಗೆ ಉಂಟಾಗಿರುವ ಹಾನಿ ದುರಸ್ತಿಗೆ 2019ರಿಂದ 2022ರ ಅವಧಿಯಲ್ಲಿ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ 14.87 ಕೋಟಿ ರೂ. ವೆಚ್ಚದ ಕಾಮಗಾರಿಗಳ (ಕೊರೊನಾ ಸಮಯ ಸೇರಿದಂತೆ) ಬಗ್ಗೆಯೂ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು.

ಈ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರಲು ಕಾರಣವೇನು? 45 ದಿನಗಳಲ್ಲಿ ಮುಗಿಯಬೇಕಾದ ಕಾಮಗಾರಿಗಳು 2019ರಿಂದಲೂ ಬಾಕಿ ಉಳಿದಿವೆ ಎಂದರೆ ಏನರ್ಥ? 2019ರ ನೆರೆಯಲ್ಲಿ ರಿಪೇರಿಯಾದ ಮನೆಯನ್ನು ಅಧಿಕಾರಿಗಳು ಈಗ ದುರಸ್ತಿ ಮಾಡಿ ಕೊಡ್ತೀರಾ? ಎಂದು ಆಕ್ರೋಶ ಹೊರಹಾಕಿದ ಸಚಿವರು, ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳಿಸಬೇಕು, ಸಂಬಂಧಪಟ್ಟ ಕಾಮಗಾರಿಗೆ ಹಣ ಪಾವತಿ ಮಾಡಬೇಕು. ಕಳೆದ ವರ್ಷದ ಬಾಕಿಯನ್ನೂ ಸಂಪೂರ್ಣವಾಗಿ ವಿಲೇವಾರಿ ಮಾಡಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ | Congress Politics : ಪರಿಷತ್‌ ನಾಮನಿರ್ದೇಶನಕ್ಕೆ ದಲಿತ ಟಚ್;‌ ಸುಧಾಮ್‌ ದಾಸ್‌ ವಿರುದ್ಧ ಹೈಕಮಾಂಡ್‌ಗೆ ಪತ್ರ

ಅಧಿಕಾರಿಗಳು ಇ-ಆಫೀಸ್ ಬಳಕೆಗೆ ಮುಂದಾಗಿ

ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಹಾಗೂ ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಗಸ್ಟ್ 15ರಿಂದ ಇ-ಆಫೀಸ್ ಅನುಷ್ಠಾನಗೊಳಿಸಲಾಗಿದೆ. ಇನ್ನು ಮುಂದೆ ರಾಜ್ಯದ ಎಲ್ಲಾ ಎಸಿ-ಡಿಸಿ ಕಚೇರಿಯಿಂದ ಸರ್ಕಾರಕ್ಕೆ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ ಮಾಡಬೇಕು. ಭೌತಿಕವಾಗಿ ಪತ್ರ ಸ್ವೀಕರಿಸುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಪೈಕಿ ಪಹಣಿ ಪರಿಹಾರಕ್ಕೆ ಸೂಚನೆ

ಸಭೆಯಲ್ಲಿ ಸರ್ವೆ ಇಲಾಖೆಯ ಪ್ರಗತಿಯನ್ನೂ ಪರಿಶೀಲನೆ ನಡೆಸಲಾಗಿದ್ದು, ಬೆಂಗಳೂರು ಪ್ರಾದೇಶಿಕ ವಿಭಾಗದಲ್ಲಿ 7,271 ಪೈಕಿ ಪಹಣಿಗಳು ಬಾಕಿ ಇರುವುದನ್ನು ಸಚಿವ ಕೃಷ್ಣ ಬೈರೇಗೌಡ ತೀವ್ರವಾಗಿ ಪರಿಗಣಿಸಿದರು. ಅಲ್ಲದೆ, ಸುದೀರ್ಘ ಚರ್ಚೆಯ ನಂತರ ಮುಂದಿನ 4 ತಿಂಗಳಲ್ಲಿ ಎಲ್ಲಾ ಪೈಕಿ ಪಹಣಿಗಳನ್ನು ಪರಿಹರಿಸಲು ಸೂಚಿಸಿದರು.

ಒತ್ತುವರಿ ತಡೆಗೆ ಬೀಟ್ ವ್ಯವಸ್ಥೆ

ಬೆಂಗಳೂರು ನಗರ-ಗ್ರಾಮೀಣ ಭಾಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ಕಾರ ಜಮೀನು ಒತ್ತುವರಿ ಎಗ್ಗಿಲ್ಲದೆ ನಡೆಯುತ್ತಿದೆ. ಆದರೆ, ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ತಿಳಿಸಿದರು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ವಿಶೇಷ ಅಭಿಯಾನ ಕೈಗೊಂಡು ಎಲ್ಲಾ ಸರ್ಕಾರಿ ಜಮೀನುಗಳನ್ನೂ ಭೂಮಿ ತಂತ್ರಾಂಶದಲ್ಲಿ ಕಡ್ಡಾಯವಾಗಿ ಅಳವಡಿಸುವ ಕೆಲಸ ತುರ್ತಾಗಿ ಆಗಬೇಕು. ಆಯಾ ಭಾಗದ ಗ್ರಾಮ ಆಡಳಿತ ಅಧಿಕಾರಿ (ವಿಲೇಜ್ ಅಕೌಂಟೆಂಟ್) ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರಿ ಜಮೀನಿಗೆ ಭೇಟಿ ನೀಡಿ ಒತ್ತುವರಿಯಾಗಿಲ್ಲ ಎಂಬುದನ್ನು ಖಚಿತಪಡಿಸಬೇಕು. ಇಂತಹ ‘ಬೀಟ್’ ವ್ಯವಸ್ಥೆಯನ್ನು ಎಲ್ಲ ವಿಭಾಗದಲ್ಲೂ ಅಧಿಕಾರಿಗಳು ಪಾಲಿಸಬೇಕು ಎಂದು ತಿಳಿಸಿದರು.

ಈಗಾಗಲೇ ಬೆಂಗಳೂರು ನಗರ-ಗ್ರಾಮೀಣ ಭಾಗದಲ್ಲಿ ಒತ್ತುವಾರಿಯಾಗಿರುವ ಸರ್ಕಾರಿ ಭೂಮಿಗಳ ಪಟ್ಟಿ ಸಿದ್ದಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಟ್ಟಿ ಸಂಪೂರ್ಣವಾಗಿ ಸಿದ್ದವಾಗುತ್ತಿದ್ದಂತೆ ವಾರಂತ್ಯಗಳಲ್ಲಿ ಒತ್ತುವರಿ ತೆರವಿಗೆ ಮುಂದಾಗುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ ಎಂದು ಸಭೆಯಲ್ಲಿ ಸಚಿವರು ತಿಳಿಸಿದರು.

ಇದನ್ನೂ ಓದಿ | BBMP Election: ಬಿಬಿಎಂಪಿ ವಾರ್ಡ್‌ ಸಂಖ್ಯೆ 225 ನಿಗದಿ ಮಾಡಿ ಅಧಿಸೂಚನೆ; ಸಲಹೆ, ಆಕ್ಷೇಪಣೆ ಸಲ್ಲಿಕೆಗೆ 15 ದಿನ ಕಾಲಾವಕಾಶ

ಇದರ ಜೊತೆಗೆ ಸರ್ವೆ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡಲು 100 ಲೈಸೆನ್ಸ್ ಸರ್ವೇಯರ್, 257 ಸರ್ಕಾರಿ ಸರ್ವೇಯರ್ ಮತ್ತು 27 ಎಡಿಎಲ್ ಆರ್ ಗಳನ್ನು ನೇಮಕಾತಿ ಮಾಡಲು ಶುಕ್ರವಾರದ ಸಭೆಯಲ್ಲಿ ತೀರ್ಮಾನಿಸಲಾಯಿತು. ಬಾಕಿ ಪ್ರಕರಣಗಳಿಂದ ಜನಗಳಿಗೆ ಆಗುತ್ತಿರುವ ತೊಂದರೆಗೆ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚಿಸಲಾಯಿತು.

Exit mobile version